ಸಿಂಧು ಮುಡಿಗೆ ಮುಕುಟ
ಭಾರತದ ಉದಯೋನ್ಮುಖ...
ಕೌಲಾಲಂಪುರ: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸಿಂಧುಗೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೊಚ್ಚಲ ಪ್ರಶಸ್ತಿಯಾಗಿದೆ.
ತೀವ್ರ ಹಣಾಹಣಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಸಿಂಧು ಅವರು ಸಿಂಗಾಪುರದ ಜುವಾನ ಗು ಅವರನ್ನು 21-17, 17-21, 21-19 ಸೆಟ್ಗಳಿಂದ ಪರಾಭವಗೊಳಿಸಿದರು. ಅಗ್ರ ಶ್ರೇಯಾಂಕ ಪಡೆದಿದ್ದ ಸಿಂಧು ಪ್ರಶಸ್ತಿ ಸುತ್ತಿನಲ್ಲಿ ಒಂದುಗಂಟೆ 11 ನಿಮಿಷಗಳ ಕಾಲ ಹೋರಾಟ ನಡೆಸಿದರು.
ಫಾರ್ಮ್ನಲ್ಲಿರುವ ಸಿಂಧು ಪಂದ್ಯದಲ್ಲಿ ಸ್ಮ್ಯಾಷ್ಗಳ ಮೂಲಕ ಜುವಾನಗಿಂತ ಶ್ರೇಷ್ಠ ಪ್ರದರ್ಶನ ನೀಡಿದರು.
ವಿಶ್ವದ ನಂಬರ್ 13ನೇ ಬ್ಯಾಡ್ಮಿಂಟನ್ ತಾರೆ ಪಂದ್ಯದಲ್ಲಿ 17 ಸ್ಮ್ಯಾಷ್ಗಳನ್ನು ಮಾಡಿದರೆ, ಎದುರಾಳಿ ಕೇವಲ 9 ಸ್ಮ್ಯಾಷ್ಗಳನ್ನು ಹೊಡೆದರು.ಮೊದಲ ಸೆಟ್ನಲ್ಲಿ ಸಿಂಧು 5-0 ಅಂತರದಿಂದ ಮುನ್ನಡೆ ಕಂಡುಕೊಂಡಿದ್ದರು.
ಆದರೆ, ನಂತರ ಬಿರುಸಿನ ಹೋರಾಟ ನಡೆಸಿದ ವಿಶ್ವದ 27ನೇ ರ್ಯಾಂಕಿಂಗ್ ಆಟಗಾರ್ತಿ ಜುವಾನ 7-7 ಅಂತರದಿಂದ ಸಮಬಲ ಸಾಧಿಸಿದರು. ನಂತರ 10-7 ಅಂತರದಿಂದ ಮುನ್ನಡೆ ಕಂಡುಕೊಂಡರು.
ನಂತರ ತಿರುಗಿಬಿದ್ದ ಭಾರತದ ಯುವ ಆಟಗಾರ್ತಿ ಸಿಂಧು, ಸತತ ಆರು ಅಂಕಗಳನ್ನು ಗಳಿಸುವ ಮೂಲಕ 13-10 ಅಂತರದಿಂದ ಮುನ್ನಡೆ ಕಂಡುಕೊಂಡರು. ಅಂತಿಮವಾಗಿ 21-17 ಅಂತರದಿಂದ ಜಯ ತಮ್ಮದಾಗಿಸಿಕೊಂಡರು.
ಆದರೆ, ದ್ವಿತೀಯ ಸೆಟ್ನಲ್ಲಿ ಜಿಗುಟಿನ ಪ್ರದರ್ಶನ ನೀಡಿದ ಜುವಾನ ಸಮಬಲದ ಹೋರಾಟದೊಂದಿಗೆ ಸಾಗಿದರು. ಹೀಗಾಗಿ ಒಂದು ಹಂತದಲ್ಲಿ ಇಬ್ಬರೂ 15-15 ಅಂತರದಿಂದ ಸಮಬಲ ಸಾಧಿಸಿದ್ದರು. ಅಂತಿಮವಾಗಿ ಮೇಲುಗೈ ಸಾಧಿಸುವಲ್ಲಿ ಸಿಂಗಾಪುರದ ಆಟಗಾರ್ತಿ ಯಶಸ್ವಿಯಾಗಿದ್ದರು.
ಮೂರನೇ ಮತ್ತು ನಿರ್ಣಾಯಕ ಸೆಟ್ ಸಹ ಆರಂಭದಲ್ಲಿ ಸಮಬಲದಿಂದಲೇ ಸಾಗಿತ್ತು. ಆರಂಭದಲ್ಲಿ ಇಬ್ಬರೂ 5-5 ಅಂತರ ಗಳಿಸಿದ್ದರು. ನಂತರ ಬಿರುಸಿನ ಹೋರಾಟಕ್ಕೆ ಮುಂದಾದ ಗು 13-7 ಅಂತರದಿಂದ ಮುನ್ನಡೆ ಕಂಡುಕೊಂಡಾಗ, ಸಿಂಧು ಸೋಲು ಕಟ್ಟಿಟ್ಟ ಬುತ್ತಿ ಎಂದೇ ಭಾವಿಸಲಾಗಿತ್ತು.
ಆದರೆ, ಗು 15-10ರಿಂದ ಮುನ್ನಡೆ ಸಾಧಿಸುತ್ತಿದ್ದಂತೆ ತಿರುಗಿಬಿದ್ದ ಸಿಂಧು 14-15 ಅಂತರವನ್ನು ಕಡಿಮೆ ಮಾಡಿಕೊಂಡರು. ನಂತರ ಇಬ್ಬರೂ ಆಟಗಾರ್ತಿಯರು ತೀವ್ರ ಪೈಪೋಟಿ ನಡೆಸಿದ ಫಲವಾಗಿ, ಪಂದ್ಯ 18-18ಅಂತರದಿಂದ ಸಮಬಲಗೊಂಡಿತು. ಆಗ ಇನ್ನೆರಡು ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದ ಸಿಂಧು, ತಮ್ಮ ಚೊಚ್ಚಲ ಗ್ರ್ಯಾಂಡ್ ಪ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಸಿಂಧು ಮೊದಲ ಬಾರಿಗೆ ಗ್ರ್ಯಾಂಡ್ ಪ್ರೀ ಪ್ರಶಸ್ತಿ ಮುಡಿಗೇರಿಸಿಕೊಳ್ಳುವುದರೊಂದಿಗೆ, ಭಾರತ ಬ್ಯಾಡ್ಮಿಂಟನ್ನ ಮಹಿಳಾ ವಿಭಾಗದಲ್ಲಿ ಮತ್ತೊಬ್ಬ ಭರವಸೆ ತಾರೆ ಹುಟ್ಟಿಕೊಂಡಂತಾಗಿದೆ. ಈ ಮುನ್ನ ಸೈನಾ ನೆಹ್ವಾಲ್ ಭಾರತ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮಿಂಚುತ್ತಿದ್ದರು.
ಈಗ ಸೈನಾ ನೆಹ್ವಾಲ್ ಜತೆ ಸಿಂಧು ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು, ಬ್ಯಾಡ್ಮಿಂಟನ್ನಲ್ಲಿ ಪಾರಮ್ಯ ಮೆರೆಯುತ್ತಿರುವ ಚೀನಾ ಆಟಗಾರ್ತಿಯರಿಗೆ ಭಾರತ ಸೆಡ್ಡು ಹೊಡೆಯಬಹುದಾಗಿದೆ.