ಐಸಿಸಿ ಕ್ರಿಕೆಟ್ ಸಮಿತಿಗೆ ಶಿವರಾಮಕೃಷ್ಣನ್
ದುಬೈ: ಭಾರತದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು, ಐಸಿಸಿ ಕ್ರಿಕೆಟ್ ಸಮಿತಿಯಲ್ಲಿ ಆಟಗಾರರ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ. ಈವರೆಗೆ ಈ ಸ್ಥಾನದಲ್ಲಿದ್ದ ಟಿಮ್ ಮೇ ಅವರ ಅವಧಿ ಇದೇ ಮಾಸಾಂತ್ಯಕ್ಕೆ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ, ಶಿವರಾಮಕೃಷ್ಣನ್ ಅವರನ್ನು ನೇಮಿಸಲಾಗಿದೆ. ಶಿವರಾಮಕೃಷ್ಣನ್ ಅವರ ಉಮೇದುವಾರಿಕೆಯನ್ನು ಬಿಸಿಸಿಐ ಬೆಂಬಲಿಸಿತ್ತು. ಐಸಿಸಿ ಕ್ರಿಕೆಟ್ ಸಮಿತಿಯಲ್ಲಿ ಶಿವರಾಮಕೃಷ್ಣನ್ ಅವರ ಜೊತೆಗೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಕೂಡಾ ಆಯ್ಕೆಯಾಗಿದ್ದಾರೆ. ವಿಶ್ವದ 10 ಶ್ರೇಷ್ಠ ಟೆಸ್ಟ್ ತಂಡಗಳ ನಾಯಕರು ಮತದಾನದ ಮೂಲಕ ಈ ಆಯ್ಕೆ ಮಾಡಿದ್ದಾರೆಂದು ಐಸಿಸಿ ಹೇಳಿದೆ. ಸೋಮವಾರ ಈ ಕುರಿತಂತೆ ಅಧಿಕೃತವಾಗಿ ಪ್ರಕಟಣೆ ನೀಡಿರುವ ಐಸಿಸಿ, 'ಶಿವರಾಮಕೃಷ್ಣನ್ ಅವರ ಅಧಿಕಾರಾವಧಿ 2015ಕ್ಕೆ ಮುಕ್ತಾಯಗೊಳ್ಳಲಿದೆ' ಎಂದು ಹೇಳಿದೆ.