ವುಡ್ಹಿಲ್ ನೇಮಕಕ್ಕೆ ಅಸಮಾಧಾನ
ಕರಾಚಿ: ಚಾಂಪಿಯನ್ಸ್ ಟ್ರೋಫಿಗಾಗಿ ತೆರಳಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಟ್ರೆಡ್ ವುಡ್ಹಿಲ್ ಅವರನ್ನು ನೇಮಿಸಿರುವ ಕುರಿತಾಗಿ ಮಾಜಿ ಕ್ರಿಕೆಟರ್ಗಳಾದ ಜಾವೇದ್ ಮಿಯಾಂದಾದ್ ಹಾಗೂ ವಾಸಿಂ ಅಕ್ರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸಹಾಯಕ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಟ್ರೆಡ್ ವುಡ್ಹಿಲ್ ಅವರನ್ನು ಪಾಕಿಸ್ತಾನ ತಂಡದ ಬ್ಯಾಟಿಂಗ್ ಕೋಚ್ ಆಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇತ್ತೀಚೆಗಷ್ಟೇ ನೇಮಿಸಿತ್ತು. ಆದರೆ, ಒಂದಾದರೂ ಪ್ರಥಮ ದರ್ಜೆ ಕ್ರಿಕೆಟ್ ಆಡಿರದ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದ್ದಾರೆಂದು ಕೆಲ ಕ್ರಿಕೆಟಿಗರು ಮೂಗು ಮುರಿದಿದ್ದಾರೆ.
ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಆಟಗಾರ ಹಾಗೂ ಪಿಸಿಬಿಯ ಸಾಮಾನ್ಯ ಕ್ರಿಕೆಟ್ ಸಮಿತಿಯ ಮಹಾನಿರ್ದೇಶಕರೂ ಆಗಿರುವ ಜಾವೇದ್ ಮಿಯಾಂದಾದ್, 'ವುಡ್ಹಿಲ್ ನೇಮಕ ಪ್ರಕ್ರಿಯೆಯಲ್ಲಿ ನಾನು ಭಾಗಿಯಾಗಿಲ್ಲ. ಆದರೆ, ಹಿಲ್ ಅವರ ಆಯ್ಕೆ ಸಮಂಜಸವಾದುದಲ್ಲ' ಎಂದಿದ್ದಾರೆ. ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಕ್ರಂ, 'ನಮ್ಮಲ್ಲೇ (ಪಾಕಿಸ್ತಾನ) ಹಲವಾರು ಮಾಜಿ ಕ್ರಿಕೆಟಿಗರಿದ್ದಾರೆ. ಅವರು ಪಾಕಿಸ್ತಾನ ತಂಡದ ಕೋಚ್ಗಳಾಗಿ ವುಡ್ಹಿಲ್ಗಿಂತಲೂ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲರಾಗಿದ್ದಾರೆ. ಆದರೆ, ಅವರನ್ನು ಕಡೆಗಣಿಸಿ ವಿದೇಶಿಗ ಹಾಗೂ ಅದರಲ್ಲೂ ಅಷ್ಟಾಗಿ ಅನುಭವವಿಲ್ಲದ ವ್ಯಕ್ತಿಯನ್ನು ನೇಮಿಸಿರುವುದು ಸರಿಯಲ್ಲ' ಎಂದಿದ್ದಾರೆ.