ಖೇಲ್ ರತ್ನ ಪ್ರಶಸ್ತಿಗೆ ಸರ್ದಾರ್
ನವದೆಹಲಿ: ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಅವರ ಹೆಸರನ್ನು ಹಾಕಿ ಇಂಡಿಯಾ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಸರ್ದಾರ್ಸಿಂಗ್ 2012ರ ನವೆಂಬರ್ ನಂತರ ಭಾರತ ಪುರುಷರ ಹಾಕಿ ತಂಡಕ್ಕೆ ನಾಯಕರಾಗಿ ಆಯ್ಕೆಯಾದರು. ಇವರ ಮುಂದಾಳತ್ವದಲ್ಲಿ ಭಾರತ ತಂಡ 30 ವರ್ಷಗಳ ನಂತರ ಎಫ್ಎಚ್ಐ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ಸ್ ಹಂತಕ್ಕೆ ತಲುಪಿತ್ತು. ಅಲ್ಲದೆ ಕಳೆದ ವರ್ಷ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗಳಿಸಿತ್ತು. ಉಳಿದಂತೆ ಹಾಕಿ ಇಂಡಿಯಾ ಧನೀಶ್ ಮುಜ್ತಾಬಾ, ವಿ.ಆರ್ ರಘುನಾಥ್, ತುಷಾರ್ ಖಾಂಡೇಕರ್ ಮತ್ತು ಭರತ್ ಚೆಟ್ರಿ ಅವರ ಹೆಸರನ್ನು ಅರ್ಜುನ್ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಮಹಿಳಾ ವಿಭಾಗದಿಂದ ಅರ್ಜುನ್ ಪ್ರಶಸ್ತಿಗೆ ರೀತು ರಾಣಿ, ಸಾಬಾ ಅಂಜುಮ್ ಮತ್ತು ಜಾಯ್ದೀಪ್ ಕೌರ್ ಹೆಸರನ್ನು ಶಿಫಾರಸ್ಸು ಮಾಡಿದೆ.