ಕಿಂಗ್ಸ್‌ಗೆ ಡೆವಿಲ್ಸ್ ಸವಾಲು
ಧರ್ಮಶಾಲಾ: ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ತವರಿನಲ್ಲಿ ಗುರುವಾರ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಸವಾಲು ನೀಡಲಿದೆ.
ಅದೃಷ್ಟದ ಮೇಲೆ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯುವ ಸ್ಥಿತಿಯಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಭರವಸೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿದೆ. ಇತ್ತ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಪ್ಲೇ ಆಫ್‌ನಿಂದ ಹೊರಗುಳಿದಿದ್ದು, ಪಂದ್ಯಾವಳಿಯಲ್ಲಿ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪಂದ್ಯವನ್ನು ಗೆಲ್ಲಬೇಕೆಂಬ ಉದ್ದೇಶದೊಂದಿಗೆ ಕಣಕ್ಕಿಳಿಯುತ್ತಿದೆ.
ಕಳೆದ ಪಂದ್ಯದಲ್ಲಿ ನಾಯಕ ಗಿಲ್‌ಕ್ರಿಸ್ಟ್ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯಾವಳಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಗಿಲ್ಲಿ ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿರುವುದು ತಂಡಕ್ಕೆ ಹೆಚ್ಚಿನ ಬಲ ತಂದಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಅಜರ್ ಮಹ್ಮೂದ್ ಕೂಡ ತಮ್ಮ ಲಯ ಕಂಡುಕೊಂಡಿರುವುದು ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಉಳಿದಂತೆ ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಮಂದೀಪ್ ಸಿಂಗ್, ಡೇವಿಡ್ ಹಸ್ಸಿ, ಡೇವಿಡ್ ಮಿಲ್ಲರ್, ಶಾನ್ ಮಾರ್ಷ್ ಪಂದ್ಯ ಗೆಲ್ಲಿಸಿಕೊಡಬಲ್ಲ ತಾಕತ್ತು ಹೊಂದಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಪ್ರವಿಣ್ ಕುಮಾರ್, ಅಜರ್ ಮಹ್ಮೂದ್, ಮನ್‌ಪ್ರೀತ್ ಗೋನಿ, ಪರ್ವಿಂದರ್ ಅವಾನ, ಪಿಯೂಶ್ ಚಾವ್ಲಾ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ.
ಇನ್ನು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪರಿಸ್ಥಿತಿಯನ್ನು ನೋಡುವುದಾದರೆ ನಿರಂತರ ಸೋಲಿನಿಂದ ಕಂಗೆಟ್ಟಿದೆ. ಕಳೆದ ಪಂದ್ಯದಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 33ರನ್‌ಗಳ ಹೀನಾಯ ಸೋಲನುಭವಿಸಿದ್ದು, ತಂಡ ಉತ್ಸಾಹಕಳೆದುಕೊಳ್ಳುತ್ತಿದೆ. ಆದರೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ತಪ್ಪಿಸಿಕೊಳ್ಳಬೇಕಾದರೆ ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಗೆಲವು ಅನಿವಾರ್ಯವಾಗಿ ಪರಿಣಮಿಸಿದೆ.
ಡೆಲ್ಲಿ ತಂಡದಲ್ಲಿ ಆರಂಭಿಕ ಜೋಡಿಯಿಂದ ಹಿಡಿದು ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳವರೆಗೂ ಎಲ್ಲರು ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ವೀರೇಂದ್ರ ಸೆಹ್ವಾಗ್ ಹಾಗೂ ಮಹೇಲಾ ಜಯವರ್ಧನೆ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ನಂತರ ಡೇವಿಡ್ ವಾರ್ನರ್ ಕೆಲ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದರಾದರು, ಸ್ಥಿರ ಪ್ರದರ್ಶನ ಹೊರ ಬಂದಿಲ್ಲ.
ಇದರ ಜತೆಗೆ ಪಂಜಾಬ್ ತಂಡ ತವರಿನಲ್ಲಿ ಈ ಪಂದ್ಯವನ್ನಾಡಲಿದ್ದು, ಇದರ ಲಾಭ ಪಡೆಯಲಿದೆ. ಹಾಗಾಗಿ ಈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆಲ್ಲುವ ಫೆವರಿಟ್ ಎನಿಸಿದ್ದು, ಕಿಂಗ್ಸ್ ತಂಡಕ್ಕೆ ಡೆವಿಲ್ಸ್ ಯಾವ ರೀತಿಯ ಸವಾಲೊಡ್ಡಲಿದ್ದಾರೆ ಎಂಬುದನ್ನು ಕಾದುನೋಡಬೇಕು.