ಪ್ಲೇ-ಆಫ್ ಹೊಸ್ತಿಲಲ್ಲಿ ಮುಂಬೈ
ಪುಣೆ: ಬೌಲರ್ಗಳ ಶಿಸ್ತಿನ ದಾಳಿಯ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತು.
ಈ ಜಯದೊಂದಿಗೆ ಮುಂಬೈ ಪ್ಲೇ ಆಫ್ ಹಂತದ ಸನಿಹಕೆ ಹೆಜ್ಜೆ ಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅತಿಥೇಯ ಪುಣೆ ವಾರಿಯರ್ಸ್ ತಂಡ, ಮುಂಬೈನ ಬೌಲಿಂಗ್ ದಾಳಿಗೆ ಬೆದರುವ ಮೂಲಕ ನಿಗದಿತ ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿತು. ನಂತರ ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ 18.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತು.
ಮುಂಬೈ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಜಾನ್ಸನ್ ತಮ್ಮ ನಾಲ್ಕು ಓವರ್ಗಳಲ್ಲಿ ಕೇವಲ 8 ರನ್ ನೀಡಿ 2 ವಿಕೆಟ್ ಕಬಳಿಸಿದರು. ನಂತರ ಬ್ಯಾಟಿಂಗ್ನಲ್ಲಿ ಮುಂಬೈಗೆ ಆಶ್ರಯವಾದ ನಾಯಕ ರೋಹಿತ್ ಶರ್ಮಾ 41 ಎಸೆತಗಳಲ್ಲಿ 37 ರನ್ ಗಳಿಸುವ ಮೂಲಕ ತಂಡವನ್ನು ಜಯದ ಸನಿಹಕ್ಕೆ ತಲುಪಿಸಿದರು.
ಮುಂಬೈನ ಇನ್ನಿಬ್ಬರು ಬೌಲರ್ಗಳಾದ ವೇಗಿ ಲಸಿತ್ ಮಾಲಿಂಗ ಮತ್ತು ಅಬು ನೆಚಿಮ್ ಅಹ್ಮದ್ ಅವರು ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು.
ಸ್ಪಿನ್ನರ್ ಹರ್ಭಜನ್ ಸಿಂಗ್ ಸಹ ನಾಲ್ಕು ಓವರ್ ಬೌಲಿಂಗ್ನಲ್ಲಿ ಕೇವಲ 14 ರನ್ ನೀಡಿ 1 ವಿಕೆಟ್ ಪಡೆದು ಗಮನ ಸೆಳೆದರು. ಪುಣೆ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಯುವರಾಜ್ ಸಿಂಗ್ ವಿಕೆಟ್ ಕಬಳಿಸಿದ ಹರ್ಭಜನ್ ಪುಣೆ ತಂಡದ ರನ್ಗತಿ ಕುಗ್ಗುವಂತೆ ನೋಡಿಕೊಂಡರು.
ಮುಂಬೈ ಮೊದಲ ಓವರ್ನಲ್ಲೇ ಆರಂಭಿಕ ಆಟಗಾರ ಡ್ವೇನ್ ಸ್ಮಿತ್ ವಿಕೆಟ್ ಕಳೆದುಕೊಂಡು ಆತಂಕದಲ್ಲಿ ಸಿಲುಕಿತ್ತು. ಸಚಿನ್ ತೆಂಡೂಲ್ಕರ್ ಉತ್ತಮ ಬ್ಯಾಟಿಂಗ್ಗೆ ಮುಂದಾಗುತ್ತಿದ್ದಂತೆ, ಅಜಂತಾ ಮೆಂಡೀಸ್ ಬೌಲಿಂಗ್ನಲ್ಲಿ ಮನೀಶ್ ಪಾಂಡೆಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ದಿನೇಶ್ ಕಾರ್ತಿಕ್ ಸಹ ಯುವರಾಜ್ ಸಿಂಗ್ ಬೌಲಿಂಗ್ನಲ್ಲಿ ಪಾಂಡೆಗೆ ಕ್ಯಾಚ್ ನೀಡಿದ್ದು ಮುಂಬೈ ತಂಡದಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿತ್ತು. ಆದರೆ, ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ರೋಹಿತ್ ಶರ್ಮಾ ತಂಡವನ್ನು ಜಯದ ದಡದತ್ತ ಸಾಗಿಸಿದರು.
ರೋಹಿತ್ ಜತೆಗೆ ತಕ್ಕ ಸಾಥ್ ನೀಡಿದ ಅಂಬಟಿ ರಾಯುಡು (26) ಸಹ ತಂಡ ಜಯದತ್ತ ಸಾಗಲು ನೆರವಾದರು. ಇಬ್ಬರ ಜತೆಯಾಟದಲ್ಲಿ 4ನೇ ವಿಕೆಟ್ಗೆ 54 ರನ್ ಕಲೆ ಹಾಕಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಪುಣೆ ತಂಡದ ಆರಂಭಿಕರಾದ ರಾಬಿನ್ ಉತ್ತಪ್ಪ (11) ಮತ್ತು ಏರಾನ್ ಫಿಂಚ್ (10) ತಂಡಕ್ಕೆ ಭದ್ರ ಬುನಾದಿ ಹಾಕುವಲ್ಲಿ ವೈಫಲ್ಯ ಕಂಡರು. ಉತ್ತಪ್ಪ ಮಾಲಿಂಗ ಎಸೆತದಲ್ಲಿ ಎಲ್ಬಿಗೆ ಬಲಿಯಾದರೆ, ಫಿಂಚ್ ಜಾನ್ಸನ್ ಬೌಲಿಂಗ್ನಲ್ಲಿ ಸ್ಮಿತ್ಗೆ ಕ್ಯಾಚ್ ನೀಡಿದರು.
ಆದರೆ, ನಂತರ ಬಂದ ಯುವರಾಜ್ ಸಿಂಗ್ (33) ಮತ್ತು ಮನೀಶ್ ಪಾಂಡೆ (29) ಜತೆಯಾಟದಲ್ಲಿ 59 ರನ್ ಗಳಿಸುತ್ತಿದ್ದಂತೆ, ಪಾಂಡೆ ಮಾಲಿಂಗ ಎಸೆತದಲ್ಲಿ ರಾಯುಡುಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಅನಂತರ ಯುವರಾಜ್ ಸಹ ಹರ್ಭಜನ್ ಸಿಂಗ್ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾದರು. ಅಲ್ಲಿಗೆ ಪುಣೆ ಬ್ಯಾಟಿಂಗ್ ಭರಾಟೆಯೇ ನಿಂತು ಹೋಯಿತು.
ಹೀಗಾಗಿ ಒಂದು ಹಂತದಲ್ಲಿ 84 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಪುಣೆ, ಪಾಂಡೆ ಮತ್ತು ಯುವರಾಜ್ ವಿಕೆಟ್ ಕಳೆದುಕೊಂಡ ನಂತರ ಬಂದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ವಾರಿಯರ್ಸ್ ಪರ ಅಶೋಕ್ ದಿಂಡಾ 2 ವಿಕೆಟ್ ಪಡೆದರೆ, ರಿಚರ್ಡ್ಸ್ನ್, ಮೆಂಡೀಸ್ ಹಾಗೂ ಯುವರಾಜ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.
ಮುಂಬೈ ಪರ ಆಕರ್ಷಕ ಬೌಲಿಂಗ್ ದಾಳಿ ನಡೆಸಿದ ಮಿಚೆಲ್ ಜಾನ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ಬೋರ್ಡ್
ಪುಣೆ ವಾರಿಯರ್ಸ್: 112/8 (20 ಓವರ್)
ರಾಬಿನ್ ಉತ್ತಪ್ಪ ಎಲ್ಬಿಡಬ್ಲ್ಯೂ ಬಿ ಮಾಲಿಂಗ 11 (13), ಏರೋನ್ ಫಿಂಚ್ ಸಿ ಸ್ಮಿತ್ ಬಿ ಜಾನ್ಸನ್ 10 (11), ಮನಿಷ್ ಪಾಂಡೆ ಸಿ ರಾಯುಡು ಬಿ ಮಾಲಿಂಗ 29 (29), ಯುವರಾಜ್ ಸಿಂಗ್ ಎಲ್ಬಿಡಬ್ಲ್ಯೂ ಬಿ ಹರ್ಭಜನ್ ಸಿಂಗ್ 33 (29), ಏಂಜೆಲೊ ಮ್ಯಾಥ್ಯೂಸ್ ರನೌಟ್ (ತೆಂಡೂಲ್ಕರ್) 0 (2), ಅಭಿಷೇಕ್ ನಾಯರ್ ಸಿ ಹರ್ಭಜನ್ ಸಿಂಗ್ ಬಿ ಅಹ್ಮದ್ 11 (14), ರಿಚರ್ಡ್ಸನ್ ಸಿ ಹರ್ಭಜನ್ ಸಿಂಗ್ ಬಿ ಜಾನ್ಸನ್ 8 (16), ಪರ್ವೇಜ್ ರಸೂಲ್ ಅಜೇಯ 4 (5), ಭುವನೇಶ್ವರ್ ಕುಮಾರ್ ಸಿ ಸ್ಮಿತ್ ಬಿ ಅಹ್ಮದ್ 2 (2). ಇತರೆ 4.
ವಿಕೆಟ್ ಪತನ: 1-13, 2-25, 3-84, 4-85, 5-85, 6-99, 7-109, 8-112.
ಬೌಲಿಂಗ್: ಜಾನ್ಸನ್ 4-0-8-2, ಅಹ್ಮದ್ 4-0-27-2, ಮಾಲಿಂಗ 4-0-27-2, ಪ್ರಗ್ಯಾನ್ ಓಜಾ 3-0-28-0, ಹರ್ಭಜನ್ ಸಿಂಗ್ 4-0-14-1, ಮ್ಯಾಕ್ಸ್ವೆಲ್ 1-0-5-0.
ಮುಂಬೈ ಇಂಡಿಯನ್ಸ್: 116/5 (18.5 ಓವರ್)
ಡ್ವೈನ್ ಸ್ಮಿತ್ ಬೌಲ್ಡ್ ಬಿ ದಿಂಡಾ 0 (1), ತೆಂಡೂಲ್ಕರ್ ಸಿ ಪಾಂಡೆ ಬಿ ಮೆಂಡಿಸ್ 15 (13), ದಿನೇಶ್ ಕಾರ್ತಿಕ್ ಸಿ ಪಾಂಡೆ ಬಿ ಯುವರಾಜ್ ಸಿಂಗ್ 17 (15), ರೋಹಿತ್ ಶರ್ಮಾ ಸಿ ದಿಂಡಾ ಬಿ ರಿಚರ್ಡ್ಸನ್ 37 (41), ಆಂಬಟಿ ರಾಯುಡು ಸಿ ಮ್ಯಾಥ್ಯೂಸ್ ಬಿ ದಿಂಡಾ 26 (23), ಮ್ಯಾಕ್ಸ್ವೆಲ್ ಅಜೇಯ 13 (7), ಹರ್ಭಜನ್ ಸಿಂಗ್ ಅಜೇಯ 4 (3). ಇತರೆ 4.
ವಿಕೆಟ್ ಪತನ: 1-0, 2-25, 3-39, 4-93, 5-112.
ಬೌಲಿಂಗ್: ದಿಂಡಾ 4-0-35-2, ಭುವನೇಶ್ವರ್ ಕುಮಾರ್ 2-0-12-0, ರಿಚರ್ಡ್ಸನ್ 3.5-0-28-1, ಅಜಂತಾ ಮೆಂಡಿಸ್ 4-0-15-1, ಯುವರಾಜ್ ಸಿಂಗ್ 4-0-21-1, ಪರ್ವೇಜ್ ರಸೂಲ್ 1-0-5-0.
ಪಂದ್ಯಶ್ರೇಷ್ಠ: ಮಿಚೆಲ್ ಜಾನ್ಸನ್