ಮ್ಯಾರಥಾನ್‌ಗೆ ಉದ್ಯಾನನಗರಿ ಸಜ್ಜು
ಬೆಂಗಳೂರು: 19ರಂದು ನಡೆಯಲಿರುವ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಕ್ರೀಡಾಳುಗಳು ಸಾಗುವ ಮಾರ್ಗಗಳ ಪರಿವಿಡಿಯನ್ನು ಮಂಗಳವಾರ ಬಿಡುಗಡೆಗೊಳಿಸಲಾಯಿತು.
ವಿಶ್ವ 10ಕೆ ಮ್ಯಾರಥಾನ್‌ನ ಪ್ರಚಾರದ ಹೊಣೆ ಹೊತ್ತಿರುವ ಪ್ರೊಕ್ಯಾಮ್ ಇಂಟರ್‌ನ್ಯಾಷನಲ್ ವತಿಯಿಂದ ಮಂಗಳವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮ್ಯಾರಥಾನ್ ಸಾಗುವ ಮಾರ್ಗಗಳ ಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ, ಪ್ರೊಕ್ಯಾಮ್ ಇಂಟರ್ ನ್ಯಾಷನಲ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಡಾ. ವಿವೇಕ್ ಬಿ. ಸಿಂಗ್, ರೇಸ್ ನಿರ್ದೇಶಕ ಜೋನ್ಸ್, ಸ್ಪರ್ಧೆಯ ವೈದ್ಯಕೀಯ ನಿರ್ದೇಶಕ ಡಾ. ವಿವೇಕ್ ಜವಳಿ (ಫೋರ್ಟಿಸ್ ಆಸ್ಪತ್ರೆ) ಹಾಗೂ ಎಎಫ್‌ಐ ತಾಂತ್ರಿಕ ಪ್ರತಿನಿಧಿ ಡೇವಿಡ್ ಪ್ರೇಮನಾಥ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮ್ಯಾರಥಾನ್‌ನ ವಿವಿಧ ವಿಭಾಗಗಳ ಸ್ಪರ್ಧೆಗಳು ಚಾಲನೆಗೊಳ್ಳುವ ಬಗ್ಗೆಯೂ ಮಾಹಿತಿ ನೀಡಲಾಯಿತು.
ವಿಶ್ವ ಎಲೈಟ್ ಕೆ ಸ್ಪರ್ಧೆಯು ಬೆಳಗ್ಗೆ 6:30ರಿಂದ ಆರಂಭಗೊಳ್ಳಲಿದೆ. ಸೀನಿಯರ್ ಸಿಟಿಜನ್ಸ್ ವಿಭಾಗದ ಓಟ ಬೆಳಗ್ಗೆ 640ರಿಂದ ಶುರುವಾಗಲಿದೆ. ಇದರ ಹಿಂದೆ, ಬೆಳಗ್ಗೆ 7:15ಕ್ಕೆ ವಿಶ್ವ 10 ಕೆ ಎಲೈಟ್ ಮಹಿಳೆಯರ ವಿಭಾಗದ ಸ್ಪರ್ಧೆ ಆರಂಭಗೊಳ್ಳಲಿವೆ.
ಇದರ ಬೆನ್ನಲ್ಲೇ, 10 ಕೆ ಚಾಲೆಂಜ್ (ಬೆಳಗ್ಗೆ 7: 18), ಓಪನ್ 10 ಕೆ (ಬೆ. 7: 20), ವಿಕಲ ಚೇತನರ ವಿಭಾಗ (ಬೆ. 8:10) ನಡೆಯಲಿವೆ.
ಈ ಸ್ಪರ್ಧೆಗಳು ಆರಂಭಗೊಂಡ ನಂತರ, ಸಿಇಒ ಡ್ಯಾಶ್ (ಬೆ. 8:20), ಮಜ್ಜಾ ರನ್ (ಬೆ. 8:40) ಆರಂಭಗೊಳ್ಳಲಿವೆ.
ಮ್ಯಾರಥಾನ್ ನಡೆಯುವ ಮಾರ್ಗಗಳಲ್ಲಿ 5 ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗಿದೆ. 150 ವೈದ್ಯರನ್ನು ಸ್ಪರ್ಧೆಯ ಸಂದರ್ಭದಲ್ಲಿ ಸೇವೆಗಾಗಿ ನಿಯೋಜಿಸಲಾಗಿದೆ. 6 ಆಂಬುಲೆನ್ಸ್‌ಗಳನ್ನು ತುರ್ತು ಸೇವೆಗಾಗಿ ನಿಯೋಜಿಸಲಾಗಿದೆ. ಭದ್ರತೆಗಾಗಿ, 1500 ಪೊಲೀಸ್ ಸಿಬ್ಬಂದಿಗಳಿದ್ದು, ಖಾಸಗಿ ಭದ್ರತಾ ಸಿಬ್ಬಂದಿಗಳು 600 ಇದ್ದಾರೆ. 1000 ಜನ ಸ್ವಯಂಸೇವಕರೂ ಇದ್ದಾರೆ.