ಗಂಭೀರ್- ವಿರಾಟ್ ಕೊಹ್ಲಿ ಪಡೆ ಮುಖಾಮುಖಿ
ರಾಂಚಿ: ಪ್ಲೇ ಆಫ್ ಹಂತ ಪ್ರವೇಶಿಸುವ ತವಕದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸ್ಥಿರ ಪ್ರದರ್ಶನ ನೀಡಲು ಒದ್ದಾಡುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸೆಣಸಲಿವೆ.
ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋಲನುಭವಿಸಿರುವ ಕೋಲ್ಕತಾ ತಂಡ ಈಗ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ಬಲಿಷ್ಠ ತಂಡ ಎನಿಸಿಕೊಂಡಿರುವ ಆರ್‌ಸಿಬಿ ವಿರುದ್ಧ ಕೋಲ್ಕತಾ ಸೇಡು ತೀರಿಸಿಕೊಳ್ಳುವುದೇ ಎಂಬುದು ಕುತೂಹಲ ಮೂಡಿಸಿದೆ. ಗೇಯ್ಲ್ ಸೇರಿದಂತೆ ತಂಡದ ಇತರ ಅಗ್ರ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ನಲ್ಲಿ ಮಿಂಚುವುದರೊಂದಿಗೆ, ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಆದರೆ, ಕಳೆದ ಪಂದ್ಯದಲ್ಲಿ ಗೆದ್ದಿರುವ ಉಭಯ ತಂಡಗಳೂ ಈ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿವೆ. ಕೋಲ್ಕತಾ ಪುಣೆ ವಾರಿಯರ್ಸ್ ವಿರುದ್ಧ ಜಯ ಸಾಧಿದ್ದರೆ, ಆರ್‌ಸಿಬಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ರೋಚಕ ಜಯ ಸಾಧಿಸಿತ್ತು.
ಆದರೆ, ಕಳೆದ ಕೆಲ ಪಂದ್ಯಗಳಲ್ಲಿ ಕ್ರಿಸ್ ಗೇಯ್ಲ್ ವೈಫಲ್ಯ ಕಾಣುತ್ತಿರುವುದು ಆರ್‌ಸಿಬಿಯಲ್ಲಿ ಆತಂಕ ಮೂಡಿಸಿದೆ. ಗೇಯ್ಲ್ ವಿಫಲವಾದಾಗ ಪಂದ್ಯವನ್ನು ನಿಭಾಯಿಸುವಲ್ಲಿ ನಾಯಕ ವಿರಾಟ್ ಕೊಹ್ಲಿ ಯಶಸ್ವಿಯಾಗುತ್ತಿದ್ದಾರೆ.
ಇನ್ನು ಚೇತೇಶ್ವರ ಪೂಜಾರ ಆರ್‌ಸಿಬಿ ಪರ ಮಹತ್ವದ ಪಾತ್ರ ವಹಿಸುವ ಸಾಧ್ಯತೆಗಳಿವೆ. ಆದರೆ, ಪೂಜಾರ್ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾಗಬೇಕು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ. ಮೊಯ್ಸಿಸ್ ಹೆನ್ರಿಕ್ಸ್ ಮತ್ತು ಎಬಿ ಡಿವಿಲಿಯರ್ಸ್ ತಮ್ಮ ಕೊಡುಗೆಯನ್ನು ನೀಡುತ್ತಿದ್ದು, ಬ್ಯಾಟಿಂಗ್ ವಿಭಾಗದ ಬಗ್ಗೆ ಆರ್‌ಸಿಬಿಗೆ ಅಷ್ಟೇನೂ ಆತಂಕವಿಲ್ಲ.
ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿಗೆ ಮಧ್ಯಮ ವೇಗದ ಬೌಲರ್ ಜಯದೇವ್ ಉನಾದ್ಕತ್ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್ ಬೌಲಿಂಗ್ ಪ್ರದರ್ಶಿಸಿದ್ದ ಜಯದೇವ್ ಉನಾದ್ಕತ್ ಕೇವಲ 25 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು.
ಆದರೆ, ವಿನಯ್ ಕುಮಾರ್ ಮತ್ತು ಹೆನ್ರೀಕೆಸ್ ಓವರ್ ಒಂದಕ್ಕೆ 10 ರನ್ ನೀಡಿ ದುಬಾರಿ ಎನಿಸಿದ್ದರು.
ಇನ್ನು ಕೋಲ್ಕತಾ ನೈಟ್ ರೈಡರ್ಸ್ ನಾಯಕ ಗೌತಮ್ ಗಂಭೀರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು ತಂಡಕ್ಕೆ ಆಶ್ರಯವಾಗುತ್ತಿದ್ದಾರೆ.
ಆದರೆ, ಹಿರಿಯ ಆಲ್ರೌಂಡ್ ಆಟಗಾರ ಜಾಕ್ ಕಾಲಿಸ್ ಮತ್ತು ಯೂಸುಫ್ ಪಠಾಣ್ ಫಾರ್ಮ್ ಕಂಡುಕೊಳ್ಳುವಲ್ಲಿ ಎಡುವುತ್ತಿದ್ದಾರೆ.
ಕೆಕೆಆರ್ ಬೌಲಿಂಗ್ ವಿಭಾಗದಲ್ಲಿ ಸುನಿಲ್ ನಾರಾಯಣ್ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಹೇಗೆ ಕಟ್ಟಿ ಹಾಕುತ್ತಾರೆ ಎಂಬುದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿಸಿದೆ.
ಎಲ್ಲ ರೀತಿಯಿಂದ ಉಭಯ ತಂಡಗಳ ಬಲಾಬಲವನ್ನು ಪರಿಶೀಲಿಸಿದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಗೆಲ್ಲುವ ಫೇವರಿಟ್.