Number ನಂಬಿಕೆ
ಕ್ರೀಡೆಯಲ್ಲಿ ದಾಖಲೆಯ ಅಂಕಿ ಅಂಶಗಳು ಆಯಾ ಆಟಗಾರನ ಸಾಮರ್ಥ್ಯವನ್ನು ವಿವರಿಸುತ್ತವೆ. ಆದರೆ ಆಟಗಾರನ ಹಿಂದೆ ಸೂಚಿಸಲಾಗಿರುವ ಸಂಖ್ಯೆಗಳು ವಿಭಿನ್ನ, ವಿಶಿಷ್ಟವಾದ ಹಿನ್ನೆಲೆ ಹೊಂದಿರುತ್ತದೆ.
ಹಿಂದೆ ಪಂದ್ಯದ ವೇಳೆ ಆಟಗಾರನನ್ನು ಗುರುತಿಸುವ ಸಲುವಾಗಿ ತಂಡದ ಪ್ರತಿ ಆಟಗಾರರಿಗೂ ವಿಭಿನ್ನ ಸಂಖ್ಯೆಗಳನ್ನು ನೀಡಲಾಯಿತು. ಈಗ ಆಟಗಾರರು ಆ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುವಾಗ ತಮ್ಮದೇ ಕಾರಣ ಹಾಗೂ ನಂಬಿಕೆ ಬೆಳೆಸಿಕೊಂಡಿದ್ದಾರೆ.
ಕೆಲವು ಆಟಗಾರರು ತಮ್ಮ ಜೆರ್ಸಿ ಹಿಂದೆ ವಿಭಿನ್ನವಾದ ಸಂಖ್ಯೆಗಳನ್ನು ಹಾಕಿಕೊಳ್ಳುತ್ತಾರೆ. ಆಟಗಾರರ ಈ ವಿಭಿನ್ನ ಸಂಖ್ಯಾ ಸಿದ್ಧಾಂತ ಕುತೂಹಲ ಮೂಡಿಸುತ್ತದೆ. ಕೇವಲ ಕ್ರಿಕೆಟ್ ಆಟಗಾರರು ಮಾತ್ರ ವಿಭಿನ್ನವಾದ ಸಂಖ್ಯೆಯನ್ನು ಹೊಂದಿರುವುದಿಲ್ಲ ಫುಟ್ಬಾಲ್, ಬಾಸ್ಕೆಟ್ ಬಾಲ್ ಕ್ರೀಡೆಯ ಆಟಗಾರರೂ ಇದೇ ರೀತಿ ಸಂಖ್ಯೆಯನ್ನು ಹೊಂದಿರುತ್ತಾರೆ. ಹಾಗಾಗಿ ಕೆಲ ಸಂಖ್ಯೆಗಳು ಅನೇಕ ಮಹಾನ್ ಕ್ರೀಡಾಪಟುಗಳ ಗುರುತಾಗಿ ಬಿಂಬಿತವಾಗಿದೆ.
ಈ ಸಂಖ್ಯೆಗಳು ತಮ್ಮ ವಿಭಿನ್ನ ಹಿನ್ನೆಲೆ ಹೊಂದಿರುತ್ತವೆ. ಉದಾಹರಣೆಗೆ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ ಹಾಗೂ ಕೆಕೆಆರ್ನ ಯೂಸುಫ್ ಪಠಾಣ್ ಅವರಿಗೆ ಸಂಖ್ಯೆ '9' ಬೇಕಾಗಿತ್ತು. ಆದರೆ ಅವರಿಗೆ ಸಿಗದ ಹಿನ್ನಲೆಯಲ್ಲಿ ರೋಹಿತ್ ಶರ್ಮಾ 4 ಹಾಗೂ 5 ಸೇರಿಸಿ ಸಂಖ್ಯೆ '45' ಅವರ ಪಾಲಾಯಿತು. ಇನ್ನು ಯೂಸುಫ್ '999'ರ ಪಾಲಾದರು.
ಬೇರೆ ಆಟಗಾರರಿಂದ ಸ್ಫೂರ್ತಿ
ಕೆಲವು ಆಟಗಾರರು ಇತರೆ ಕ್ರೀಡೆಯಲ್ಲಿನ ತಮ್ಮ ನೆಚ್ಚಿನ ಆಟಗಾರರ ಸಂಖ್ಯೆಯನ್ನು ಹೊಂದಿರುತ್ತಾರೆ. ಅದರಲ್ಲಿ ಸಚಿನ್, ಧೋನಿ ಸಹ ತಮ್ಮ ನೆಚ್ಚಿನ ಫುಟ್ಬಾಲ್ ಆಟಗಾರರ ಸಂಖ್ಯೆ ಹೊಂದಿದ್ದಾರೆ. ಅರ್ಜೆಂಟಿನಾ ಫುಟ್ಬಾಲ್ ತಂಡದ ಅಭಿಮಾನಿಯಾಗಿರುವ ಸಚಿನ್, ಅಲ್ಲಿನ ಖ್ಯಾತ ಆಟಗಾರ ಡ್ಯುಗೊ ಮರಡೋನಾ ಅವರ '10'ರ ಜೆರ್ಸಿ ಸಂಖ್ಯೆಯನ್ನೂ ತಾವೂ ಆಯ್ದುಕೊಂಡಿದ್ದಾರೆ.
