'200 ಟೆಸ್ಟ್ ಆಡುವ ಸಾಮರ್ಥ್ಯ ಸಚಿನ್ಗಿದೆ'
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ರಂಗದಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರಿಗೆ 200 ಟೆಸ್ಟ್ ಪಂದ್ಯಗಳನ್ನು ಆಡುವ ಛಾತಿ ಹಾಗೂ ಸಾಮರ್ಥ್ಯವಿದೆ ಎಂದು ಆಸೀಸ್ನ ಮಾಜಿ ಆಟಗಾರ ಬ್ರೆಟ್ ಲೀ ತಿಳಿಸಿದ್ದಾರೆ. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಕ್ಕಾಗಿ ಅಭ್ಯಾಸದಲ್ಲಿ ನಿರತರಾಗಿದ್ದ ಅವರು,ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು. 'ಸಚಿನ್ ಅವರಲ್ಲಿನ ಅಗಾಧ ಪ್ರತಿಭೆಗೆ 200 ಟೆಸ್ಟ್ ದಾಖಲೆ ಮತ್ತೊಂದು ಮೆರುಗು ತರಲಿದೆ. ಆ ಶುಭದಿನವನ್ನು ಬೇರೆಲ್ಲಾ ಅವರ ಅಭಿಮಾನಿಗಳ ಹಾಗೆ ನಾನೂ ಕಾತುರದಿಂದ ನಿರೀಕ್ಷಿಸುತ್ತಿದ್ದೇನೆ' ಎಂದು ತಿಳಿಸಿದರು.