ಮೊದಲ ಏಕದಿನ: ಬಾಂಗ್ಲಾಗೆ ಭಾರೀ ಜಯ
ಬುಲಾವಯೊ (ಜಿಂಬಾಬ್ವೆ): ಮಧ್ಯಮ ವೇಗಿ ಜಿಯಾವುರ್ ರೆಹಮಾನ್ ಅವರ ಆಕ್ರಮಣಕಾರಿ ಬೌಲಿಂಗ್ನಿಂದಾಗಿ ಪ್ರವಾಸಿ ಬಾಂಗ್ಲಾದೇಶ, ಆತಿಥೇಯ ಜಿಂಬಾಬ್ವೆ ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 121 ರನ್ ಜಯ ಗಳಿಸಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ, ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ, 32.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 148 ರನ್ ಮಾತ್ರ ಗಳಿಸಿತು.
ಬಾಂಗ್ಲಾ ನೀಡಿದ್ದ ಮೊತ್ತವನ್ನು ಬೆನ್ನಟ್ಟಿದ ಜಿಂಬಾಬ್ವೆ, ಜಿಯಾವುರ್ ರೆಹಮಾನ್ ಅವರ ದಾಳಿಗೆ ತತ್ತರಿಸಿತು. 9 ಓವರ್ ಮಾಡಿದ ಜಿಯಾವುರ್, 30 ರನ್ ನೀಡಿ ಜಿಂಬಾಬ್ವೆಯ ಆರಂಭಿಕ ಹಾಗೂ ಅಪಾಯಕಾರಿ ಬ್ಯಾಟ್ಸ್ಮನ್ ಹ್ಯಾಮಿಲ್ಟನ್ ಮಸಕಾದ್ಸಾ ಅವರ ವಿಕೆಟ್ ಸೇರಿದಂತೆ, 5 ವಿಕೆಟ್ ಕಬಳಿಸಿದರು. ಅಂತಿಮವಾಗಿ, ಜಿಂಬಾಬ್ವೆ 148 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಟಾಸ್ ಗೆದ್ದಿದ್ದ ಜಿಂಬಾಬ್ವೆ, ಮೊದಲು ಪ್ರವಾಸಿಗರನ್ನು ಬ್ಯಾಟಿಂಗ್ಗೆ ಇಳಿಸಿತು. ಆರಂಭಿಕರಾದ ತಮೀಮ್ ಇಕ್ಬಾಲ್ (27) ಹಾಗೂ ಮಹಮ್ಮದ್ ಅಶ್ರಫುಲ್ (29), ಮೊಹಿಮುಲ್ ಹಕ್ (38), ಬಾಂಗ್ಲಾಗೆ ಉತ್ತಮ ಮೊತ್ತ ಪೇರಿಸಲು ನೆರವಾದರು. ಮಧ್ಯಮ ಕ್ರಮಾಂಕದ ನಾಸಿರ್ ಹುಸೇನ್ ಅವರ ಶತಾಕಾರ್ಧ (68), ಮಹಮ್ಮದುಲ್ಲಾ (36) ಅವರ ನೆರವಿನಿಂದ ಬಾಂಗ್ಲಾ, 269 ರನ್ಗಳ ಮೊತ್ತ ಪೇರಿಸಿತು.