ಪುಣೆ ಎದುರು ಕೆಕೆಆರ್ ಪೆಚ್ಚು
ರಾಂಚಿ: ಸತತ 9 ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ಪುಣೆ ವಾರಿಯರ್ಸ್ ತಂಡ ಬುಧವಾರ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 7 ರನ್ಗಳ ಅಂತರದಿಂದ ಜಯ ಸಾಧಿಸಿ ನಿಟ್ಟಿಸಿರು ಬಿಟ್ಟಿದೆ. ಈ ಮೂಲಕ ಪುಣೆ ತಂಡ ಕೆಕೆಆರ್ ತಂಡದ ಪ್ಲೇ ಆಫ್ ಪ್ರವೇಶಿಸುವ ಕೂದಲೆಳೆಯಷ್ಟು ಭರವಸೆಯನ್ನು ಹುಸಿಗೊಳಿಸಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಪುಣೆ ತಂಡ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ನಿಗದಿತ ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 170 ರನ್ ಗಳಿಸಿತ್ತು. ನಂತರ ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 7 ವಿಕೆಟ್ ಕಳೆದುಕೊಂಡು 163 ರನ್ ಕಲೆ ಹಾಕುವ ಮೂಲಕ ಸೋಲೊಪ್ಪಿಕೊಂಡಿತು.
ಪುಣೆ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಮನೀಶ್ ಪಾಂಡೆ (66) ಮತ್ತು ಏರಾನ್ ಫಿಂಚ್ (48), ಯುವರಾಜ್ ಸಿಂಗ್ (30) ತಂಡದ ಮೊತ್ತ 170ಕ್ಕೆ ತಲುಪುವಂತೆ ನೋಡಿಕೊಂಡರು.
ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ಗುಡುಗಿದ ಯುವ ಬ್ಯಾಟ್ಸ್ಮನ್ ಮನೀಶ್ ಪಾಂಡೆ ಮೊತ್ತದಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು. 32 ಎಸೆತಗಳನ್ನು ಎದುರಿಸಿದ ಫಿಂಚ್ ಮೊತ್ತದಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸೇರಿದ್ದವು. ಇನ್ನು ಅಂತ್ಯದಲ್ಲಿ ಯುವರಾಜ್ ಸಿಂಗ್ ಮೊತ್ತದಲ್ಲಿ 3 ಸಿಕ್ಸರ್ ಸಿಡಿಸಿದರು.
ಕೋಲ್ಕತಾ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಯೂಸುಫ್ ಪಠಾಣ್ (72) ಸಹ ಈ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಅರ್ಧ ಶತಕ ದಾಖಲಿಸಿದರು. ಆದರೆ, ಉದ್ದೇಶಪೂರ್ವಕವಾಗಿ ಫೀಲ್ಡಿಂಗ್ಗೆ ಅಡ್ಡಿ ಮಾಡಲು ಮುಂದಾದ ಯುಸುಫ್ ಪಠಾಣ್ ಅಂಪೈರ್ ಕಂಗೆಣ್ಣಿಗೆ ಗುರಿಯಾಗಿ ಔಟ್ ಆದರು.
ಐಪಿಎಲ್ ಇತಿಹಾಸದಲ್ಲೇ ಫೀಲ್ಡಿಂಗ್ಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಔಟಾದ ಆಟಗಾರ ಎಂಬ ಅಪಕೀರ್ತಿಗೆ ಯೂಸುಫ್ ಪಠಾಣ್ ಗುರಿಯಾದರು. ಪುಣೆ ತಂಡದ ಬೌಲರ್ ವ್ಯಾನೆ ಪರ್ನೆಲ್ ಎಸೆತದಲ್ಲಿ ಯಾರ್ಕರ್ ಎದುರಿಸುವಲ್ಲಿ ಯಶಸ್ವಿಯಾದ ಯೂಸುಫ್ ಒಂದು ರನ್ ದಾಖಲಿಸಿದರು. ಆಗ ಬೌಲರ್ ಚೆಂಡನ್ನು ಸಮೀಪಿಸಲು ಯತ್ನಿಸುತ್ತಿದ್ದರು. ಆದರೆ, ಯೂಸುಫ್ ಪಠಾಣ್ ಚೆಂಡನ್ನು ತಮ್ಮ ಕಾಲಿನಿಂದ ತಳ್ಳಿದರು. ಆಗ ವಿಷಯವನ್ನು ಮೂರನೇ ಅಂಪೈರ್ ಗಮನಕ್ಕೆ ತರಲವಾಯಿತು. ಇದನ್ನು ಗಮನಿಸಿದ ಅಂಪೈರ್ ಪಠಾಣ್ ಔಟ್ ಎಂದು ತೀರ್ಪು ನೀಡಿದರು. ಇದು ಕೆಕೆಆರ್ ಸೋಲಿಗೆ ಪ್ರಮುಖ ಕಾರಣವಾಗಿ ಪರಿಣಮಿಸಿತು. ನಂತರ ಬಂದ ಬ್ಯಾಟ್ಸ್ಮನ್ಗಳು 13 ಎಸೆತಗಳಲ್ಲಿ 23 ರನ್ ಪೇರಿಸುವಲ್ಲಿ ವಿಫಲವಾದರು.
