ಕೊನೆ ಕ್ಷಣದ ರೋಚಕತೆ...
ಬೆಂಗಳೂರು: ಕ್ರಿಕೆಟ್ ಪಂದ್ಯವೊಂದು ಅಂತಿಮ ಎಸೆತದವರೆಗೆ ಸಮಬಲದ ಹೋರಾಟದಿಂದ ಕೂಡಿದಾಗ ಮಾತ್ರ ಕುತೂಹಲ ಮತ್ತು ರೋಚಕತೆಯೊಂದಿಗೆ ನೋಡುತ್ತಿರುವ ಅಭಿಮಾನಿಗಳ ಹೃದಯ ಬಡಿತ ಏರಿಳಿತಗೊಳ್ಳಲು ಸಾಧ್ಯ.
ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ಗಿಂತ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸುವ ಚುಟುಕು ಮಾದರಿಯ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಫಲಿತಾಂಶ ಯಾವ ತಂಡಕ್ಕೆ ಬೇಕಾದರೂ ದೊರಕಬಹುದು ಎಂಬಂತಿದ್ದರಂತೂ, ಪಂದ್ಯಗಳು ಅಂತ್ಯದಲ್ಲಿ ಅಭಿಮಾನಿ ದೇವರುಗಳಿಗೆ ರೋಚಕತೆಯ ರಸದೌತಣವನ್ನೇ ಉಣಬಡಿಸುತ್ತವೆ. ಹೀಗೆ ರಸದೌತಣ ಬಡಿಸುವ ಚುಟುಕು ಕ್ರಿಕೆಟ್ ಪಂದ್ಯಗಳು ಅಂತಿಮ ಎಸೆತದವರೆಗೂ ಕುತೂಹಲ ಕಾಯ್ದುಕೊಂಡರೆ, ಅದು ಪ್ರೇಕ್ಷಕರ ಪಾಲಿಗೆ ರೋಚಕತೆಯ ಹಬ್ಬವೇ ಸರಿ.
ಪ್ರಸಕ್ತ ನಡೆಯುತ್ತಿರುವ ಐಪಿಎಲ್ನ 6ನೇ ಆವೃತ್ತಿಯಲ್ಲಿ ಹಲವಾರು ಪಂದ್ಯಗಳು ಇಂತಹ ಘಟನೆಗಳಿಗೆ ಸಾಕ್ಷಿಯಾಗಿವೆ. ಅದರಲ್ಲಿ ಟೈ ಆದ ಪಂದ್ಯಗಳನ್ನಂತೂ ಮರೆಯಲು ಸಾಧ್ಯವೇ ಇಲ್ಲ. ಹೈದರಾಬಾದ್ನಲ್ಲಿ ಸನ್ರೈಸರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆದ 7ನೇ ಪಂದ್ಯ, ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಡೆಲ್ಲಿ ಡೇರ್ಡೆವಿಲ್ಸ್ ನಡುವೆ ನಡೆದ 21ನೇ ಪಂದ್ಯ ಟೈನಲ್ಲಿ ಅಂತ್ಯಗೊಂಡ ಪಂದ್ಯಗಳು ಗ್ಯಾಲರಿಯಲ್ಲಿದ್ದ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದವು.
ಅಲ್ಲದೆ, ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 2 ರನ್ಗಳಿಂದ ಆರ್ಸಿಬಿ ಸೋಲನುಭವಿಸಿದ 2ನೇ ಪಂದ್ಯ, ಅಂತಿಮ ಎಸೆತದಲ್ಲಿ ಆರ್ಪಿ ಸಿಂಗ್ ನೋ ಬಾಲ್ ಎಸೆದ ಕಾರಣ ಚೆನ್ನೈ ವಿರುದ್ಧ ಆರ್ಸಿಬಿ 4 ವಿಕೆಟ್ಗಳ ಅಂತರದಿಂದ ಸೋತ 16ನೇ ಪಂದ್ಯ. ರಾಜಸ್ಥಾನ ರಾಯಲ್ಸ್ ತಂಡ 5 ರನ್ಗಳ ಅಂತರದಿಂದ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ಜಯ ಸಾಧಿಸಿದ 4ನೇ ಪಂದ್ಯ ಹೆಚ್ಚು ಕುತೂಹಲ ಮೂಡಿಸಿದ ಪಂದ್ಯಗಳಿಗೆ ಉದಾಹರಣೆಯಾಗಿವೆ.
ಏರುವ ಹೃದಯ ಬಡಿತ: ಪಂದ್ಯವೊಂದು ನಡೆಯುತ್ತಿದ್ದರೆ ಅಂತಿಮ ಕ್ಷಣದಲ್ಲಿ ಉಭಯ ತಂಡಗಳಿಗೂ ಗೆಲ್ಲುವ ಅವಕಾಶ ಇದ್ದಾಗ, ಯಾವ ತಂಡಕ್ಕೆ ಹಿನ್ನಡೆಯಾಗುತ್ತದೆ. ಆ ತಂಡದ ಅಭಿಮಾನಿಗಳ ಹೃದಯ ಬಡಿತ ಏರುತ್ತದೆ. ಎದುರಾಳಿ ತಂಡದ ಬೆಂಬಲಿಗರ ಜಯಘೋಷಗಳು ಈ ಹೃದಯ ಬಡಿತವನ್ನು ಇನ್ನಷ್ಟು ಏರಿಸುತ್ತವೆ. ಇಂತಹ ಸದರ್ಭದಲ್ಲಿ ಅಭಿಮಾನಿಗಳ ಹೃದಯ ಬಡಿತ ಯಾವ ಮಟ್ಟಕ್ಕೇರುತ್ತದೆ ಎಂದರೆ, ಎಷ್ಟೋ ಬಾರಿ ಅಭಿಮಾನಿಗಳು ಹೃದಯಾಘಾತಕ್ಕೊಳಗಾಗಿದ್ದಾರೆ. ಹೃದಯಾಘಾತದೊಂದಿಗೆ ಸಾವೀಗಿಡಾದ ಘಟನೆಗಳು ಸಂಭವಿಸಿವೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲೇ ಆರ್ಸಿಬಿ ಸೋತ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಆಸ್ಪತ್ರೆ ಸೇರಿ ಸಾವಿಗೀಡಾಗಿದ್ದರು.
ಮುಗಿಲು ಮುಟ್ಟುವ ಘೋಷಣೆಗಳು: ಪಂದ್ಯ ಸಮಬಲದಿಂದ ಕೂಡಿದಾಗ ಪ್ರತಿಯೊಂದು ಎಸೆತಗಳೂ ತೀವ್ರ ಮಹತ್ವ ಪಡೆದುಕೊಂಡಿರುತ್ತವೆ. ಒಂದು ಎಸೆತ ಯಾವ ತಂಡಕ್ಕೆ ಲಾಭವಾಗುತ್ತದೆ ಆ ತಂಡದ ಅಭಿಮಾನಿಗಳ ಘೋಷಣೆಗಳ ಅಬ್ಬರ ಮುಗಿಲು ಮುಟ್ಟಿರುತ್ತದೆ. ಹೀಗೆ ಯಾವ ತಂಡದ ಪರ ಫಲಿತಾಂಶ ವಾಲುತ್ತದೆಯೋ ತಂಡದ ಅಭಿಮಾನಿಗಳು ಪಂದ್ಯದ ಅಂತ್ಯದವರೆಗೂ ಘೋಷಣೆಗಳನ್ನು ಕೂಗುತ್ತಲೇ ಇರುತ್ತಾರೆ.
ಕಾಡುವ ಸೋಲಿನ ಬೇಸರ: ಅಂತ್ಯದಲ್ಲಿ ಅದೃಷ್ಟ ಕೈಕೊಟ್ಟ ತಂಡ ಸೋಲನುಭವಿಸಿದಾಗ ಅದುವರೆಗೂ ಬೆಂಬಲಿಸಿದ್ದ ಅಭಿಮಾನಿಗಳು ಕೈ ಕೈ ಹಿಸುಕಿಕೊಂಡು ಬೇಸರ ವ್ಯಕ್ತಪಡಿಸಿತ್ತಾರೆ. ಛೇ ಆತ ನೋ ಬಾಲ್ ಎಸೆದಿದ್ದೇ ತಂಡ ಸೋಲಲು ಕಾರಣವಾಯಿತು. ಆತ ಸರಿಯಾದ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಈತನ ಬೌಲಿಂಗ್ ಸರಿ ಇರಲಿಲ್ಲ. ಎಂಬ ಗೊಣಗಾಟಗಳೊಂದಿಗೆ ಮೂಗು ಮುರಿಯುತ್ತ ಮನೆಗೆ ತೆರಳುತ್ತಾರೆ ಅಭಿಮಾನಿಗಳು.
- ಮಲ್ಲಿಕಾರ್ಜುನ ಕರಿಯಪ್ಪನವರ