ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮರಳಿ ಒಲಿಂಪಿಕ್ಸ್‌ನತ್ತ ?

Vishwanath S
Updated On : 16 May 2013, 12:18 pm

ನವದಹೆಲಿ: ಭಾರತದ ಅಧಿಕಾರಿಗಳು ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ನಡುವೆ ಬುಧವಾರ ಲಾವುಸನ್ನೆಯಲ್ಲಿ ನಡೆದ ಮಹತ್ವದ ಜಂಟಿ ಸಭೆ ಯಶಸ್ವಿಯಾಗಿದೆ.
ಐಒಸಿ ಬೇಡಿಕೆಗಳನ್ನು ಐಒಎ ಒಪ್ಪಿಕೊಂಡಿದ್ದು, ನಿಷೇಧ ತೆರವುಗೊಳಿಸಲು ಅದು ಒಪ್ಪಿಕೊಂಡಿದೆ. ಹೀಗಾಗಿ ನಿಷೇಧಕ್ಕೊಳಗಾಗಿದ್ದ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಮತ್ತೆ ಒಲಿಂಪಿಕ್ಸ್‌ಗೆ ಮರಳುವ ಹಾದಿ ಸುಗಮವಾಗಿ ಮಾರ್ಪಟ್ಟಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆಯ ನಿಯಮಗಳನ್ನು ಅನುಸರಿಸುವಲ್ಲಿ ವಿಫಲವಾಗಿದ್ದಕ್ಕೆ ಮತ್ತು ಚುನಾವಣೆಯಲ್ಲಿ ಕಳಂಕಿತರಿಗೆ ಅವಕಾಶ ನೀಡಿದ್ದಕ್ಕೆ ಕಳೆದ ಡಿಸೆಂಬರ್ 4ರಂದು ಐಒಎ ಮೇಲೆ ನಿಷೇಧ ಹೇರಲಾಗಿತ್ತು. ಹೀಗಾಗಿ ಭಾರತ ಕ್ರೀಡಾ ಭವಿಷ್ಯದ ಹಿನ್ನೆಲೆಯಲ್ಲಿ ಈ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿತ್ತು. ಸಭೆ ಸಕಾರಾತ್ಮಕ ಅಂಶಗಳಿಂದ ಕೂಡಿತ್ತು. ಈಗ ಭಾರತ ಒಲಿಂಪಿಕ್ಸ್‌ಗೆ ಮರಳುವ ಹಾದಿಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಐಒಎ, ಕೇಂದ್ರ ಕ್ರೀಡಾ ಸಚಿವಾಲಯ ಹಾಗೂ ಐಒಸಿ ಅಧಿಕಾರಿಗಳು ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ ಐಒಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಸಭೆಯಲ್ಲಿ ಮಾತುಕತೆ ಫಲಪ್ರದವಾಗಿತ್ತು. ಶೀಘ್ರದಲ್ಲೇ ವಿವಾದ ಬಗೆಹರಿಯಲಿದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ. ಭಾರತ ಒಲಿಂಪಿಕ್ಸ್‌ಗೆ ಮರಳಲು ಐಒಸಿ ಸಮ್ಮತಿ ಸೂಚಿಸಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕ್ರೀಡಾ ಸಚಿವ ಜೀತೇಂದ್ರ ಸಿಂಗ್, ಕ್ರೀಡಾ ಕಾರ್ಯದರ್ಶಿ ಪಿ.ಕೆ ದೇಬ್, ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಶೂಟರ್ ಅಭಿನವ್ ಬಿಂದ್ರಾ ಹಾಗೂ ಒಲಿಂಪಿಯನ್ ಮಲವ್ ಶ್ರಾಫ್ ಸಭೆಯಲ್ಲಿ ಭಾಗವಹಿಸಿದ್ದರು.
ಐಒಎ ನಿಯೋಗದಲ್ಲಿ ಭಾರತೀಯ ಆರ್ಚರಿ ಸಂಸ್ಥೆಯ ಉಪಾಧ್ಯಕ್ಷ ತರ್ಲೋಚನ ಸಿಂಗ್, ಸ್ಕ್ವಾಷ್ ಮತ್ತು ರಾಕೆಟ್ ಫೆಡರೇಷನ್ ಅಧ್ಯಕ್ಷ ಎನ್. ರಾಮಚಂದ್ರನ್, ಎಸ್. ರಂಗನಾಥನ್, ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ಹಾಗೂ ಜಾರ್ಖಂಡ್ ಒಲಿಂಪಿಕ್ಸ್ ಅಸೋಸಿಯೇಷನ್ ಮುಖ್ಯಸ್ಥ ಆರ್.ಕೆ ಆನಂದ್ ಭಾಗವಹಿಸಿದ್ದರು.
ಐಒಎ ಹಂಗಾಮಿ ಅಧ್ಯಕ್ಷ ವಿ.ಕೆ ಮಲ್ಹೋತ್ರಾ ಹಾಗೂ ಐಒಸಿ ಸದಸ್ಯ ರಣ್ಧೀರ್ ಸಿಂಗ್ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ ನಂತರ ಸಭೆ ನಾಟಕೀಯ ತಿರುವು ಪಡೆದುಕೊಂಡಿತ್ತು. ಆದರೆ, ಈಗ ಸಭೆ ಸಸೂತ್ರವಾಗಿ ನಡೆದಿರುವುದು ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ನೆಮ್ಮದಿ ಉಂಟುಮಾಡಿದೆ. ಐಒಎ ನಿಯೋಗದೊಂದಿಗೆ ಐಒಸಿ ಸಭೆ ನಡೆಸುವುದರೊಂದಿಗೆ ದಿನ ಆರಂಭವಾಯಿತು. ನಂತರ ಕ್ರೀಡಾ ಸಚಿವಾಲಯದ ನಿಯೋಗ ಮತ್ತು ಐಒಸಿ ನಡುವೆ ಸಭೆ ನಡೆಯಿತು.
ಈ ಎರಡು ಸಭೆಗಳ ನಂತರ ಜಂಟಿ ಸಭೆಯನ್ನು ಕರೆಯಲಾಯಿತು. ಸಭೆಯಲ್ಲಿ ಪ್ರತಿನಿಧಿಗಳು ಕ್ರೀಡಾ ಮಸೂದೆ ಮತ್ತು ಐಒಎ ಸಂವಿಧಾನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ವಯಸ್ಸು ಮತ್ತು ಅವಧಿ ಬಗ್ಗೆ ಇರುವ ನಿಯಮಗಳು ಮತ್ತು ಐಒಸಿ ಜಾರಿಗೆ ತಂದಿರುವ ಕೆಲ ಸುಧಾರಣೆಗಳನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ನಿಯೋಗ ಒಪ್ಪಿಕೊಂಡಿದೆ ಎನ್ನಲಾಗಿದೆ. ಈ ಬೆಳವಣಿಗೆ ಕುರಿತು ಐಒಸಿ ಶೀಘ್ರದಲ್ಲೇ ಪತ್ರಿಕಾ ಪ್ರಕಟಣೆಯನ್ನು ಹೊರಡಿಸುವ ನಿರೀಕ್ಷೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement