ಐಸಿಸಿಗೆ ಬಿಸಿಸಿಐ ಧಮುಕಿ
ಐಸಿಸಿ ಕ್ರಿಕೆಟ್ ಸಮಿತಿಗೆ ಬಿಸಿಸಿಐ ಬೆಂಬಲಿತ ಭಾರತದ ಮಾಜಿ ಲೆಗ್ ಸ್ಪಿನ್ನರ್...
ನವದೆಹಲಿ: ಐಸಿಸಿ ಕ್ರಿಕೆಟ್ ಸಮಿತಿಗೆ ಬಿಸಿಸಿಐ ಬೆಂಬಲಿತ ಭಾರತದ ಮಾಜಿ ಲೆಗ್ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್ ಅವರನ್ನು ಸದಸ್ಯರಾಗಿರುವ ವಿವಾದದ ಬಿಸಿ ಹೆಚ್ಚಾಗುತ್ತಿದೆ. ತಾನು ಬೆಂಬಲಿಸಿರುವ ಲಕ್ಷ್ಮಣ್ ಅವರು ಐಸಿಸಿ ಕ್ರಿಕೆಟ್ ಸಮಿತಿಗೆ ಆಯ್ಕೆಯಾದ ಬೆನ್ನಲ್ಲೇ ತನ್ನ ವಿರುದ್ಧ ಹರಿದುಬರುತ್ತಿರುವ ವಿವಾದ ಹಾಗೂ ಟೀಕೆಗಳಿಗೆ ಸೆಡ್ಡು ಹೊಡೆದಿರುವ ಭಾರತೀಯ ಕ್ರಿಕೆಟ್ ಸಂಸ್ಥೆ (ಬಿಸಿಸಿಐ), ಶೀಘ್ರದಲ್ಲೇ ಆರಂಭವಾಗುತ್ತಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಿಂದ ತಾನು ಹೊರಗುಳಿಯುವುದಾಗಿ ಬೆದರಿಕೆಯೊಡ್ಡಿದೆ.
ಟೆಸ್ಟ್ ಪಂದ್ಯಗಳನ್ನಾಡುವ 10 ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳ ನಾಯಕರಿಂದ ನಡೆದಿದ್ದ ಮತದಾನದಲ್ಲಿ ಶಿವರಾಮಕೃಷ್ಣನ್ ಅವರು ಐಸಿಸಿ ಕ್ರಿಕೆಟ್ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದರು.
ಆದರೆ, ಈ ಆಯ್ಕೆಯು ಅಧಿಕೃತವಾಗಿ ಹೊರಬೀಳುತ್ತಲೇ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ, ಲಕ್ಷ್ಮಣ್ ಅವರ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿತ್ತು. ಅಲ್ಲದೇ, ಟೆಸ್ಟ್ ಆಡುವ ತಂಡಗಳ ನಾಯಕರ ಮೇಲೆ ಪ್ರಭಾವ ಬೀರಿದ್ದ ಬಿಸಿಸಿಐ, ಶಿವರಾಮಕೃಷ್ಣನ್ ಅವರಿಗೇ ಮತ ಹಾಕುವಂತೆ ಒತ್ತಡ ಹೇರಿದೆ ಎಂದೂ ಆರೋಪಿಸಿತ್ತು.
ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯ ಮಾತುಗಳನ್ನೇ ಪುನರುಚ್ಚರಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಸಂಸ್ಥೆಗಳ ಒಕ್ಕೂಟ (ಎಫ್ಐಸಿಎ)ದ ಮುಖ್ಯ ಕಾರ್ಯನಿರ್ವಾಹಕ ಟಿಮ್ ಮೇ ಅವರು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
ತಾನು ಬೆಂಬಲಿಸಿರುವ ಅಭ್ಯರ್ಥಿಯನ್ನೇ ಐಸಿಸಿ ಕ್ರಿಕೆಟ್ ಮಂಡಳಿಗೆ ಸದಸ್ಯರನ್ನಾಗಿ ಆರಿಸಬೇಕೆಂದು ಬಿಸಿಸಿಐ, ಟೆಸ್ಟ್ ತಂಡಗಳ ನಾಯಕರ ಮೇಲೆ ಪ್ರಭಾವ ಬೀರಿದ್ದಕ್ಕೆ ಸಾಕ್ಷಿ-ಆಧಾರಗಳು ತಮ್ಮಲ್ಲಿವೆ ಎಂದು ಹೇಳಿರುವ ಟಿಮ್ ಮೇ, 'ಒತ್ತಡ ತಂತ್ರ ಅನುಸರಿಸಿರುವ ಬಿಸಿಸಿಐ, ನಾಯಕರ ಇಷ್ಟದಂತೆ ಅವರು ಮತದಾನ ಮಾಡುವ ಹಕ್ಕನ್ನು ಕಸಿದುಕೊಂಡಿದೆ' ಎಂದೂ ಗಂಭೀರ ಆರೋಪ ಮಾಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳಿಂದ ಅಸಮಾಧಾನಗೊಂಡಿರುವ ಬಿಸಿಸಿಐ, ಈಗ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವ ಬೆದರಿಕೆಯನ್ನು ಹಾಕಿದೆ.
ಟಿಮ್ ಆರೋಪವೇನು?: ಟಿಮ್ ಹೇಳುವ ಪ್ರಕಾರ, ಐಸಿಸಿ ಕ್ರಿಕೆಟ್ ಸಮಿತಿಯ ಸದಸ್ಯತ್ವಕ್ಕಾಗಿ ಒಟ್ಟು ಎರಡು ಬಾರಿ ಮತದಾನ ನಡೆದಿದೆ. ಮೊದಲ ಬಾರಿ ನಡೆದ ಮತದಾನದಲ್ಲಿ, ಟಿಮ್ ಮೇ ಅವರು 9-1 ಮತಗಳ ಅಂತರದಿಂದ ಎದುರಾಳಿ ಶಿವರಾಮಕೃಷ್ಣನ್ ಅವರ ವಿರುದ್ಧ ಜಯ ಸಾಧಿಸಿದ್ದಾರೆ.
ಆದರೆ, ಈ ಮತದಾನ ಸರಿಯಾಗಿ ನಡೆದಿಲ್ಲವೆಂದು ಅಪಸ್ವರವೆತ್ತಿದ ಬಿಸಿಸಿಐ, ಮರು ಮತದಾನ ನಡೆಯುವಂತೆ ಮಾಡಿದೆ. ಎರಡನೇ ಬಾರಿ ಮತದಾನ ನಡೆದಾಗ, ಶಿವರಾಮಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ. ಹೀಗೆ, ಎರಡನೇ ಬಾರಿ ಚುನಾವಣೆ ನಡೆದಾಗ, ಏಷ್ಯಾದ ಇತರ ಕ್ರಿಕೆಟ್ ಮಂಡಳಿಗಳಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳ ಮೇಲೆ ಒತ್ತಡ ಹೇರಿ ಶಿವರಾಮಕೃಷ್ಣನ್ ಅವರೇ ಆಯ್ಕೆಯಾಗುವಂತೆ ಮಾಡಿದೆ ಎಂದಿದ್ದಾರೆ. ಶಿವರಾಮಕೃಷ್ಣನ್ ಅವರ ನೇಮಕ ಕುರಿತಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸೇರಿದಂತೆ, ಕೆಲ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವು. ಅಲ್ಲದೇ, ಶಿವರಾಮಕೃಷ್ಣನ್ ಅವರ ನೇಮಕ ಕುರಿತಂತೆ ಮರು ಮತದಾನಕ್ಕೆ ಆಗ್ರಹಿಸಿದ್ದವು.
ಅಖಾಡ ಸಜ್ಜು: ಲಕ್ಷ್ಮಣ್ ಆಯ್ಕೆಗೆ ಸಂಬಂಧಿಸಿದಂತೆ, ಐಸಿಸಿಯೊಳಗೇ ತನ್ನ ವಿರುದ್ಧ ಹೆಚ್ಚುತ್ತಿರುವ ವಿರೋಧವನ್ನು ಎದುರಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಅದಕ್ಕಾಗಿ, ತನ್ನದೇ ಒಂದು ಪಡೆಯನ್ನು ರಚಿಸಿ, ತನ್ನ ವಿರೋಧಿಗಳನ್ನು ಎದುರಿಸುವ ಅಖಾಡವನ್ನು ಬಿಸಿಸಿಐ ಸಿದ್ಧಗೊಳಿಸುತ್ತಿದೆ.
ಶಿವರಾಮಕೃಷ್ಣನ್ ಅವರ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ನೆರೆ ದೇಶಗಳ ಕ್ರಿಕೆಟ್ ಸಂಸ್ಥೆಗಳಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್ಸಿಬಿ)ಗಳ ಸಹಾಯವನ್ನು ಬಿಸಿಸಿಐ ಕೋರಿದೆ.
ಸ್ಪಷ್ಟನೆ: ಟೆಸ್ಟ್ ನಾಯಕರ ಮೇಲೆ ಪ್ರಭಾವ ಬೀರಿ ಮತದಾನದಲ್ಲಿ ತನ್ನ ಅಭ್ಯರ್ಥಿ ಗೆಲ್ಲುವಂತೆ ಬಿಸಿಸಿಐ ಮಾಡಿದೆ ಎಂಬ ಆರೋಪವನ್ನು ಬಿಸಿಸಿಐ ತಳ್ಳಿ ಹಾಕಿದೆ. ಶುಕ್ರವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, 'ಈ ಆರೋಪ ಆಧಾರ ರಹಿತ' ಎಂದಿದ್ದಾರೆ. ಅಲ್ಲದೇ, ವಿವಾದದ ಹಿನ್ನೆಲೆಯಲ್ಲಿ ಚಾಂಪಿಯನ್ ಟ್ರೋಫಿಯಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಶಿವರಾಮಕೃಷ್ಣನ್ ನೇಮಕಕ್ಕೆ ಸಂಬಂಧಿಸಿದಂತೆ, ಬಿಸಿಸಿಐಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಬೆಂಬಲ ವ್ಯಕ್ತಪಡಿಸಿವೆ ಎಂದೂ ಅವರು ತಿಳಿಸಿದ್ದಾರೆ.