ಪ್ಲೇ-ಆಫ್ ಕನಸಲ್ಲಿ ಸನ್ರೈಸರ್ಸ್
ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದ್ದ ಸನ್ರೈಸರ್ಸ್ ಹೈದರಾಬಾದ್, ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ...
ಮೊಹಾಲಿ: ತನ್ನ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿದ್ದ ಸನ್ರೈಸರ್ಸ್ ಹೈದರಾಬಾದ್, ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಎದುರಿಸಲಿದೆ.
ಇದುವರೆಗೆ ತಾನು ಆಡಿರುವ 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿರುವ ಸನ್ರೈಸರ್ಸ್, ಅಂಕಪಟ್ಟಿಯಲ್ಲಿ ತನಗಿಂತಲೂ ಕೆಳ ಸ್ಥಾನದಲ್ಲಿರುವ ಪಂಜಾಬ್ ವಿರುದ್ಧ ಕಣಕ್ಕಿಳಿಯಲಿದೆ. ಅತ್ತ, ಪಂಜಾಬ್ ಇದುವರೆಗೂ ತಾನು ಆಡಿರುವ 12 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದಿದ್ದು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಹಾಗಾಗಿ, ಶನಿವಾರದ ಪಂದ್ಯದಲ್ಲಿ ಹೈದರಾಬಾದ್ ಜಯಗಳಿಸಿದ್ದೇ ಆದಲ್ಲಿ, ನಾಕ್- ಔಟ್ ಹಂತಕ್ಕೆ ಅದು ಮತ್ತಷ್ಟು ಹತ್ತಿರವಾಗಲಿದೆ. ಆದರೆ, ಪಂಜಾಬ್ ತಂಡ, ತಾನು ಆಡಬೇಕಿರುವ ನಾಲ್ಕೂ ಪಂದ್ಯಗಳಲ್ಲಿ ಜಯಗಳಿಸಿದರೆ, ಅದು ನಾಕ್-ಔಟ್ ಹಂತಕ್ಕೆ ಸಾಗುವ ದಾರಿಯಲ್ಲಿ ತನಗೆ ಅಡ್ಡಿಯಾಗಬಹುದಾದ ಇತರೆ ತಂಡಗಳಿಗೆ ಸವಾಲೊಡ್ಡಬಹುದು.
ಹಾಗೆಂದು, ಈ ಪಂದ್ಯವನ್ನು ಪಂಜಾಬ್ ಹಗುರವಾಗಿ ಪರಿಗಣಿಸುವ ಹಾಗಿಲ್ಲ. ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋಲು ಕಂಡಿರುವ ಸನ್ರೈಸರ್ಸ್ ಕೂಡಾ ಈ ಪಂದ್ಯ ಗೆಲ್ಲುವ ಪ್ರಬಲ ಆಕಾಂಕ್ಷೆಯನ್ನು ಹೊಂದಿದೆ.
ಪಂಜಾಬ್ ತಂಡವನ್ನು ಎದುರಿಸುವ ದೃಢವಾದ ಆತ್ಮವಿಶ್ವಾಸ ಸನ್ರೈಸರ್ಸ್ಗೆ ಇದೆ. ಏಕೆಂದರೆ, ಈ ಬಾರಿಯ ಐಪಿಎಲ್ನ ತನ್ನ ಹಿಂದಿನ ಪಂದ್ಯಗಳಲ್ಲಿ ಮುಂಬೈ ಹಾಗೂ ಆರ್ಸಿಬಿ ತಂಡಗಳಿಗೆ ಸೋಲಿನ ರುಚಿ ತೋರಿಸಿದ್ದ ಹೈದರಾಬಾದ್, ಪಂಜಾಬ್ ವಿರುದ್ಧವೂ ಗೆಲವು ಸಾಧಿಸುವ ಸನ್ನಾಹದಲ್ಲಿದೆ. ಈ ಪಂದ್ಯ ಗೆದ್ದಲ್ಲಿ ಮಾತ್ರ ಅದು ಚೆನ್ನೈ ವಿರುದ್ಧ ತಾನು ಕಂಡಿರುವ 77 ರನ್ಗಳ ದೊಡ್ಡ ಸೋಲನ್ನು ಮರೆಯಲು ಸಾಧ್ಯ.
ಇದೀಗ ಪಂಜಾಬ್ ವಿರುದ್ಧದ ಪಂದ್ಯಕ್ಕೆ ತನ್ನದೇ ಆದ ರಣರಂತ್ರವನ್ನು ರೂಪಿಸುವಲ್ಲಿ ನಿರತವಾಗಿರುವ ಸನ್ರೈಸರ್ಸ್ನ ಬೌಲಿಂಗ್ ವಿಭಾಗ ಬಲಿಷ್ಠವಾಗಿಯೇ ಇದೆ. ವಿಶ್ವದ ಶ್ರೇಷ್ಠ ವೇಗಿಗಳಲ್ಲೊಬ್ಬರಾಗಿರುವ ಡೇಲ್ ಸ್ಟೇಯ್ನ್, ಇಶಾಂತ್ ಶರ್ಮಾ, ಈ ಬಾರಿಯ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿರುವ ಬೌಲರ್ಗಳಲ್ಲೊಬ್ಬರಾಗಿರುವ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಹಾಗೂ ಶ್ರೀಲಂಕಾದ ಆಲ್ರೌಂಡರ್ ತಿಸರಾ ಪೆರೇರಾ ಅವರಿಂದ ಕೂಡಿರುವ ಬೌಲಿಂಗ್ ಪಡೆ, ಮೊಹಾಲಿ ಪಿಚ್ನಲ್ಲಿ ಉತ್ತಮ ಪ್ರದರ್ಶನ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಗುರುವಾರ ನಡೆದಿದ್ದ ರಾಜಸ್ಥಾನ ರಾಯಲ್ಸ್ ಹಾಗೂ ಪಂಜಾಬ್ ತಂಡಗಳ ನಡುವಿನ ಪಂದ್ಯದ ವೇಳೆ ಪಂಜಾಬ್ ತಂಡದ ನಾಯಕ ಗಿಲ್ಕ್ರಿಸ್ಟ್ ಅವರು, ಮೊಹಾಲಿ ಪಿಚ್ ಅನ್ನು, 'ನಿಧಾನಗತಿ ಹಾಗೂ ಗಡಸು' ಎಂದು ಬಣ್ಣಿಸಿದ್ದರು. ಹಾಗಾಗಿ, ಬೌಲರ್ಗಳು ಇಲ್ಲಿ ಯಾವ ರೀತಿಯ ಪ್ರದರ್ಶನವನ್ನು ನೀಡಲಿದ್ದಾರೆ ಎಂಬುದನ್ನು ನೋಡಬೇಕಿದೆ.
ಇನ್ನು, ತಂಡದ ಸಮಸ್ಯೆಯೆಂದರೆ, ಅದು ಬ್ಯಾಟಿಂಗ್ ವಿಭಾಗ. ಈ ಬಾರಿಯ ಐಪಿಎಲ್ ಆರಂಭದಲ್ಲಿ ಕೊಂಚ ದುರ್ಬಲವಾಗಿದ್ದ ಸನ್ರೈಸರ್ಸ್ ಬ್ಯಾಟಿಂಗ್ ವಿಭಾಗ, ಶಿಖರ್ ಧವನ್ ಹಾಗೂ ವಿಂಡೀಸ್ ಬ್ಯಾಟ್ಸ್ಮನ್ ಡರೇನ್ ಸಾಮಿ ಅವರು ತಂಡವನ್ನು ಪುನಃ ಸೇರಿಕೊಂಡ ನಂತರ, ಉತ್ತಮವಾಗಿದೆ. ಆದರೆ, ಚೆನ್ನೈ ವಿರುದ್ಧದ ಕಳೆದ ಪಂದ್ಯದಲ್ಲಿ ಈ ಇಬ್ಬರೂ ವಿಫಲರಾಗಿದ್ದರು. ಆದರೆ, ಈ ವೈಫಲ್ಯ ಪುನರಾವರ್ತನೆಯಾಗದಿದ್ದರೆ ಸಾಕಷ್ಟೇ. ಆದರೆ, ಬ್ಯಾಟಿಂಗ್ ವಿಭಾಗದ ನಿಜವಾದ ತಲೆನೋವೆಂದರೆ, ಅದು ನಾಯಕ ಸಂಗಕ್ಕಾರ ಫಾರ್ಮ್ನಲ್ಲಿರದಿರುವುದು.
ಅತ್ತ, ಪಂಜಾಬ್ ತಂಡವೂ ಸನ್ರೈಸರ್ಸ್ನಂತೆಯೇ ಬ್ಯಾಟಿಂಗ್ ವಿಭಾಗದಲ್ಲಿ ಕೆಲವು ಸಮಸ್ಯೆಗಳನ್ನು ಹೊಂದಿದೆ. ಔಟ್-ಆಫ್-ಫಾರ್ಮ್ ಕಾರಣದಿಂದಾಗಿ, ಸ್ವಯಂನಿವೃತ್ತಿ ಹೊಂದಿದ್ದ ನಾಯಕ ಗಿಲ್ಕ್ರಿಸ್ಟ್, ರಾಜಸ್ಥಾನ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಪುನಃ ತಂಡಕ್ಕೆ ಮರಳಿ, 42 ರನ್ ಗಳಿಸಿದ್ದರು. ಇದು, ತಂಡದ ಪಾಲಿಗೆ ಆಶಾದಾಯಕ ಬೆಳವಣಿಗೆಯಾಗಿದ್ದರೂ, ಗಿಲ್ಕ್ರಿಸ್ಟ್ ಇದೇ ರೀತಿ ಸ್ಥಿರ ಪ್ರದರ್ಶನವನ್ನು ನೀಡುತ್ತದೆಯೇ ಎಂಬುದನ್ನು ನೋಡಬೇಕಿದೆ.
ಆದರೆ, ಬ್ಯಾಟಿಂಗ್ ವಿಭಾಗದಲ್ಲಿ ಇರುವ ಮತ್ತೊಂದು ಕೊರತೆಯೆಂದರೆ, ಡೇವಿಡ್ ಹಸ್ಸಿ, ಶಾನ್ ಮಾರ್ಷ್, ಮನದೀಪ್ ಸಿಂಗ್ ಹಾಗೂ ಡೇವಿಡ್ ಮಿಲ್ಲರ್ ಅವರಂಥಾ ಘಟಾನುಘಟಿಗಳಿದ್ದರೂ, ಇವರೆಲ್ಲರೂ ಸಾಂಘಿಕ ಪ್ರದರ್ಶನ ನೀಡಿಲ್ಲ. ಹೀಗಾಗಿಯೇ, ಕೆಲ ಪಂದ್ಯಗಳಲ್ಲಿ ತಂಡ ಸೋತಿತ್ತು.
ಇನ್ನು, ಪಂಜಾಬ್ನ ನಿಜವಾದ ಶಕ್ತಿಯಿರುವುದು ಅದರ ಬೌಲಿಂಗ್ ವಿಭಾಗದಲ್ಲಿ. ಮಧ್ಯಮ ವೇಗಿ ಪ್ರವೀಣ್ ಕುಮಾರ್, ಪರ್ವಿಂದರ್ ಆವಾನಾ, ಮನ್ಪ್ರೀತ್ ಗೋನಿ, ಲೆಗ್- ಸ್ಪಿನ್ನರ್ ಫಿಯೂಶ್ ಚಾವ್ಲಾ ಹಾಗೂ ತಂಡಕ್ಕೆ ಹೊಸ ಸೇರ್ಪಡೆ ಲೆಗ್-ಸ್ಪಿನ್ನರ್ ಬಿಪುಲ್ ಶರ್ಮಾ ಇದ್ದಾರೆ. ಅಂದಹಾಗೆ, ಈ ಬಾರಿಯ ಐಪಿಎಲ್ನಲ್ಲಿ, ಪಂಜಾಬ್ ತಂಡ ತನ್ನ ತವರಿನಲ್ಲಿ ಆಡುತ್ತಿರುವ ಕೊನೆಯ ಪಂದ್ಯವಿದು. ತವರಿನ ಅಭಿಮಾನಿಗಳನ್ನು ನಿರಾಸೆಗೊಳಿಸದೇ ಪಂದ್ಯವನ್ನು ಗೆಲ್ಲಲು ಅದು ಪ್ರಯತ್ನಿಸಲಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್
ಆ್ಯಡಮ್ ಗಿಲ್ಕ್ರಿಸ್ಟ್, ಶಾನ್ ಮಾರ್ಷ್, ಡೇವಿಡ್ ಹಸ್ಸಿ, ಡೇವಿಡ್ ಆ್ಯಂಡ್ರೂ ಮಿಲ್ಲರ್, ರಿಯಾನ್ ಹ್ಯಾರಿಸ್, ಡಿಮಿಟ್ರಿ ಮಸ್ಕೆರೆನ್ಹ್ಯಾಸ್, ಅಜರ್ ಮೆಹಮೂದ್, ಪಿಯೂಶ್ ಚಾವ್ಲಾ, ಪ್ರವೀಣ್ ಕುಮಾರ್, ಮನದೀಪ್ ಸಿಂಗ್, ಸಿದ್ದಾರ್ಥ್ ಚಿಂಟಿಸ್, ನಿತಿನ್ ಸೈನಿ, ಸನ್ನಿ ಸಿಂಗ್, ಭಾರ್ಗವ್ ಭಟ್, ಬಿಪುಲ್ ಶರ್ಮಾ, ಪಾಲ್ ಚಂದ್ರಶೇಖರ್ ವಾಲ್ತಾಟಿ, ಲ್ಯೂಕ್ ಪ್ಯುಮರ್ಬ್ಯಾಚ್, ಮನ್ಪ್ರೀತ್ ಸಿಂಗ್ ಗೋನಿ, ಗುರ್ಕೀರತ್ ರೂಪಿಂದರ್ ಸಿಂಗ್, ಪರ್ವಿಂದರ್ ಆವಾನಾ, ರಾಜಗೋಪಾಲ್ ಸತೀಶ್.
ಸನ್ರೈಸರ್ಸ್ ಹೈದರಾಬಾದ್
ಕುಮಾರ ಸಂಗಕ್ಕಾರ, ಅಕ್ಷತ್ ರೆಡ್ಡಿ, ಅಮಿತ್ ಮಿಶ್ರಾ, ಆನಂದ್ ರಾಜನ್, ಅಂಕಿತ್ ಶರ್ಮಾ, ಆಶೀಶ್ ರೆಡ್ಡಿ, ಬಿಪ್ಲಾಪ್ ಸಮಾಂತ್ರೇ, ಕೆಮೆರೂನ್ ವೈಟ್, ಕ್ರಿಸ್ ಲಿನ್, ಕ್ಲಿಂಟ್ ಮೆಕೇ, ಡೇಲ್ ಸ್ಟೇನ್, ಡರೇನ್ ಸಾಮಿ, ದ್ವಾರಕ ರವಿತೇಜ, ಹನುಮ ವಿಹಾರಿ, ಇಶಾಂತ್ ಶರ್ಮಾ, ಜೆಪಿ ಡುಮಿನಿ, ಕರಣ್ ಶರ್ಮಾ, ನಥಾನ್ ಮೆಕಲಂ, ಪಾರ್ಥೀವ್ ಪಟೇಲ್, ಕ್ವಿಂಟನ್ ಡಿ ಕಾಕ್, ಸಚಿನ್ ರಾಣಾ, ಶಿಖರ್ ಧವನ್, ಸುದೀಪ್ ತ್ಯಾಗಿ, ತಲವಿವನ್ ಸರ್ಗುನನ್, ತಿಸಾರಾ ಪರೇರಾ, ವೀರ್ ಪ್ರತಾಪ್ ಸಿಂಗ್.