ಇನ್ನು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೂಲತಃ ಫುಟ್ಬಾಲ್ನ ಗೋಲ್ ಕೀಪರ್ ಆಗಿದ್ದವರು. ಆ ವೇಳೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಜಾರ್ಜ್ ಬೆಸ್ಟ್, ಎರಿಕ್ ಕ್ಯಾಟೊನಾಡೌನ್ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅಭಿಮಾನಿಯಾಗಿದ್ದು, ಅವರ ಸಂಖ್ಯೆ (7) ಅನ್ನೇ ತಮಗೂ ಆಯ್ದುಕೊಂಡರು. ಕ್ರಿಕೆಟ್ಗೆ ಕಾಲಿಟ್ಟ ಮೇಲೂ ಧೋನಿ ಸಂಖ್ಯೆ 7 ಅನ್ನು ಬಿಡಲಿಲ್ಲ.
ವೈಯಕ್ತಿಕ ಸಾಧನೆ
ಕೆಲವು ಕ್ರಿಕೆಟಿಗರು ತಮ್ಮ ವೃತ್ತಿ ಜೀವನದಲ್ಲಿ ಗಳಿಸಿರುವ ಶ್ರೇಷ್ಠ ಸಾಧನೆಯ ನೆನಪಿಗಾಗಿ ತಮ್ಮ ದಾಖಲೆಯ ಸಂಖ್ಯೆಯನ್ನು ಟಿಶರ್ಟ್ನಲ್ಲಿ ಹೊಂದಿರುತ್ತಾರೆ. ಕ್ರಿಸ್ ಗೇಯ್ಲ್ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ವೈಯಕ್ತಿಕ ಮೊತ್ತ 333 ರನ್ಗಳ ನೆನೆಪಿಗಾಗಿ ಅದೇ ಸಂಖ್ಯೆಯನ್ನೇ ಇಟ್ಟುಕೊಂಡಿದ್ದಾರೆ. ಮುತ್ತಯ್ಯ ಮುರಳಿಧರನ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 800 ವಿಕೆಟ್ ಪಡೆದವರು. ಅವರ ಟಿಶರ್ಟ್ ನಂಬರ್ ಕೂಡ ಅದೇ.
ಹುಟ್ಟಿದ ದಿನಾಂಕ
ಮತ್ತೆ ಕೆಲವು ಆಟಗಾರರು ಹುಟ್ಟಿದ ದಿನಾಂಕವನ್ನು ತಮ್ಮ ಶರ್ಟ್ನಲ್ಲಿ ಹೊಂದಿರುತ್ತಾರೆ. ಯುವರಾಜ್ ಸಿಂಗ್ ಡಿ.12ರಂದು ಜನಿಸಿದ್ದು, ಅದೇ ಸಂಖ್ಯೆಯನ್ನು ಅವರು ಪಡೆದಿದ್ದಾರೆ. ಹರ್ಭಜನ್ ಸಿಂಗ್ ಜನಿಸಿದ್ದು ಜುಲೈ 3ರಂದು. ಅವರ ಜೆರ್ಸಿ ನಂಬರ್ ಕೂಡ 3.
ಎತ್ತರವೂ ನಂಬರಾಗುತ್ತೆ...
ಡೆಲ್ಲಿ ಡೇರ್ಡೆವಿಲ್ಸ್ ತಂಡದ ವೇಗಿ ಮಾರ್ನೆ ಮಾರ್ಕೆಲ್ 6.5 ಅಡಿ ಎತ್ತರವಿದ್ದು, ಹಾಗಾಗಿ ಅವರ ಜೆರ್ಸಿ ಸಂಖ್ಯೆ 65! ಇನ್ನು ಸೆಹ್ವಾಗ್ ಈ ರೀತಿಯಾದ ಯಾವುದೇ ನಂಬಿಕೆಯನ್ನು ಹೊಂದಿಲ್ಲದ ಹಿನ್ನೆಲೆಯಲ್ಲಿ ಅವರು ತಮ್ಮ ಜೆರ್ಸಿ ಹಿಂದೆ ಯಾವುದೇ ಸಂಖ್ಯೆಯನ್ನು ಹೊಂದಿಲ್ಲ.
- ಸೋಮಶೇಖರ ಪಿ. ಭದ್ರಾವತಿ