ಜಯಕ್ಕಾಗಿ ಪುಣೆ ಪರದಾಟ
ಪುಣೆ: ಪ್ಲೇ ಆಫ್ ಹಾದಿಯ ಸನಿಹದಲ್ಲಿರುವ ಮುಂಬೈ ಇಂಡಿಯನ್ಸ್ ಮತ್ತು ಸತತ ಸೋಲಿನಿಂದಾಗಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದುಕೊಂಡಿರುವ ಪುಣೆ ವಾರಿಯರ್ಸ್ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದೊಂದಿಗೆ ಸತತ 8 ಪಂದ್ಯಗಳಲ್ಲಿ ಸೋತ ಪುಣೆಗೆ ಈಗ ಮುಂಬೈ ವಿರುದ್ಧದ ಪಂದ್ಯ ದೊಡ್ಡ ಸವಾಲಾಗಿ ಪರಿಣಮಿಸಿದೆ.
ವಾರಿಯರ್ಸ್ ಇದುವರೆಗೂ ಆಡಿರುವ 13 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಗೆದ್ದಿದೆ. ಆದರೆ, ಮುಂಬೈ ಇಂಡಿಯನ್ಸ್ ಆಡಿರುವ 12 ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಎಲ್ಲ ವಿಭಾಗಗಳಲ್ಲಿ ಸ್ಥಿರ ಪ್ರದರ್ಶನ ತೋರದಿರುವುದು ಪುಣೆ ನಿರಂತರ ಸೋಲಿಗೆ ಪ್ರಮುಖ ಕಾರಣ. ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಮತ್ತು ಏಂಜೆಲೋ ಮ್ಯಾಥ್ಯೂವ್ಸ್ ಮಾತ್ರ ಎರಡಂಕಿ ತಲುಪುವಲ್ಲಿ ಯಶಸ್ವಿಯಾಗಿದ್ದರು.
ಏರೋನ್ ಫಿಂಚ್ ಮತ್ತು ರಾಬಿನ್ ಉತ್ತಪ್ಪ ಮಾತ್ರ ಪುಣೆ ಬ್ಯಾಟಿಂಗ್ ವಿಭಾಗದಲ್ಲಿ ತಕ್ಕ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ಸ್ಟಾರ್ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ವೈಫಲ್ಯ ಕಂಡಿದ್ದಾರೆ. ಇನ್ನು, ಗಾಯಗೊಂಡಿರುವ ಸ್ಟೀವ್ ಸ್ಮಿತ್ ತಮ್ಮ ತವರೂರಾದ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಬೌಲಿಂಗ್ ವೈಫಲ್ಯ ಸಹ ಪುಣೆ ತಂಡಕ್ಕೆ ಆತಂಕವಾಗಿ ಪರಿಣಮಿಸಿದೆ. ವಿಶೇಷವಾಗಿ ಅಂತಿಮ ಓವರ್‌ಗಳಲ್ಲಿ ಹೆಚ್ಚಿನ ರನ್‌ಗಳನ್ನು ನೀಡುತ್ತಿರುವುದು ತಂಡಕ್ಕೆ ದುಬಾರಿಯಾಗುತ್ತಿದೆ. ಬೌಲಿಂಗ್‌ನಲ್ಲಿ ಫಾರ್ಮ್ ಕಳೆದುಕೊಂಡಿರುವ ಅಶೋಕ್ ದಿಂಡಾ ತಂಡಕ್ಕೆ ಇನ್ನಷ್ಟು ಆತಂಕವಾಗಿ ಪರಿಣಮಿಸಿದ್ದಾರೆ.
ಇನ್ನೊಂದೆಡೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 60 ರನ್‌ಗಳಿಂದ ಮತ್ತು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 65 ರನ್‌ಗಳ ಅಂತರದಿಂದ ಜಯ ಸಾಧಿಸಿರುವ ಮುಂಬೈ ತನ್ನ ವಿಶ್ವಾಸವನ್ನು ಇಮ್ಮಡಿಗೊಳಿಸಿಕೊಂಡಿದೆ.
ಆರಂಭಿಕ ಸ್ಟಾರ್ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಸ್ಥಿರ ಬ್ಯಾಟಿಂಗ್ ಪ್ರದರ್ಶಿಸುತ್ತಿಲ್ಲ. ಆದರೆ, ಸಚಿನ್ ಅವರೊಂದಿಗೆ ಆರಂಭಿಕರಾಗಿ ಅಂಗಣಕ್ಕಿಳಿಯುವ ಇನ್ನೊಬ್ಬ ಆಟಗಾರ ಡ್ವೇನ್ ಸ್ಮಿತ್ ತಕ್ಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಹಾಗೂ ರೋಹಿತ್ ಶರ್ಮಾ ತಂಡಕ್ಕೆ ಆಶ್ರಯವಾಗುತ್ತಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ಮತ್ತು ಶ್ರೀಲಂಕಾದ ಲಸಿತ್ ಮಾಲಿಂಗ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸ್ಪಿನ್ ವಿಭಾಗದಲ್ಲಿ ಹರ್ಭಜನ್ ಸಿಂಗ್ ಮತ್ತು ಪ್ರಗ್ಯಾನ್ ಓಜಾ ಇತ್ತೀಚಿನ ಪಂದ್ಯಗಳಲ್ಲಿ ಲಯ ಕಂಡುಕೊಂಡಿದ್ದು ಮುಂಬೈ ತಂಡಕ್ಕೆ ವರವಾಗಿ ಪರಿಣಮಿಸಿದೆ.