ಪುಣೆಯ ಸ್ಪರ್ಧಾತ್ಮಕ ಬೆನ್ನಟ್ಟಿದ ಕೆಕೆಆರ್, ನಾಯಕ ಗೌತಮ್ ಗಂಭೀರ್ ಸೇರಿದಂತೆ, ತನ್ನ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು.
ಯುಸುಫ್ ಪಠಾಣ್ ಮತ್ತು ರೇಯಾನ್ ಟೆನ್ ಡೆಸ್ಕಟ್ (42) ಆಕರ್ಷಕ ಜತೆಯಾಟ ಪ್ರದರ್ಶಿಸುವ ಮೂಲಕ 4ನೇ ವಿಕೆಟ್ಗೆ 98 ರನ್ ಪೇರಿಸಿ ತಂಡವನ್ನು ಜಯದ ಹಾದಿ ಹಿಡಿಸಿದ್ದರು. ಆದರೆ, ಡಸ್ಕಟ್ ಮತ್ತು ಪಠಾಣ್ ವಿಕೆಟ್ ಉರುಳಿದ ನಂತರ ಬಂದ ಕೆಕೆಆರ್ ಬ್ಯಾಟ್ಸ್ಮನ್ಗಳು ತಂಡವನ್ನು ಜಯದ ದಡ ಸೇರಿಸುವಲ್ಲಿ ವೈಫಲ್ಯ ಕಂಡರು.
ಅಂತಿಮವಾಗಿ ತಂಡಕ್ಕೆ ಜಯ ತಂದುಕೊಡುವಲ್ಲಿ ಪುಣೆ ತಂಡದ ಬೌಲರ್ಗಳು ಯಶಸ್ವಿಯಾದರು. ಪುಣೆ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ವ್ಯಾನೆ ಪರ್ನೆಲ್ 2 ವಿಕೆಟ್ ಕಬಳಿಸಿದರೆ, ಭವನೇಶ್ವರ ಕುಮಾರ್ ಮತ್ತು ಈಶ್ವರ ಪಾಂಡೆ ತಲಾ 1 ವಿಕೆಟ್ ಪಡೆದರು.
ಸ್ಕೋರ್ ಬೋರ್ಡ್
ಪುಣೆ ವಾರಿಯರ್ಸ್ 170/4 (20 ಓವರ್)
ಉತ್ತಪ್ಪ ಬಿ ಸೇನನಾಯಕೆ 25(21), ಫಿಂಚ್ ಬಿ ಬಾಲಾಜಿ 48(32), ಮನಿಷ್ ರನೌಟ್ (ಬಿಸ್ಲಾ/ಕಾಲಿಸ್) 66(47), ಯುವರಾಜ್ ಸಿ ಡಸ್ಕೆಟ್ ಬಿ ಕಾಲಿಸ್ 30(20), ರೈಟ್ ಅಜೇಯ 0(0), ಇತರೆ 1
ವಿಕೆಟ್ ಪತನ: 1-41, 2-97, 3-162, 4-170
ಬೌಲಿಂಗ್: ಬಾಲಾಜಿ 4-0-41-1, ಸೇನನಾಯಕೆ 4-0-22-1, ನಾರಾಯಣ್ 4-0-26-0, ಕಾಲಿಸ್ 4-0-48-1, ಭಾಟಿಯಾ 3-0-26-0, ಡಸ್ಕೆಟ್ 1-0-7-0
ಕೋಲ್ಕತಾ ನೈಟ್ರೈಡರ್ಸ್ 163/7 (20 ಓವರ್)
ಗಂಭೀರ್ ಸಿ ಯುವರಾಜ್ ಬಿ ಈಶ್ವರ್ 12(17), ಬಿಸ್ಲಾ ಎಲ್ಬಿಡಬ್ಲ್ಯೂ ಬಿ ಪಾರ್ನೆಲ್ 1(4), ಕಾಲಿಸ್ ಬಿ ಪಾರ್ನೆಲ್ 1(7), ಯೂಸುಫ್ (ಫೀಲ್ಡಿಂಗ್ಗೆ ಅಡ್ಡಿ) 72(44), ಡಸ್ಕೆಟ್ ರನೌಟ್ (ಮುರ್ತಾಜಾ/ಉತ್ತಪ್ಪ) 42(30), ತಿವಾರಿ ಸಿ ಮನಿಷ್ ಬಿ ಭುವನೇಶ್ವರ್ 0(2), ದಾಸ್ ಅಜೇಯ 8(6), ಭಾಟಿಯಾ ರನೌಟ್ (ರೈಟ್/ಉತ್ತಪ್ಪ/ಮ್ಯಾಥ್ಯೂಸ್) 10(9), ಸೇನನಾಯಕೆ ಅಜೇಯ 2(1), ಇತರೆ 15
ವಿಕೆಟ್ ಪತನ: 1-17, 2-25, 3-29, 4-127, 5-128, 6-148, 7-160
ಬೌಲಿಂಗ್: ಭುವನೇಶ್ವರ್ 4-0-22-1, ಪಾರ್ನೆಲ್ 4-0-34-2, ಈಶ್ವರ್ 2-0-17-1, ಮ್ಯಾಥ್ಯೂಸ್ 3-0-25-0, ಮೊರ್ತಾಜಾ 4-0-34-0, ಯುವರಾಜ್ 1-0-11-0, ರೈಟ್ 1-0-11-0, ಗೊಮೇಜ್ 1-0-5-0