ಕಿಲ್ಲರ್ ಮಿಲ್ಲರ್
ಜೈಪುರ: ಅದು ಪಂಜಾಬ್ ಇನಿಂಗ್ಸ್ನ 8ನೇ ಓವರ್.... 20 ಎಸೆತಗಳಲ್ಲಿ 20 ರನ್ ಹೊಡಿದಿದ್ದ ಗುರುಕೀರತ್ ಸಿಂಗ್ ಔಟಾದರು. ಅದು ಪಂಜಾಬ್ ತಂಡದ 3ನೇ ವಿಕೆಟ್. ಹೀಗೆ, ಆರಂಭದ 8 ಓವರ್ಗಳಲ್ಲಿ 53 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಪಂಜಾಬ್, ಪಂದ್ಯ ಗೆಲ್ಲಲು 72 ಎಸೆತಗಳಲ್ಲಿ 139 ರನ್ ಪೇರಿಸುವ ಒತ್ತಡದಲ್ಲಿತ್ತು.
ಗುರುಕೀರತ್ ಸಿಂಗ್ ವಿಕೆಟ್ ಉರುಳಿದಾಗ ಆ ದೈತ್ಯ ಪ್ರತಿಭೆ ಮಿಲ್ಲರ್ ಕ್ರೀಸ್ಗೆ ಕಾಲಿಟ್ಟಿದ್ದು. ಕ್ರೀಸ್ನ ಮತ್ತೊಂದು ತುದಿಯಲ್ಲಿ ಮತ್ತೊಂದು ದೈತ್ಯ ಪ್ರತಿಭೆ ಡೇವಿಡ್ ಹಸ್ಸಿ ಇದ್ದರು. ಆರ್ಸಿಬಿ ತಂಡದ ಬೌಲರ್ಗಳು ಒಮ್ಮೆ ಉಗುಳು ನುಂಗಿಕೊಂಡರು.
ಆದರೆ, 10ನೇ ಓವರ್ನಲ್ಲಿ ಹಸ್ಸಿ ವಿಕೆಟ್ ಉರುಳಿದ ಕೂಡಲೇ, ಆರ್ಸಿಬಿ ಪಾಳೆಯದಲ್ಲಿ ಸಂತಸದ ಕಲರವ... ಕ್ರೀಸ್ನಲ್ಲಿ ಇನ್ನುಳಿದಿರುವ ಮಿಲ್ಲರ್ ವಿಕೆಟ್ ಉರುಳಿಸಿದರೆ ಸಾಕು... ಪಂದ್ಯ ಅರ್ಧ ಗೆದ್ದಂತೆಯೇ ಎಂಬ ಯೋಚನೆ. ಆದರೆ, ಆರ್ಸಿಬಿ ಕ್ರೀಡಾಳುಗಳ ಈ ಅನಿಸಿಕೆಯನ್ನು ಕೇವಲ ಆಲೋಚನೆಗಷ್ಟೇ ಸೀಮಿತಗೊಳಿಸಿದ ಮಿಲ್ಲರ್, ಬೌಲರ್ಗಳನ್ನು ದಂಡಿಸಲು ಶುರು ಮಾಡಿದರು.
14ನೇ ಓವರ್ನಿಂದ ಅವರ ಆರ್ಭಟ ಶುರುವಾಯ್ತು. 14ನೇ ಓವರ್ನಲ್ಲಿ ವಿನಯ್ ಕುಮಾರ್ ಬೌಲಿಂಗ್ನಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್ ಬಾರಿಸಿದ ಅವರು, ಅದರ ಮುಂದಿನ ಓವರ್ನಲ್ಲಿ (ಆರ್.ಪಿ. ಸಿಂಗ್) 2 ಸಿಕ್ಸ್ ಹಾಗೂ ಮೂರು ಬೌಂಡರಿ ಬಾರಿಸಿದರು. ಹಸ್ಸಿ ಔಟಾದ ಮೇಲೆ ಕ್ರೀಸ್ಗೆ ಕಾಲಿಟ್ಟಿದ್ದ ಸತೀಶ್, ಮಿಲ್ಲರ್ಗೆ ಉತ್ತಮ ಬೆಂಬಲ ನೀಡಿದರು.
ಹೀಗೆ, ಭರ್ಜರಿಯಾಗಿ ಬ್ಯಾಟ್ ಬೀಸುತ್ತಾ, ಬೌಲರ್ಗಳ ತಂತ್ರಗಳನ್ನೆಲ್ಲಾ ತಲೆಕೆಳಗು ಮಾಡಿದ ಮಿಲ್ಲರ್ ಕೇವಲ 38 ಎಸೆತಗಳಲ್ಲಿ 101 ರನ್ ಬಾರಿಸಿ, ಪಂಜಾಬ್ಗೆ ಜಯ ತಂದುಕೊಟ್ಟರು. ಇನ್ನು, ಕ್ರಿಸ್ಗೇಯ್ಲ್ ಮಾಡಿದ 18ನೇ ಓವರ್ನಲ್ಲಿ ಬರೋಬ್ಬರಿ 20 ರನ್ ಬಾರಿಸಿದ ಅವರು ತಂಡದ ಗೆಲವಿಗೆ ಕಾರಣರಾಗಿ... ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾದರು.
ಪಂಜಾಬ್ ಇನಿಂಗ್ಸ್ ಆರಂಭಿಸಿದ್ದ ಮನದೀಪ್ ಸಿಂಗ್ ಹಾಗೂ ಶೇನ್ ಮಾರ್ಶ್ ಕೇವಲ 16 ರನ್ಗಳ ಜೊತೆಯಾಟವಾಡಿದರು. 3ನೇ ಓವರ್ನಲ್ಲೇ ಮಾರ್ಶ್ ವಿಕೆಟ್ ಬೀಳುವ ಮೂಲಕ ಆ ಜೋಡಿ ಮುರಿಯಿತು. ಆನಂತರ, ಮತ್ತೊಬ್ಬ ಆರಂಭಿಕ ಮನದೀಪ್ ಸಿಂಗ್ ಕೂಡಾ ವಿಕೆಟ್ ಒಪ್ಪಿಸಿದರು.
ಆಗ, ಇನಿಂಗ್ಸ್ ಜವಾಬ್ದಾರಿ ಬಿದ್ದಿದ್ದು ಮೂರನೇ ಕ್ರಮಾಂಕದ ಗುರುಕೀರತ್ ಸಿಂಗ್ ಹಾಗೂ ಡೇವಿಡ್ ಹಸ್ಸಿ ಮೇಲೆ ಬಿದ್ದಿತ್ತು. ಆದರೆ, ಇವರಿಬ್ಬರ ವಿಕೆಟ್ಗಳೂ ಉರುಳಿದಾಗ, ಪಂಜಾಬ್ ಪಾಳಯದ ಮೇಲೆ ಸೋಲಿನ ಕಾರ್ಮೋಡ ಕವಿದಿದ್ದವು. ಆದರೆ, ಈ ಕಾರ್ಮೋಡಗಳ ನಡುವೆ ಭರವಸೆಯ ಬೆಳ್ಳಿ ಮಿಂಚಾಗಿ ಬಂದ ಮಿಲ್ಲರ್, ತಮ್ಮ ತಂಡಕ್ಕೆ ಜಯ ತಂದುಕೊಟ್ಟರು.
ಮಿಂಚಿದ ಪೂಜಾರ, ಗೇಯ್ಲ್: ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ಆರಂಭಿಕ ಆಟಗಾರರಾದ ಕ್ರಿಸ್ ಗೇಯ್ಲ್ (61) ಮತ್ತು ಚೇತೇಶ್ವರ ಪೂಜಾರ (51) ಆಕರ್ಷಕ ಬ್ಯಾಟಿಂಗ್ ನೆರವಿನೊಂದಿಗೆ ನಿಗದಿತ ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.
ಪಂಜಾಬ್ ಬೌಲರ್ಗಳನ್ನು ದಂಡಿಸಿದ ಕ್ರಿಸ್ ಗೇಯ್ಲ್ ಮೊತ್ತದಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿದ್ದವು. 48 ಎಸೆತಗಳನ್ನು ಎದುರಿಸಿದ ಪೂಜಾರ್ ಅರ್ಧ ಶತಕದಲ್ಲಿ 8 ಬೌಂಡರಿಗಳು ಸೇರಿದ್ದವು. ಅದ್ಭುತ ಜತೆಯಾಟ ಪ್ರದರ್ಶಿಸಿದ ಈ ಜೋಡಿ ಮೊದಲ ವಿಕೆಟ್ಗೆ 102 ರನ್ ಕಲೆ ಹಾಕು ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿತು.
ಆದರೆ, ಇವರಿಬ್ಬರ ವಿಕೆಟ್ ಉರುಳಿಕ ಮೇಲೆ ರನ್ರೇಟ್ ಕೊಂಚ ಕಡಿಮೆಯಾಗಿತ್ತು. ಆದರೆ, ಇನಿಂಗ್ಸ್ನ ಅಂತಿಮ ಹಂತದಲ್ಲಿ ಕ್ರೀಸ್ಗೆ ಕಾಲಿಟ್ಟ ಡಿವಿಲಿಯರ್ಸ್, 19 ಎಸೆತಗಳಲ್ಲಿ 38 ರನ್ ಬಾರಿಸಿ ತಂಡದ ಮೊತ್ತ 190 ರನ್ ಮುಟ್ಟಲು ನೆರವಾದರು.
ಸ್ಕೋರ್ ಬೋರ್ಡ್
ರಾಯಲ್ ಚಾಲೆಂಜರ್ಸ್ : 190/3 (20 ಓವರ್)
ಚೇತೇಶ್ವರ ಪೂಜಾರ ಬಿ ಮನ್ಪ್ರೀತ್ ಗೋನಿ 51 (48), ಕ್ರಿಸ್ ಗೇಯ್ಲ್ 61 (33), ವಿರಾಟ್ ಕೊಹ್ಲಿ ಸಿ ಮಾರ್ಷ್ ಬಿ ಆವಾನಾ 14 (14), ಡಿ ವಿಲಿಯರ್ಸ್ ಅಜೇಯ 38 (19), ಹೆನ್ರೀಕೆಸ್ ಅಜೇಯ 16 (7). ಇತರೆ 10.
ವಿಕೆಟ್ ಪತನ: 1-102, 2-133, 3-144.
ಬೌಲಿಂಗ್: ಪ್ರವೀಣ್ ಕುಮಾರ್ 4-0-28-0, ಪರ್ವಿಂದರ್ ಆವಾನಾ 4-0-28-1, ಮನ್ಪ್ರೀತ್ ಗೋನಿ4-0-41-2, ನಜೀರ್ 4-0-62-0, ಫಿಯೂಶ್ ಚಾವ್ಲಾ 4-0-26-0.
ಕಿಂಗ್ಸ್ ಇಲೆವೆನ್ ಪಂಜಾಬ್: 194/4 (18 ಓವರ್)
ಮನದೀಪ್ ಸಿಂಗ್ ಸಿ ಅರುಣ್ ಕಾರ್ತಿಕ್ ಬಿ ವಿನಯ್ ಕುಮಾರ್ 16 (12), ಶೇನ್ ಮಾರ್ಷ್ ಸಿ ಡಿವಿಲಿಯರ್ಸ್ ಬಿ ರಾಮ್ಪಾಲ್ 6 (7), ಗುರುಕೀರತ್ ಸಿಂಗ್ ಎಲ್ಬಿಡಬ್ಲ್ಯೂ ಬಿ ಕಾರ್ತಿಕ್ 20 (20), ಡೇವಿಡ್ ಹಸ್ಸಿ ಸಿ ಹೆನ್ರೀಕೆಸ್ ಬಿ ಕಾರ್ತಿಕ್ 13 (14), ಡೇವಿಡ್ ಮಿಲ್ಲರ್ ಅಜೇಯ 101 (38), ಸತೀಶ್ ಅಜೇಯ 27 (18). ಇತರೆ 11.
ವಿಕೆಟ್ ಪತನ: 1-13, 2-25, 3-51, 4-64.
ಬೌಲಿಂಗ್: ರಾಮ್ಪಾಲ್ 4-0-27-1, ಆರ್ಪಿ ಸಿಂಗ್ 3-0-38-0, ಹೆನ್ರೀಕೆಸ್ 3-0-29-0, ವಿನಯ್ ಕುಮಾರ್ 4-0-48-1, ಮುರಳಿ ಕಾರ್ತಿಕ್ 3-0-24-2, ಕ್ರಿಸ್ ಗೇಯ್ಲ್ 1-0-22-0.