ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಗ್ರ 4ರ ಮೇಲೆ ಸನ್ ಕಣ್ಣು

Mainashree
Updated On : 8 May 2013, 9:48 am

ಹೈದರಾಬಾದ್: ಬೌಲಿಂಗ್ ಶಕ್ತಿಯ ಮೂಲಕವೇ ಪಂದ್ಯಗಳನ್ನು ಗೆಲ್ಲುತ್ತಾ ಬಂದಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಬಲಿಷ್ಟ ಆಲ್ರೌಂಡ್ ಆಟಗಾರರನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಪರಸ್ಪರ ಸೆಣಸಲಿವೆ. ತವರಿನಲ್ಲಿ ಸತತ ಜಯ ಸಾಧಿಸುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಬುಧವಾರದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಸನ್‌ರೈಸರ್ಸ್ ಇದುವರೆಗೂ ಆಡಿರುವ 11 ಪಂದ್ಯಗಳಿಂದ 14 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದು, ಚೆನ್ನೈ ವಿರುದ್ಧ ಜಯ ಸಾಧಿಸಿದರೆ, ಎಲಿಮಿನೇಟರ್ ರೌಂಡ್‌ಗೆ ಪ್ರವೇಶ ಪಡೆಯಲಿದೆ.
ಇನ್ನು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ 12 ಪಂದ್ಯಗಳಲ್ಲಿ 9ರಲ್ಲಿ ಗೆದ್ದು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಆದರೆ, ಸತತ ಏಳು ಪಂದ್ಯಗಳಲ್ಲಿ ಗೆದ್ದ ನಂತರ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲನುಭವಿಸಿದೆ.
ಆದರೆ,  ಚೆನ್ನೈ ತಂಡ, ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತಿತ್ತು. ನಾಯಕ ಧೋನಿ ಕೂಡಾ 'ಇದು ಒಂದು ಎಚ್ಚರಿಕೆ' ಎಂದಿದ್ದಾರೆ. ಹಾಗಾಗಿ, ಜಯದ ಹಾದಿಗೆ ಮರಳಲು ಎದುರು ನೋಡುತ್ತಿದೆ.
'ಪಂದ್ಯಾವಳಿಯಲ್ಲಿ ಇನ್ನು ಕೆಲವೇ ಪಂದ್ಯಗಳು ಉಳಿದುಕೊಂಡಿದ್ದು, ಎಚ್ಚೆತ್ತುಕೊಳ್ಳಲು ಇದು ಸೂಕ್ತ ಸಮಯವಾಗಿದೆ' ಎಂದಿದ್ದಾರೆ ಧೋನಿ.
ಮೈಕಲ್ ಹಸ್ಸಿ, ಸುರೇಶ್ ರೈನಾ ಹಾಗೂ ಧೋನಿ ಅವರನ್ನು ಹೊಂದಿರುವ ಚೆನ್ನೈ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಬೌಲಿಂಗ್ ವಿಭಾಗದಲ್ಲಿ ಅಲ್ಬೀ ಮಾರ್ಕೆಲ್, ಮೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್, ಕ್ರಿಸ್ ಮಾರ್ಸ್ ಹಾಗೂ ಡ್ವೇನ್ ಬ್ರಾವೊ ಆಕರ್ಷಕ ಪ್ರದರ್ಶನ ತೋರುತ್ತಿದ್ದಾರೆ.
ಇನ್ನೊಂದೆಡೆ ಹೈದರಾಬಾದ್ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಸಾಂಘಿಕ ಪ್ರದರ್ಶನ ನೀಡುವ ಮೂಲಕ ಮುಂಬೈ ತಂಡದ ವಿರುದ್ಧ ಹೈದರಾಬಾದ್ ಕಳೆದ ಪಂದ್ಯದಲ್ಲಿ ಜಯ ಸಾಧಿಸಿದೆ.
ವಿಶ್ವದ ಅಗ್ರ ಬೌಲರ್ ಡೇಲ್ ಸ್ಟೇಯ್ನ್, ಇಶಾಂತ್ ಶರ್ಮಾ ಹಾಗೂ ಅಮಿತ್ ಮಿಶ್ರಾ ಅವರೊಂದಿಗೆ ಸನ್‌ರೈಸರ್ಸ್ ಮಾರಕ ಬೌಲಿಂಗ್ ದಾಳಿ ಪ್ರದರ್ಶಿಸುತ್ತಿದೆ. ಇನ್ನು ಫಾರ್ಮ್‌ನಲ್ಲಿರುವ ಕರಣ್ ಶರ್ಮಾ ಸಹ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ.
ಆದರೆ, ಹೈದರಾಬಾದ್ ತಂಡಕ್ಕೆ ಬ್ಯಾಟಿಂಗ್‌ನದ್ದೇ ಚಿಂತೆಯಾಗಿದೆ. ಆದರೆ, ಗಾಯದಿಂದ ಚೇತರಿಸಿಕೊಂಡಿರುವ ಶಿಖರ್ ಧವನ್ ತಂಡಕ್ಕೆ ಮರಳುವುದರೊಂದಿಗೆ ಬ್ಯಾಟಿಂಗ್‌ಗೆ ಬಲ ಬಂದಿದೆ. ಅಲ್ಲದೆ ವೆಸ್ಟ್ ಇಂಡೀಸ್ ನಾಯಕ ಡರೇನ್ ಸಾಮಿ ಸಹ ಫಾರ್ಮ್‌ಗೆ ಮರಳಿದ್ದು ತಂಡಕ್ಕೆ ನೆರವಾಗುತ್ತಿದ್ದಾರೆ.
ಶ್ರೀಲಂಕಾದ ತಿಸರಾ ಪೆರೇರಾ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲೂ ತಂಡಕ್ಕೆ ಆಶ್ರಯವಾಗುತ್ತಿದ್ದಾರೆ. ಯುವ ಬ್ಯಾಟ್ಸ್‌ಮನ್ ಜಿ.ಎಚ್. ವಿಹಾರಿ ಎದುರಾಳಿ ಬೌಲರ್‌ಗಳನ್ನು ದಂಡಿಸತೊಡಗಿದ್ದಾರೆ. ಆದರೆ, ನಾಯಕ ಕುಮಾರ ಸಂಗಕ್ಕಾರ ಅವರ ಬ್ಯಾಟಿಂಗ್ ವೈಫಲ್ಯ ಮಾತ್ರ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement