ಮ್ಯಾಡ್ರಿಡ್ ಓಪನ್: ಸಾನಿಯಾ-ಬೆಥಾನಿ ಪ್ರೀ ಕ್ವಾರ್ಟರ್ಗೆ
ಮ್ಯಾಡ್ರಿಡ್: ಭಾರತದ ಖ್ಯಾತ ಟೆನಿಸ್ ತಾರೆ ಹಾಗೂ ಅವರ ಅಮೆರಿಕದ ಜೋಡಿ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್ ಜೋಡಿ, ಡಬ್ಲ್ಯೂಟಿಎ ಮ್ಯಾಡ್ರಿಡ್ ಓಪನ್ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ನ ಪ್ರೀ-ಕ್ವಾರ್ಟರ್ ಫೈನಲ್ ಸುತ್ತನ್ನು ಪ್ರವೇಶಿಸಿದೆ. ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 5ನೇ ಶ್ರೇಯಾಂಕ ಪಡೆದಿರುವ ಭಾರತ-ಅಮೆರಿಕನ್ ಜೋಡಿ, ಸ್ಲೊವಾಕಿಯಾ- ಸ್ಪೇನ್ ಜೋಡಿಯಾದ ಡ್ಯಾನಿಯೆಲಾ ಹಂಟುಚೋವಾ ಹಾಗೂ ಅನಾಬೆಲ್ ಮೆಡಿನಾ ಅವರನ್ನು 7-6 (3), 4-6, 10-4 ಅಂತರದಲ್ಲಿ ಸೋಲಿಸಿದರು. ಒಂದು ಗಂಟೆ 46 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಗೆಲವು ಸಾಧಿಸಲು ಸಾನಿಯಾ-ಮ್ಯಾಟೆಕ್ ಕಷ್ಟಪಡಬೇಕಾಯಿತು. ಎದುರಾಳಿಗಳು ಅಷ್ಟು ಸುಲಭವಾಗಿ ಮಣಿಯಲು ಸಿದ್ಧರಿರಲಿಲ್ಲ. ಆದರೆ, ತೀವ್ರ ಹೋರಾಟ ಪ್ರದರ್ಶಿಸಿದ ಸಾನಿಯಾ ಜೋಡಿ, ಪಂದ್ಯದಲ್ಲಿ ಜಯ ಸಾಧಿಸಿದರು.