ಐಪಿಎಲ್ ಹೆಚ್ಚುವರಿ ಫೈನಲ್‌ಗೆ ಕೋರಿಕೆ
ಮುಂಬೈ: ಪ್ರಸಕ್ತ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯ ಮೇ 26ರಂದು ಕೋಲ್ಕತಾದಲ್ಲಿ ನಡೆಯಲಿದ್ದು, ಆ ಪಂದ್ಯ ಮುಗಿದ ನಂತರ, 'ಹೆಚ್ಚುವರಿ ಫೈನಲ್ ಪಂದ್ಯ'ವೊಂದನ್ನು ಮಹಾರಾಷ್ಟ್ರದಲ್ಲಿ ನಡೆಸಲು ಅನುಮತಿ ನೀಡಬೇಕೆಂದು ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್ ಬಿಸಿಸಿಐಯನ್ನು ಕೋರಿದ್ದಾರೆ. ಈ ಕುರಿತಂತೆ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರಿಗೆ ಪತ್ರ ಬರೆದಿರುವ ಅವರು, 'ಮಹಾರಾಷ್ಟ್ರದ ಕೆಲವು ಪ್ರಾಂತ್ಯಗಳು ಬರಪೀಡಿತವಾಗಿವೆ. ಈ ಭಾಗಗಳ ಜನರಿಗೆ ಸಹಾಯ ಹಸ್ತ ಚಾಚುವ ಉದ್ದೇಶವನ್ನು ತಾವು ಹೊಂದಿದ್ದು, ಮುಂಬೈನಲ್ಲಿ ಐಪಿಎಲ್ ಹೆಚ್ಚುವರಿ ಫೈನಲ್ ಪಂದ್ಯ ನಡೆಸುವುದರಿಂದ ಹೆಚ್ಚು ಹಣ ಸಂಗ್ರಹವಾಗುತ್ತದೆ. ಅದರಿಂದ ಜನರಿಗೆ ನೆರವು ನೀಡಲು ಸಹಾಯವಾಗುತ್ತದೆ' ಎಂದು ಕೋರಿದ್ದಾರೆ. ಪತ್ರದ ಪ್ರತಿಗಳನ್ನು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ, ಸಂಜಯ್ ಜಗದಾಳೆ (ಕಾರ್ಯದರ್ಶಿ) ಹಾಗೂ ಅನುರಾಗ್ ಠಾಕೂರ್ ಅವರಿಗೂ ವೆಂಗ್‌ಸರ್ಕಾರ್ ಕಳುಹಿಸಿದ್ದಾರೆ.