ಸ್ಪೇನ್ ಜಿಪಿ ಗೆಲ್ಲಲು ಕಠಿಣ ತಯಾರಿ: ಮಲ್ಯ
ಬಾರ್ಸಿಲೋನಾ: ಇತ್ತೀಚೆಗೆ ನಡೆದ ಬಹರೇನ್ ಗ್ರ್ಯಾನ್ ಪ್ರೀಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ ನಂತರ, ಭಾರತದ ಸಹರಾ ಫೋರ್ಸ್ ಇಂಡಿಯಾದ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ, ಭಾನುವಾರ ನಡೆಯಲಿರುವ ಸ್ಪೇನ್ ಗ್ರ್ಯಾನ್ ಪ್ರೀನಲ್ಲಿ ಸಾಕಷ್ಟು ತಯಾರಿ ನಡೆಸಿಯೇ ಕಣಕ್ಕಿಳಿಯಲಿದೆ ಎಂದು ಫೋರ್ಸ್ ಇಂಡಿಯಾ ಅಧ್ಯಕ್ಷ ವಿಜಯ್ ಮಲ್ಯ ತಿಳಿಸಿದ್ದಾರೆ.
ಏ. 21ರಂದು ನಡೆದಿದ್ದ ಬಹರೇನ್ ರೇಸ್ನಲ್ಲಿ ಫೋರ್ಸ್ ಇಂಡಿಯಾದ ಪೌಲ್ ಡಿ ರೆಸ್ತಾ ಅವರು, ನಾಲ್ಕನೇ ಸ್ಥಾನ ಪಡೆದಿದ್ದರು. ಇದು ಈವರೆಗೆ ಸಹರಾ ಫೋರ್ಸ್ ಇಂಡಿಯಾ, ಮೋಟಾರ್ ಸ್ಪೋರ್ಟ್ಸನಲ್ಲಿ ಗಳಿಸಿರುವ ಶ್ರೇಷ್ಠ ಸ್ಥಾನ ಇದಾಗಿದೆ. ಹಾಗಾಗಿ, ಪೋಡಿಯಂ ಫಿನಿಶ್ ಕಾಣುವ ಹಂಬಲ ತಂಡಕ್ಕಿದೆ ಎಂದು ಮಲ್ಯ ಹೇಳಿದರು.
ಭಾನುವಾರ ನಡೆಯಲಿರುವ ಸ್ಪೇನ್ ರೇಸ್ನ ಹಿನ್ನೆಲೆಯಲ್ಲಿ, ಇಲ್ಲಿನ ಅಂತಾರಾಷ್ಟ್ರೀಯ ಟ್ರಾಕ್ ಮೇಲೆ ಸಹರಾ ಪೋರ್ಸ್ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಮಲ್ಯ, 'ಒಮ್ಮೆ ರೇಸ್ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಮೇಲೆ, ತಂಡ ಹೆಚ್ಚಿನ ಜವಾಬ್ದಾರಿಯಿಂದ ರೇಸ್ಗೆ ಇಳಿಯಬೇಕಾಗುತ್ತದೆ. ಹಾಗಾಗಿ, ಯಾವುದೇ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ ತಾವು ಕಣಕ್ಕಿಳಿಯಲಿದ್ದೇವೆ' ಎಂದು ತಿಳಿಸಿದರು.