ವಿನಯ್ ಕುಮಾರ್ಗೆ ಸ್ಥಾನ
ಮುಂಬೈ: ಪ್ರಸಕ್ತ ಐಪಿಎಲ್ನಲ್ಲಿ ಆಕರ್ಷಕ ಪ್ರದರ್ಶನ ತೋರುತ್ತಿರುವ ಕರ್ನಾಟಕದ ವೇಗದ ಬೌಲರ್ ಆರ್. ವಿನಯ್ ಕುಮಾರ್, ಇಂಗ್ಲೆಂಡ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಶನಿವಾರ ಪ್ರಕಟಿಸಲಾದ 15 ಸದಸ್ಯರ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿನಯ್ ಅವರೊಂದಿಗೆ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್, ಆಲ್ರೌಂಡರ್ ಇರ್ಫಾನ್ ಪಠಾಣ್, ವೇಗಿ ಉಮೇಶ್ ಯಾದವ್ ಹಾಗೂ ಸ್ಪಿನ್ನರ್ ಅಮಿತ್ ಮಿಶ್ರಾ ತಂಡಕ್ಕೆ ಮರಳಿದ್ದಾರೆ.
ಸಂದೀಪ್ ಪಾಟೀಲ್ ನಾಯಕತ್ವದ ಆಯ್ಕೆ ಸಮಿತಿ ಗಂಭೀರ್ ಸ್ಥಾನದಲ್ಲಿ ಮುರಳಿ ವಿಜಯ್ಗೆ ಸ್ಥಾನ ನೀಡಿರುವುದು ಅಚ್ಚರಿ ಮೂಡಿಸಿದೆ. ಫಾರ್ಮ್ನಲ್ಲಿ ಇಲ್ಲದ ವಿಜಯ್ ಅವರನ್ನು ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡುವ 11 ಆಟಗಾರರ ಪಟ್ಟಿಯಿಂದಲೂ ಕೈಬಿಡಲಾಗಿದೆ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡದಿಂದ ವೇಗಿ ಅಶೋಕ್ ದಿಂಡಾ ಹಾಗೂ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಅವರನ್ನು ಸಹ ಕೈಬಿಡಲಾಗಿದೆ.
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸ್ಪಿನ್ನರ್ ಅಮಿತ್ ಮಿಶ್ರಾ ಅವರೊಂದಿಗೆ ರವಿಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ತಂಡಲ್ಲಿ ಸ್ಥಾನ ಪಡೆದಿರುವ ಇತರ ಇಬ್ಬರು ಸ್ಪಿನ್ನರ್ಗಳಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿ ದಾಖಲೆ 187 ರನ್ ಗಳಿಸಿದ ಶಿಖರ್ ಧವನ್ ನಿರೀಕ್ಷೆಯಂತೆ ಆಯ್ಕೆ ಸಮಿತಿ ಅವಕಾಶ ನೀಡಿದೆ.
ಆದರೆ, ಐಪಿಎಲ್ನಲ್ಲಿ ಮೂರು ಅರ್ಧ ಶತಕಗಳೊಂದಿಗೆ 320 ರನ್ ಗಳಿಸಿರುವ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. 2015ರಲ್ಲಿ ನಡೆಯಲಿರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡಿರುವ ಆಯ್ಕೆ ಸಮಿತಿ ಯುವ ಆರಂಭಿಕ ಆಟಗಾರರತ್ತ ಗಮನಹರಿಸಿದೆ.
ಇನ್ನು ನಿರೀಕ್ಷೆಯಂತೆ ಪ್ರಸಕ್ತ ಐಪಿಎಲ್ನಲ್ಲಿ ಫಾರ್ಮ್ ಕಳೆದುಕೊಂಡಿರುವ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಪುಣೆ ವಾರಿಯರ್ಸ್ ಪರ 8 ಪಂದ್ಯಗಳನ್ನಾಡಿರುವ ಯುವರಾಜ್ ಕೇವಲ 156 ರನ್ ಗಳಿಸಿದ್ದು, ಒಂದು ಅರ್ಧ ಶತಕವನ್ನೂ ದಾಖಲಿಸಿಲ್ಲ.
ಇಂಗ್ಲೆಂಡ್ ಪಿಚ್ಗಳು ವೇಗಿಗಳಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಇಶಾಂತ್ ಶರ್ಮಾ ಸೇರಿದಂತೆ ಐದು ವೇಗದ ಬೌಲರ್ಗಳಿಗೆ ಸ್ಥಾನ ಕಲ್ಪಿಸಿದೆ. ಅಲ್ಲದೆ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮಾ, ವಿಜಯ್ ಹಾಗೂ ಧವನ್ ಸೇರಿದಂತೆ ಬ್ಯಾಟಿಂಗ್ ಕ್ರಮಾಂಕ ಬಲಿಷ್ಠವಾಗಿದ್ದು, ಧೋನಿ ಮತ್ತು ಕಾರ್ತಿಕ್ ಇಬ್ಬರು ವಿಕೆಟ್ ಕೀಪರ್ಗಳಿದ್ದಾರೆ.
ಜೂನ್ 6ರಿಂದ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.
ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ಮುರಳಿ ವಿಜಯ್, ರೋಹಿತ್ ಶರ್ಮಾ, ರವಿಂದ್ರ ಜಡೇಜಾ, ಆರ್. ಅಶ್ವಿನ್, ಇರ್ಫಾನ್ ಪಠಾಣ್, ಉಮೇಶ್ ಯಾದವ್, ಭುವನೇಶ್ವರ ಕುಮಾರ್, ಇಶಾಂತ್ ಶರ್ಮಾ, ಅಮಿತ್ ಮಿಶ್ರಾ ಹಾಗೂ ವಿನಯ್ ಕುಮಾರ್.