ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗೆಲ್ಲಲೇಬೇಕಿದೆ ಗಿಲ್ಲಿ ಪಡೆ

Mainashree
Updated On : 6 May 2013, 12:10 pm

ಮೊಹಾಲಿ: ಪ್ಲೇ ಆಫ್ ಹಂತ ಪ್ರವೇಶಿಸಬೇಕಾದರೆ ಬಾಕಿ ಉಳಿದಿರುವ ಎಲ್ಲ ಪಂದ್ಯಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಸೋಮವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ಪಂಜಾಬ್ ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಜಯ ಸಾಧಿಸಿದೆ. ಹೀಗಾಗಿ ಉಳಿದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸುವ ಅನಿವಾರ್ಯತೆ ಉಂಟಾಗಿದೆ. ಒಂದು ವೇಳೆ ಪಂಜಾಬ್ ಈ ಪಂದ್ಯದಲ್ಲಿ ಸೋತರೆ, ಪ್ಲೇ ಆಫ್ ಹಂತದ ಆಸೆಯನ್ನು ಕೈಬಿಡಬೇಕಾಗುತ್ತದೆ.
ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲ್ ಮತ್ತು ನಾಯಕ ವಿರಾಟ್ ಕೊಹ್ಲಿಯಂತಹ ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಆರ್‌ಸಿಬಿ ವಿರುದ್ಧ ಪಂಜಾಬ್ ಮತ್ತೊಮ್ಮೆ ಸತ್ವಪರೀಕ್ಷೆಯನ್ನು ಎದುರಿಸಲಿದೆ.
ಇನ್ನು ಆಡಿರುವ 11 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿರುವ ಆರ್‌ಸಿಬಿ ಈ ಪಂದ್ಯದಲ್ಲಿ ಗೆಲ್ಲುವ ಫೇವರಿಟ್.
ಏಪ್ರಿಲ್ 23ರಂದು ಪುಣೆ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 66 ಎಸೆತಗಳಲ್ಲಿ 175 ರನ್ ಬಾರಿಸಿದ್ದ ಜಮೈಕಾದ ಕ್ರಿಸ್ ಗೇಯ್ಲ್ ಪಂಜಾಬ್‌ಗೆ ಆತಂಕವಾಗಿ ಪರಿಣಮಿಸಿದ್ದಾರೆ.
ಕೊಹ್ಲಿ ಅವರೊಂದಿಗೆ ಎಬಿ ಡಿವಿಲಿಯರ್ಸ್ ಸಹ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ ಬೆಂಗಳೂರು ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಯುವ ಮತ್ತು ಅನುಭವಿಗಳಿಂದ ಕೂಡಿರುವ ವಿನಯ್ ಕುಮಾರ್ ಮತ್ತು ಆರ್.ಪಿ ಸಿಂಗ್ ಎಲ್ಲಾ ಪಂದ್ಯಗಳಲ್ಲೂ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಮುರಳಿ ಕಾರ್ತಿಕ್ ಮತ್ತು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಆರ್‌ಸಿಬಿಗೆ ನೆರವಾಗುತ್ತಿದ್ದಾರೆ.
ತವರಿನಲ್ಲಿ ನಡೆದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿರುವ ಆರ್‌ಸಿಬಿ ಹೊರಗೆ ನಡೆದ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದೆ. ಆದರೆ, ಕಳೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ 17 ರನ್‌ಗಳ ಅಂತರದಿಂದ ಜಯ ಸಾಧಿಸಿತ್ತು.
ಪಂಜಾಬ್ ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ 15 ರನ್‌ಗಳ ಅಂತರದಿಂದ ಪರಾಭವ ಹೊಂದಿತ್ತು. ಅದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲನುಭವಿಸಿತ್ತು. ಕೆಲ ಪಂದ್ಯಗಳಲ್ಲಿ ಆಕರ್ಷಕ ಪ್ರದರ್ಶನ ತೋರಿರುವ ಪಂಜಾಬ್, ಬಲಿಷ್ಠ ಆರ್‌ಸಿಬಿ ವಿರುದ್ಧ ಹೇಗೆ ಹೋರಾಟ ನಡೆಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕಳಪೆ ಪ್ರದರ್ಶನ ತೋರುತ್ತಿರುವ ನಾಯಕ ಗಿಲ್‌ಕ್ರಿಸ್ಟ್ ಹೊರಗುಳಿದಿದ್ದು, ಡೇವಿಡ್ ಹಸ್ಸಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಶ್ಯಾನ್ ಮಾರ್ಷ್, ಮಂದೀಪ್ ಸಿಂಗ್ ಹಾಗೂ ಡೇವಿಡ್ ಮಿಲ್ಲರ್ ಪಂಜಾಬ್ ತಂಡದ ಪರ ಬ್ಯಾಟಿಂಗ್ ನಿರ್ವಹಿಸಲಿದ್ದಾರೆ.
ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಜರ್ ಮೆಹಮೂದ್ ಯಾವುದೇ ಸಮಯದಲ್ಲಿ ಸಿಡಿದೇಳಬಲ್ಲ ಆಟಗಾರ ಎನಿಸಿದ್ದಾರೆ. ಇನ್ನು ಬೌಲರ್‌ಗಳಾದ ಪಿಯೂಶ್ ಚಾವ್ಲಾ ಮತ್ತು ಪ್ರವೀಣ್ ಕುಮಾರ್ ಬ್ಯಾಟಿಂಗ್‌ನೊಂದಿಗೆ ಮಿಂಚಬಲ್ಲವರಾಗಿದ್ದಾರೆ.
ಪ್ರವೀಣ್ ಕುಮಾರ್ ಬೌಲಿಂಗ್‌ನಲ್ಲಿ ಉತ್ತಮ ಎಕಾನಮಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಪರ್ವಿಂದರ್ ಆವಾನಾ ಉತ್ತಮ ಹೋರಾಟ ನಡೆಸಬೇಕಾದ ಅಗತ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement