ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಂದು ರಾಜಸ್ಥಾನ ರಾಯಲ್ಸ್, ಡೇರ್‌ಡೆವಿಲ್ಸ್ ಸಮರ

Mainashree
Updated On : 7 May 2013, 12:51 pm

ಜೈಪುರ: 'ಪ್ಲೇ ಆಫ್ ಹಂತ'ಕ್ಕೆ ಮೂರೇ ಗೇಣು ಎನ್ನುವಂತಿರುವ ರಾಜಸ್ಥಾನ ರಾಯಲ್ಸ್ ತಂಡ, ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಎದುರಿಸಲಿದೆ.
ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 6 ವಿಕೆಟ್‌ಗಳ ಸೋಲು ಅನುಭವಿಸಿರುವ ಡೆಲ್ಲಿ, ಅಂದು ಕೇವಲ 80 ರನ್‌ಗಳಿಗೆ ಆಲೌಟ್ ಆಗಿತ್ತು. ಪ್ರಸಕ್ತ ಐಪಿಎಲ್‌ನಲ್ಲಿ ಇದು ತಂಡವೊಂದು ದಾಖಲಿಸಿರುವ ಎರಡನೇ ಕನಿಷ್ಟ ಮೊತ್ತ.
ಕಳೆದೆರಡು ವಾರಗಳಲ್ಲಿ ಎರಡು ಜಯಗಳಿಂದ ಆತ್ಮವಿಶ್ವಾಸವನ್ನು ಮರಳಿ ಪಡೆದಿದ್ದ ಡೆಲ್ಲಿ ತಂಡ, ಪುನಃ ಫಾರ್ಮ್‌ಗೆ ಮರಳಿ, ಉಳಿದ ಪಂದ್ಯಗಳನ್ನು ಗೆದ್ದು ಪ್ಲೇ-ಆಫ್ ಹಂತಕ್ಕೆ ಲಗ್ಗೆಯಿಡುವ ಸೂಚನೆ ನೀಡಿತ್ತು. ಆದರೆ, ಪುನಃ ಸೋಲಿನ ಸುಳಿಗೆ ಸಿಲುಕುವ ಮೂಲಕ, ಈ ಬಾರಿ ಲೀಗ್ ಹಂತಕ್ಕೇ ತೃಪ್ತಿಪಡಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿದೆ. ಆದರೂ, ಲೀಗ್ ಹಂತದ ಉಳಿದ ಪಂದ್ಯಗಳಲ್ಲಿ ಜಯ ಗಳಿಸಿ, ಈ ಬಾರಿಯ ಐಪಿಎಲ್‌ಗೆ ಒಂದು ನೆಮ್ಮದಿಯ ಗುಡ್‌ಬೈ ಹೇಳಬಹುದು. ಇದುವರೆಗೂ ಆಡಿರುವ 11 ಪಂದ್ಯಗಳಿಂದ ಕೇವಲ 6 ಅಂಕಗಳನ್ನು ಡೆಲ್ಲಿ ಗಳಿಸಿದೆ.
ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿದ್ದರೂ, ಆ ತಂಡ ಬ್ಯಾಟಿಂಗ್‌ನಲ್ಲಿ ಪದೇ ಪದೇ ವೈಫಲ್ಯ ಕಾಣುತ್ತಿದೆ. ವೀರೇಂದ್ರ ಸೆಹ್ವಾಗ್, ಮಹೇಲಾ ಜಯವರ್ಧನೆ ಹಾಗೂ ಡೇವಿಡ್ ವಾರ್ನರ್ ಅಲ್ಲಲ್ಲಿ ಕೆಲವು ಪಂದ್ಯಗಳಲ್ಲಿ ಮಿಂಚಿದ್ದರೂ, ಎಲ್ಲಾ ಪಂದ್ಯಗಳಲ್ಲಿ ಅವರು ಜಯ ದಾಖಲಿಸದೇ ಇದ್ದುದು ತಂಡದ ಯಶಸ್ಸಿಗೆ ಮುಳುವಾಗಿ ಪರಿಣಮಿಸಿತು. ಕಳೆದ ಪಂದ್ಯದಲ್ಲಿ ಕೇವಲ 4 ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ರನ್ ಗಳಿಸಿದ್ದನ್ನು ನೋಡಿದರೆ, ಆ ತಂಡದ ದೌರ್ಬಲ್ಯತೆ ಏನೆಂಬುದು ಅರ್ಥವಾಗುತ್ತದೆ.
ನಾಳಿನ ಪಂದ್ಯದ ಲೆಕ್ಕಾಚಾರ ನೋಡಿದರೆ, ಎರಡೂ ಪಂದ್ಯಗಳು, ಏ. 6ರಂದು ದೆಹಲಿಯ ಫಿರೋಷಾ ಕೋಟ್ಲಾ ಮೈದಾನದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು.  ಆಗ ರಾಜಸ್ಥಾನ ಗೆದ್ದಿತ್ತು. ಇದೀಗ, ರಾಜಸ್ಥಾನ ತಂಡದ ತವರಿಗೆ ಆಗಮಿಸಿರುವ ಡೆಲ್ಲಿ, ತನ್ನ ತವರಿನಲ್ಲಿ ತಾನು ಅನುಭವಿಸಿದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಲಿದೆ.
ಅತ್ತ, ರಾಜಸ್ಥಾನ ರಾಯಲ್ಸ್ ಅಂತೂ ಅದ್ಭುತ ಫಾರ್ಮ್‌ನಲ್ಲಿದೆ. ಕಳೆದ ಪಂದ್ಯದಲ್ಲಿ (ಮೇ 5) ಪುಣೆ ವಾರಿಯರ್ಸ್ ವಿರುದ್ಧ ರೋಚಕ ಜಯ ದಾಖಲಿಸಿರುವುದು ಅದರ ಆತ್ಮವಿಶ್ವಾಸ ವೃದ್ಧಿಗೆ ಕಾರಣವಾಗಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಅದು ಜಯಗಳಿಸಿದರೆ, ಅದಕ್ಕೆ ಪ್ಲೇ ಆಫ್ ಹಂತ ಮತ್ತಷ್ಟು ಸಲೀಸಾಗಲಿದೆ.
ಇನ್ನು, ತಂಡದ ಬಲಾಬಲಗಳ ಬಗ್ಗೆ ಹೇಳುವುದಾದರೆ, ತಂಡ ರಾಹುಲ್ ದ್ರಾವಿಡ್ ಅವರ ಸಮರ್ಥ ನಾಯಕತ್ವದಲ್ಲಿ ಮುನ್ನುಗ್ಗುತ್ತಿದೆ.  ಟಿ20ಯಲ್ಲೂ ಅವರು ತಮ್ಮ ಬ್ಯಾಟಿಂಗ್‌ನಿಂದ ಮಿಂಚುತ್ತಿದ್ದಾರೆ. ಇನಿಂಗ್ಸ್ ಆರಂಭಿಸುವ ಅವರಿಗೆ ಮತ್ತೊಬ್ಬ ಆರಂಭಿಕ ಅಜಿಂಕ್ಯ ರಹಾನೆ ಅವರಿಂದೂ ಉತ್ತಮ ಬೆಂಬಲ ಸಿಕ್ಕಿದೆ. ಪುಣೆ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರ ಕೆಮಿಸ್ಟ್ರಿ ಅತ್ಯುತ್ತಮವಾಗಿ ಕೆಲಸ ಮಾಡಿತ್ತು. ಮೊದಲ ವಿಕೆಟ್‌ಗೆ ಈ ಜೋಡಿ 98 ರನ್‌ಗಳ ಜೊತೆಯಾಟ ನೀಡಿತ್ತು.
ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಸ್ಟುವರ್ಟ್ ಬಿನ್ನಿ ಕೇವಲ 13 ಎಸೆತಗಳಲ್ಲಿ 32 ರನ್ ಚಚ್ಚಿ, ರಾಜಸ್ಥಾನ ಜಯದ ಮೇಲೆ ತಮ್ಮದೊಂದು ಮೊಹರು ಹಾಕಿದ್ದರು. ಹಾಗಾಗಿ, ಅದೇ ಆತ್ಮವಿಶ್ವಾಸದಲ್ಲೇ ತಂಡ ಕಣಕ್ಕಿಳಿಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement