ಮ್ಯಾರಥಾನ್ಗೆ ಅಂತಾರಾಷ್ಟ್ರೀಯ ಸ್ಪರ್ಧಿಗಳು
ಬೆಂಗಳೂರು: ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯ ಆಶ್ರಯದಲ್ಲಿ, ಇದೇ ತಿಂಗಳು ಮೇ 19ರಂದು ನಗರದಲ್ಲಿ ನಡೆಯಲಿರುವ 'ಟಾಟಾ ಕನ್ಸಲ್ಟಿನ್ಸಿ ವಿಶ್ವ 10 ಕೆ' ಮ್ಯಾರಥಾನ್ನಲ್ಲಿ ಭಾಗವಹಿಸಲಿರುವ ವಿಶ್ವಮಟ್ಟದ ಮ್ಯಾರಥಾನ್ ಓಟಗಾರರ ಹೆಸರುಗಳನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.
ವಿಂಡ್ಸರ್ ಮ್ಯಾನರ್ ಹೋಟೆಲ್ನಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಆಟಗಾರರ ಪಟ್ಟಿಯನ್ನು ಮ್ಯಾರಥಾನ್ನ ಪ್ರಚಾರ ಜವಾಬ್ದಾರಿ ಹೊತ್ತಿರುವ ಪ್ರೊಕ್ಯಾಮ್ ಇಂಟರ್ನ್ಯಾಷನಲ್ ಸಂಸ್ಥೆ ಬಿಡುಗಡೆಗೊಳಿಸಿತು. ಸುದ್ದಿಗೋಷ್ಠಿಯಲ್ಲಿ, ಪ್ರೊಕ್ಯಾಮ್ ಸಂಸ್ಥೆಯ ಮುಖ್ಯಸ್ಥ ದಿಲೀಪ್ ಜಯರಾಮ್, ಟಿಸಿಎಸ್ ಸಂಸ್ಥೆಯ ನಾಗರಾಜ್ ಐಜರಿ ಹಾಜರಿದ್ದರು.
ಅಂತಾರಾಷ್ಟ್ರೀಯ ಸ್ಪರ್ಧಾಳುಗಳು: ಪ್ರತೀ ಬಾರಿಯಂತೆ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಆದರೆ, ಅವರ ಸಂಖ್ಯೆ ಈ ಬಾರಿ ಹೆಚ್ಚಾಗಲಿದೆ. ಪುರುಷರ ವಿಭಾಗದಲ್ಲಿ 5 ಬಾರಿ ಕ್ರಾಸ್ ಕಂಟ್ರಿ ಚಾಂಪಿಯನ್ ಆಗಿರುವ ಹಾಗೂ 2013ರ ಜರ್ಮನ್ ಮ್ಯಾರಥಾನ್ ಗೆದ್ದಿದ್ದ, ಹಾಲಿ ವಿಶ್ವ ಚಾಂಪಿಯನ್ ಆಗಿರುವ ಜಫೆಟ್ ಕೊರಿರ್, ಮಹಿಳೆಯರ ವಿಭಾಗದಲ್ಲಿ ಎಮಿಲಿ ಚೆಬೆಟ್ ಇದ್ದಾರೆ.
ಇವರೊಂದಿಗೆ, ಕೀನ್ಯಾದ ಪ್ರಬಲ ಸ್ಪರ್ಧಿಗಳಾದ ಹಿಲ ಕಿಪ್ರೊಪ್, 2010 ಹಾಗೂ 2013ರಲ್ಲಿ ವರ್ಲ್ಡ್ ಕ್ರಾಸ್ ಕಂಟ್ರಿ ಚಾಂಪಿಯನ್ ಯಿಮರ್ ವುಡೆ ಅಯಿಲೆ ಕೂಡಾ ಇರುವುದು ಮತ್ತೊಂದು ವಿಶೇಷ. 2012ರ ವಿಶ್ವ 10ಕೆ ಮ್ಯಾರಥಾನ್ನಲ್ಲೂ ಭಾಗವಹಿಸಿದ್ದ ಅಯಿಲೆ, ಅತಿ ವೇಗದ 4ನೇ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಇನ್ನು, ಇವರೊಂದಿಗೆ 2013ರ ವಿಶ್ವ 10ಕೆ ವಿಜೇತೆ ವಲೆಂಟೈನ್ ಕಿಪ್ಕೆಟರ್ ಇದ್ದಾರೆ.
ಟಿಸಿಎಸ್ ವಿಶ್ವ 10ಕೆಗಾಗಿ 'ಗೆಟ್ ಆ್ಯಕ್ಟಿವ್ ಎಕ್ಸ್ಪೊ' ಅನ್ನು ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಮೇ 10ರಿಂದ 12ರವರೆಗೆ ನಡೆಯಲಿದೆ. ಹೊಸ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿ ತಮ್ಮ ರನ್ನಿಂಗ್ ಸಂಖ್ಯೆಯನ್ನು ಪಡೆದುಕೊಳ್ಳಬಹುದಾಗಿದೆ.