'ಫುಟ್ಬಾಲ್ ಕ್ರೀಡೆ ಅಭಿವೃದ್ಧಿಗೆ ಒತ್ತು'
'ಫುಟ್ಬಾಲ್ ಕ್ರೀಡೆ ಅಭಿವೃದ್ಧಿಗೆ ಒತ್ತು'
ನವದೆಹಲಿ: ಭಾರತೀಯ ಫುಟ್ಬಾಲ್ ಅಭಿವೃದ್ಧಿಯಲ್ಲಿ, ಎಐಎಫ್ಎಫ್ನ ತಾಂತ್ರಿಕ ಸಮಿತಿಯ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ, ತಾಂತ್ರಿಕ ಸಮಿತಿಯನ್ನು ಅಣಿಗೊಳಿಸಿ, ದೇಶದಲ್ಲಿ ಫುಟ್ಬಾಲ್ ಕ್ರೀಡಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಮಾಜಿ ಪುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಹೇಳಿದ್ದಾರೆ. ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಭಾರತೀಯ ಫುಟ್ಬಾಲ್ ಸಂಸ್ಥೆ (ಎಐಎಫ್ಎಫ್)ಯ ತಾಂತ್ರಿಕ ಸಮಿತಿಯು ಮೂರು ವರ್ಷಗಳಿಗೊಮ್ಮೆ ಸಭೆ ನಡೆಸುತ್ತಿದೆ. ಆದರೆ, ಫುಟ್ಬಾಲ್ ಕ್ರೀಡಾಭಿವೃದ್ಧಿಗಾಗಿ ಈ ಕ್ರಮ ಬದಲಾಗಬೇಕಿದೆ ಎಂದು ಅವರು ಆಶಿಸಿದರು.
10ರಿಂದ ಆರ್ಚರಿ ಬೇಸಿಗೆ ಶಿಬಿರ
ಬೆಂಗಳೂರು: ಕರ್ನಾಟಕ ಆರ್ಚೆರಿ ಸಂಸ್ಥೆ ವತಿಯಿಂದ 13 ವರ್ಷ ಮೇಲ್ಪಟ್ಟ ಶಾಲಾ ವಿದ್ಯಾರ್ಥಿಗಳಿಗಾಗಿ 'ಆರ್ಚೆರಿ ಬೇಸಿಗೆ ಶಿಬಿರ'ವನ್ನು ಆಯೋಜಿಸಿದೆ. ಮೇ 10ರಂದು ಆರಂಭಗೊಳ್ಳಲಿರುವ ಈ ಶಿಬಿರದಲ್ಲಿ ಬೆಳಗ್ಗೆ ಹಾಗೂ ಸಂಜೆ ತರಗತಿಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗೆ 080- 22275656 ಸಂಖ್ಯೆಗೆ ಸಂಪರ್ಕಿಸಬಹುದು.
ಕುಂಬ್ಳೆ ಸಾರಥ್ಯದಲ್ಲಿ ತಾಂತ್ರಿಕ ಸಮಿತಿ ಸಭೆ
ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ತಾಂತ್ರಿಕ ಸಮಿತಿ ಸಭೆ ಮೇ 28 ಹಾಗೂ 29ರಂದು ಲಂಡನ್ನಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಕುಂಬ್ಳೆ ವಹಿಸಲಿದ್ದಾರೆ. ಐಸಿಸಿ ತಾಂತ್ರಿಕ ಸಮಿತಿ ಅಧ್ಯಕ್ಷರಾಗಿ ಅನಿಲ್ ಕುಂಬ್ಳೆ ಇತ್ತೀಚೆಗೆ ಆಯ್ಕೆಯಾದ ಮೇಲೆ, ಇದೇ ಮೊದಲ ಬಾರಿಗೆ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಆ್ಯಂಡ್ರೂ ಸ್ಟ್ರಾಸ್ ಹಾಗೂ ಐಸಿಸಿ ತಾಂತ್ರಿಕ ಸಮಿತಿಗೆ ಆಟಗಾರರ ಪ್ರತಿನಿಧಿಯಾಗಿ ನೂತನವಾಗಿ ಆಯ್ಕೆಯಾಗಿರುವ ಭಾರತದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಪಾಲ್ಗೊಳ್ಳಲಿದ್ದಾರೆ.