ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮರೀಚಿಕೆಯಾದ ಚಿನ್ನದ ಪದಕ

Rashmi Kasaragodu
Updated On : 11 May 2013, 12:12 pm

ಬೆಂಗಳೂರು: ಅಚಂತಾ ಶರತ್ ಕಮಲ್ ಹಾಗೂ ಮೌಮಾ ದಾಸ್ ಅವರು ಶುಕ್ರವಾರ ನಡೆದ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೋಲು ಕಾಣುವ ಮೂಲಕ,  ಕಾಮನ್ವೆಲ್ತ್ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆಲ್ಲುವ ಭಾರತದ ಕನಸು ಭಗ್ನಗೊಂಡಿತು.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಮೌಮಾ ದಾಸ್ ಹಾಗೂ ಮಾನಿಕಾ ಭಾತ್ರಾ ಅವರು ಪರಾಭವಗೊಂಡರೆ, ಮಹಿಳೆಯರ ಡಬಲ್ಸ್ ವಿಭಾಗದ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ, ಕ್ರಮವಾಗಿ, ಮೌಮಾ ದಾಸ್-ಶಾಮಿನಿ ಜೋಡಿ ಹಾಗೂ ಮಧುರಿಕಾ ಪಾಟ್ಕರ್- ನೇಹಾ ಅಗರ್ವಾಲ್ ಜೋಡಿ ಪರಾಭವಗೊಂಡಿತು.
ಇದರಿಂದಾಗಿ, ಈ ಬಾರಿಯ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದ್ದು, ಚಿನ್ನದ ಪದಕದ ಆಸೆಯನ್ನು ಭಾರತ ಕೈಬಿಟ್ಟಂತಾಗಿದೆ.
ಶುಕ್ರವಾರ ನಡೆದ ಡಬಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ, ಹಾಲಿ ಚಾಂಪಿಯನ್‌ಗಳಾದ ಕಮಲ್ ಹಾಗೂ ಸರಬ್ಜಿತ್ ಸಾಹಾ ಜೋಡಿ, ಅನುನಭವಿ ಜೋಡಿಯಾದ ಇಂಗ್ಲೆಂಡ್‌ನ ಕ್ರಿಸ್ಟೊಫರ್ ಡೊರನ್ ಹಾಗೂ ಸ್ಯಾಮ್ಯುಯೆಲ್ಸ್ ವಾಕರ್ ಅವರ ವಿರುದ್ಧ 11-4, 8-11, 11-6, 10-12, 7-11 ಅಂತರದಲ್ಲಿ ಪರಾಭವಗೊಂಡರು.
ಸಿಂಗಲ್ಸ್‌ನಲ್ಲೂ ಪರಾಭವ: ಇನ್ನು, ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ, ಕಮಲ್ ಅವರು, ಸಿಂಗಾಪುರದ ಹ್ಯು ಲಿ ಅವರ ವಿರುದ್ಧ ಸೆಣೆಸಿದರು. ತೀವ್ರವಾದ ಸ್ಪರ್ಧೆಯ ನಡುವೆಯೂ ಕಮಲ್, ಲಿ ವಿರುದ್ಧ 10-12, 7-11, 13-11, 10-12, 4-11 ಅಂತರದಲ್ಲಿ ಸೋಲು ಕಂಡರು.
ಮೊದಲ ಸೆಟ್‌ನ ಒಂದು ಹಂತದಲ್ಲಿ, ಕಮಲ್ ಹಾಗೂ ಲಿ ಅವರು ಪರಸ್ಪರ ಸಮಬಲ ಸಾಧಿಸಿದ್ದರು. ಆದರೆ, ಈ ಹಂತದಲ್ಲಿ ಕಮಲ್ ಮಾಡಿದ 'ಸರ್ವೀಸ್ ಎರರ್‌' ಅವರಿಗೆ ಮುಳುವಾಗಿ ಪರಿಣಮಿಸಿತು. ಇದರಿಂದ ತೀವ್ರ ಹತಾಶೆಗೊಳಗಾದ ಕಮಲ್, ತಮ್ಮ ಕೈಯ್ಯಲ್ಲಿದ್ದ ರ್ಯಾಕೆಟ್ ಅನ್ನು ನೆಲಕೆಸೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು, ಎರಡನೇ ಸೆಟ್‌ನಲ್ಲಿ ಕಮಲ್‌ಗಿಂತಲೂ ಉತ್ತಮವಾದ ಪ್ರದರ್ಶನ ನೀಡಿದ ಲೀ, ಆ ಸೆಟ್‌ನಲ್ಲೂ ಪರಾಕ್ರಮ ಮೆರೆದು ಗೆಲವು ಸಾಧಿಸಿದರು. ತಂಡಗಳ ಸುತ್ತಿನ ಪೈಪೋಟಿಯಲ್ಲಿ ಕಮಲ್ ವಿರುದ್ಧ ಸೋತಿದ್ದ ಲೀ, ಈ ಬಾರಿ ಯಾವುದೇ ರೀತಿಯಲ್ಲೂ ಕಮಲ್‌ಗೆ ಶರಣಾಗಲಿಲ್ಲ.
ಆದರೆ, ಮೂರನೇ ಸೆಟ್‌ನಲ್ಲಿ ಕಮಲ್ ಕೊಂಚ ಚೇತರಿಸಿಕೊಂಡರು. ಲೀ ಆಟಕ್ಕೆ ಸೆಡ್ಡು ಹೊಡೆದಂತೆ ಆಡಿದ ಅವರು, ಮೂರನೇ ಸೆಟ್‌ನಲ್ಲಿ ಜಯ ಸಾಧಿಸಿದರು.
ಆದರೆ, ಮುಂದಿನ ಸೆಟ್‌ನಲ್ಲಿ ಪುನಃ ಲೀ ಅವರ ಕೈ ಮೇಲಾಯಿತು. ನಾಲ್ಕನೇ ಸೆಟ್‌ನಲ್ಲಿ ಇಬ್ಬರದೂ ಪರಸ್ಪರ ಪ್ರಬಲ ಪೈಪೋಟಿಯಿತ್ತು. ಒಂದು ಹಂತದಲ್ಲಿ ಲೀ ಅವರಿಗಿಂತ ಕೇವಲ ಒಂದು ಅಂಕದ ಅಂತರದಲ್ಲಿದ್ದ ಕಮಲ್, ಪುನಃ ತಪ್ಪು ಮಾಡಿದರು. ಲೀ ಹೊಡೆತವೊಂದಕ್ಕೆ ಪ್ರತಿ ಹೊಡೆತ ನೀಡುವಲ್ಲಿ ವಿಫಲರಾದ ಅವರು, ಎದುರಾಳಿಗೆ ಲಾಭ ಮಾಡಿಕೊಟ್ಟರು. ಲೀ ಹೊಡೆತಕ್ಕೆ ಉತ್ತರ ನೀಡಲು ಕಮಲ್ ರ್ಯಾಕೆಟ್ ಬೀಸಿದರಾದರೂ, ಅದು ಚೆಂಡನ್ನು ಮುಟ್ಟಲೇ ಇಲ್ಲ. ಇದರಿಂದ, ಮತ್ತಷ್ಟು ಖಿನ್ನರಾದಂತೆ ಕಂಡು ಬಂದ ಕಮಲ್, ಈ ಸೆಟ್‌ನಲ್ಲಿ ಪರಾಭಗೊಂಡರು.
ಇನ್ನು, ಐದನೇ ಹಾಗೂ ಅಂತಿಮ ಸೆಟ್‌ನಲ್ಲಿ ಲೀ ಅವರು, ಕಮಲ್ ಅವರಿಗೆ ಚಿಗುರಲು ಯಾವುದೇ ಅವಕಾಶವನ್ನೂ ನೀಡಲಿಲ್ಲ. ಅಂತಿಮವಾಗಿ, ಜಯ ಸಾಧಿಸಿದ ಅವರು, ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾದರು.
ಫೈನಲ್ ಪಂದ್ಯದಲ್ಲಿ ಅವರು, ತಮ್ಮ ದೇಶದವರೇ ಆದ ಜಿಯಾನ್ ಝಾನ್ ಅವರ ವಿರುದ್ಧ ಸೆಣೆಸಲಿದ್ದಾರೆ.
