ಏಕಾಗ್ರತೆಗಾಗಿ ಹಾಡು ಹಾಡುವ ಬ್ಯಾಟ್ಸ್ಮನ್!
ನವದೆಹಲಿ: ಕ್ರಿಕೆಟ್ ಆಡ್ತಾ ಇರುವಾಗ ಬ್ಯಾಟ್ಸ್ಮನ್ ಒಬ್ಬ ಪಿಚ್ನಲ್ಲಿ ನಿಂತು ತನ್ನೊಳಗೇ ಹಾಡು ಗುನುಗ್ತಾ ಇದ್ರೆ ಏನಾಗುತ್ತೆ ? ಅದರಲ್ಲೂ, ಅತ್ತ ಬೌಲರ್ ಚೆಂಡು ಎಸೆದಾಗಲೂ ಈತ ಹಾಡನ್ನೇ ಗುನುಗುತ್ತಾ ಇದ್ರೆ.... ಏನಾಗುತ್ತೆ ? ಎಂಬ ಪ್ರಶ್ನೆಗೆ, 'ಇನ್ನೇನಾಗುತ್ತೆ... ಔಟ್ ಆಗ್ತಾನೆ' ಅನ್ನೋದು ನಿಮ್ಮ ಉತ್ತರವಾಗಬಹುದು. ಆದರೆ, ಇಲ್ಲೊಬ್ಬ ಬ್ಯಾಟ್ಸ್ಮನ್ ಇದ್ದಾನೆ. ಆತ ಬ್ಯಾಟಿಂಗ್ಗೆ ಬಂದು ನಿಂತನೆಂದರೆ, ಆತನ ಮನಸ್ಸು ಎಲ್ಲೆಲ್ಲೋ ಚಂಚಲವಾಗುತ್ತೆ. ಆದರೆ, ಆತ ಆಟದ ಮೇಲೆ ಏಕಾಗ್ರತೆ ಸಾಧಿಸಲು ಆತ ತನ್ನೊಳಗೆ ಹಾಡು ಹಾಡಿಕೊಳ್ಳುತ್ತಾನೆ... ಅಷ್ಟೇ ಅಲ್ಲ. ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸುತ್ತಾನೆ.
'ಯಾರು ಈತ ?' ಅಂತೀರಾ... ಆತ, ಮತ್ಯಾರೂ ಅಲ್ಲ... ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ !
ಹೌದು. ಮಹೇಂದ್ರ ಸಿಂಗ್ ಧೋನಿ ಅವರು ಪಿಚ್ನಲ್ಲಿ ನಿಂತಾಗ ಹಾಡಾಡ್ಕೊತಾರಂತೆ. ಅದರಿಂದ ಅವರ ಏಕಾಗ್ರತೆ ಸಾಧಿಸಲು ಸಹಾಯವಾಗುತ್ತದಂತೆ.
ಇದನ್ನು ನಾವು ಹೇಳ್ತಾ ಇಲ್ಲ. ಸಾಕ್ಷಾತ್ ಧೋನಿಯವರೇ ಅದನ್ನು ಹೇಳಿಕೊಂಡಿದ್ದಾರೆ. ಹೌದು ಸ್ವಾಮಿ. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ವ್ಯವಸ್ಥಾಪಕ ರುಡಿ ವೆಬ್ಸ್ಟರ್ ಬರೆದಿರುವ 'ಥಿಂಕ್ ಲೈಕ್ ಎ ಚಾಂಪಿಯನ್'ನಲ್ಲಿ ಅವರು ರುಡಿ ಅವರು ಧೋನಿ ಬಗ್ಗೆ ಹೇಳುತ್ತಾ ಹೀಗೆ ಹೇಳಿದ್ದಾರೆ. ತಮ್ಮ ಏಕಾಗ್ರತೆಯ ಬಗ್ಗೆ ಧೋನಿಯವರೇ ರುಡಿ ಅವರಲ್ಲಿ ಹೀಗೆ ಹೇಳಿಕೊಂಡಿದ್ದನ್ನು ಆ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ.
2006-07ರಲ್ಲಿ ಟೀಂ ಇಂಡಿಯಾಗೆ ರುಡಿ ಅವರು ಮನಃಶಾಸ್ತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದರು. ಹಾಗಾಗಿ, ಅವರಿಗೆ ಧೋನಿ ಭಾರತ ತಂಡದ ಆಟಗಾರರ ಹಲವಾರು ವಿಷಯಗಳು ಅವರಿಗೆ ಗೊತ್ತು. ಅದನ್ನೇ ಅವರು ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
ಧೋನಿ ಹಾಡು ಹೇಳುವುದಷ್ಟೇ ಅಲ್ಲ... ಮತ್ತೆ ಕೆಲವು ವಿಷಯಗಳನ್ನು ಅವರು ಉಲ್ಲೇಖಿಸಿದ್ದು, ಅವರಲ್ಲಿ ಕೆಲವು ಹೀಗಿವೆ. ಧೋನಿ ಅವರು ವೃತ್ತಿಪರ ಕ್ರಿಕೆಟ್ನಿಂದ ನಿವೃತ್ತಿಯಾದ ನಂತರ ಭಾರತೀಯ ಸೇನೆಗೆ ಸೇರಿಕೊಳ್ಳಲಿದ್ದಾರಂತೆ. ಅಲ್ಲದೇ, ತಮ್ಮ ಊರಾದ ರಾಂಚಿಯಲ್ಲಿ ಕ್ರೀಡಾ ಅಕಾಡೆಮಿಯೊಂದನ್ನು ಸ್ಥಾಪಿಸುತ್ತಾರಂತೆ. ಇಂಥಾ ಅದೆಷ್ಟೋ ವಿಷಯಗಳನ್ನು ರುಡಿ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.
ಅಂದಹಾಗೆ, ಈ ಪುಸ್ತಕದಲ್ಲಿ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಬಗ್ಗೆಯೂ ಕೆಲವು ಆಸಕ್ತಿದಾಯಕ ವಿಷಯಗಳಿವೆ ಎಂದು ಮೂಲಗಳು ಹೇಳಿವೆ.