ಕಳಂಕಿತರ ಜೊತೆ ಸಂಧಾನ ಸಭೆ ಬೇಡ: ಒಸಿಎ ಆಗ್ರಹ
ನವದೆಹಲಿ: ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಮಾನತು ಹಿನ್ನೆಲೆಯಲ್ಲಿ, ಬುಧವಾರ ನಡೆಯಲಿರುವ ಸಂಧಾನ ಸಭೆಯಲ್ಲಿ ಭಾರತೀಯ ಕ್ರೀಡಾ ಇಲಾಖೆ ಪ್ರತಿನಿಧಿಗಳ ಬಳಿ ಮಾತ್ರವೇ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ)ಯ ಪ್ರತಿನಿಧಿಗಳು ಮಾತುಕತೆ ನಡೆಸಬೇಕೆಂದು ಒಲಿಂಪಿಕ್ಸ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಆಗ್ರಹಿಸಿದೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಮಾನತು ನಿರ್ಧಾರ ತೆರವುಗೊಳಿಸುವ ಹಿನ್ನೆಲೆಯಲ್ಲಿ, ಬುಧವಾರ ಸ್ವಿಡ್ಜರ್ಲೆಂಡ್‌ನ ಲಾಸೆನ್ನೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಹಾಗೂ ಭಾರತದ ಪ್ರತಿನಿಧಿಗಳ ಸಭೆ ನಡೆಯಲಿದ್ದು, ಈ ಸಭೆಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ)ಯ ಪ್ರಭಾರಿ ಅಧ್ಯಕ್ಷ ವಿ.ಕೆ. ಮಲ್ಹೋತ್ರಾ, ಐಒಎ ಮಹಾಕಾರ್ಯದರ್ಶಿ ರಣಬೀರ್ ಸಿಂಗ್ ಸೇರಿದಂತೆ ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಪಿ.ಕೆ. ದೇಬ್, ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಹಾಗೂ ಒಲಿಂಪಿಕ್ಸ್‌ನ ಸೇಲರ್ ಮಾಲವ್ ಶ್ರಾಫ್ ಅವರಿದ್ದಾರೆ.
ಆದರೆ, ಭಾರತವನ್ನು ಪ್ರತಿನಿಧಿಸುತ್ತಿರುವ ತಂಡದಲ್ಲಿ, ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಇಬ್ಬರು ಪದಾಧಿಕಾರಿಗಳು ಇರುವುದನ್ನು ಒಸಿಎ ವಿರೋಧಿಸಿದೆ. ಕಾಮನ್ವೆಲ್ತ್ ಹಗರಣದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ವಿ.ಕೆ. ಮಲ್ಹೋತ್ರಾ ಹಾಗೂ ರಣಬೀರ್ ಸಿಂಗ್ ಇಬ್ಬರೂ ಹೊತ್ತಿದ್ದು, ಈ ಹಿನ್ನೆಲೆಯಲ್ಲಿ, ಅವರನ್ನು ಸಭೆಗೆ ಐಒಸಿ ಪರಿಗಣಿಸಬಾರದು ಎಂದು ಒಸಿಎ ಆಗ್ರಹಿಸಿದೆ. ಕಳಂಕಿತರನ್ನು ಹೊರತುಪಡಿಸಿದಂತೆ, ಭಾರತೀಯ ನಿಯೋಗದಲ್ಲಿರುವ ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಒಸಿಎ ಆಗ್ರಹಿಸಿದೆ.