ಮೌಮಾಗೆ ಸೋಲು: ಮಹಿಳೆಯರ ವಿಭಾಗದ ಸಿಂಗಲ್ಸ್ ಸೆಮೀಸ್‌ನಲ್ಲಿ, ಮೌಮಾ ದಾಸ್ ಅವರು, ಪಂದ್ಯಾವಳಿಯಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಮೆಂಗುಯು ಯು ಅವರ ವಿರುದ್ಧ ಸೆಣೆಸಿದರು.
ಮೊದಲ ಸುತ್ತಿನಲ್ಲಿ ಇಬ್ಬರ ಆಟ ಪೈಪೋಟಿಯಿಂದ ಕೂಡಿತ್ತಾದರೂ, ಮೌಮಾ ಅವರು, ಮೆಂಗುಯು ಅವರ ವಿರುದ್ಧ ಸೋಲು ಕಂಡರು.
ಆದರೆ, ಎರಡನೇ ಸೆಟ್ ಹಾಗೂ ಮೂರನೇ ಸೆಟ್‌ನಲ್ಲಿ ಗೆಲವು ಪಡೆದ ಮೌಮಾ ಸೆಟ್‌ಗಳ ಅಂತರವನ್ನು 2-1ಕ್ಕೆ ಹಿಗ್ಗಿಸಿಕೊಂಡರು.
ಆದರೆ, ಅಂತಿಮ ಹಂತದ ಸೆಟ್‌ಗಳಲ್ಲಿ ಪುನಃ ಶರಣಾದ ಅವರು, ಪಂದ್ಯವನ್ನು ಎದುರಾಳಿಗೆ ಬಿಟ್ಟುಕೊಟ್ಟರು.
ಮಹಿಳೆಯರ ಡಬಲ್ಸ್‌ನಲ್ಲೂ ಸೋಲು: ಇನ್ನು, ಮಹಿಳೆಯರ ಡಬಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ, ಮೌಮಾ ದಾಸ್ ಹಾಗೂ ಕೆ. ಶಾಮಿನಿ, ಅವರು ಎದುರಾಳಿ ಜೋಡಿಯಾದ ಫೆಂಗ್ ಟಿಯಾನ್‌ವೆಯ್ ಹಾಗೂ ಮೆಯುಂಗು ಯು ವಿರುದ್ಧ 0-3 ಅಂತರದ ಸೋಲು ಕಂಡರು.
ಇದೇ ವಿಭಾಗದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ, ಭಾರತದ ಮಧುರಿಕಾ ಪಾಟ್ಕರ್ ಹಾಗೂ ನೇಹಾ ಅಗರ್ವಾಲ್ ಜೋಡಿ, ಇಂಗ್ಲೆಂಡ್‌ನ ಜೊವಾನ್ನಾ ಪಾಟ್ಕರ್ ಹಾಗೂ ಕೆಲ್ಲಿ ಸಿಬ್ಲೆ ಅವರ ವಿರುದ್ಧ 1-3 ಅಂತರದಲ್ಲಿ ಸೋಲು ಕಂಡರು.
ಈ ಬಾರಿಯ ಪಂದ್ಯಾವಳಿಯಲ್ಲಿ ಡಬಲ್ಸ್ ವಿಭಾಗ ಸೇರಿದಂತೆ, ನಡೆದ ಎಂಟು ಸೆಮಿಫೈನಲ್ ಪಂದ್ಯಗಳು ನಡೆದಿದ್ದು, ಒಟ್ಟು ಆರು ಸೆಮಿಫೈನಲ್ ಪಂದ್ಯಗಳಲ್ಲಿ ಭಾರತದ ಆಟಗಾರರು ಸ್ಪರ್ಧಿಸಿದ್ದರು. ಆದರೆ, ಯಾರೊಬ್ಬರೂ ಚಿನ್ನದ ಪದಕ ತರಲಿಲ್ಲ.
ಈ ಬಾರಿಯ ಕಾಮನ್ವೆಲ್ತ್ ಟಿಟಿ ಪಂದ್ಯಾವಳಿಯಲ್ಲಿ ಭಾರತ 7 ಕಂಚು, 2 ಬೆಳ್ಳಿ ಪದಕಗಳನ್ನು ಬಾಚಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement