ವಿಶ್ವ ಟಿಟಿ: ಪ್ರಧಾನ ಸುತ್ತಿಗೆ ಮೌಮಾ
ನವದೆಹಲಿ: ಭಾರತದ ಸೌಮ್ಯಜೀತ್ ಘೋಷ್ ಪುರುಷರ ವಿಭಾಗದಲ್ಲಿ, ಮೌಮಾ ದಾಸ್, ಕೆ. ಶ್ಯಾಮಿನಿ ಹಾಗೂ ಮಾಧುರಿಕಾ ಪಾಟ್ಕರ್ ಅವರು ಪ್ಯಾರೀಸ್ನಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ.
ವನಿತೆಯರ ವಿಭಾಗದ ಎರಡನೇ ಅರ್ಹತಾ ಸುತ್ತಿನಲ್ಲಿ ಮೌಮಾ ದಾಸ್, ಟ್ರಿನಿಡಾಡ್ ಮತ್ತು ಟುಬ್ಯಾಗೋದ ರೆನ್ ಚುಂಗ್ ಅವರನ್ನು 4-1 ಅಂತರದಿಂದ ಪರಾಭವಗೊಳಿಸುವ ಮೂಲಕ ಪ್ರಧಾನ ಸುತ್ತಿಗೆ ಪ್ರವೇಶಿಸಿದರು.
ಸೋವೆನಿಯಾದ ಮಾಂಕಾ ಅವರನ್ನು 4-2 ಅಂತರದಿಂದ ಸೋಲಿಸಿದ ಕೆ. ಶ್ಯಾಮಿನಿ ಮತ್ತು ಕಜಕಸ್ತಾನದ ಗುಲ್ಚೆಖರಾ ಖುಸ್ಸೆನೋವಾ ವಿರುದ್ಧ 4-2 ಅಂತರದಿಂದ ವಿಜಯ ಕಂಡ ಮಾಧುರಿಕಾ ಪಾಟ್ಕರ್ ಪ್ರಧಾನ ಸುತ್ತಿಗೆ ಹೆಜ್ಜೆ ಹಾಕಿದರು.
ಆದರೆ, ಭಾರತದ ಇನ್ನೊಬ್ಬ ಮಹಿಳಾ ತಾರೆ ನೇಹಾ ಅಗರ್ವಾಲ್ ಅವರು ಪೊಲೆಂಡ್ನ ಮೋನಿಕಾ ಪೀಟ್ಕೀವಿಚ್ ವಿರುದ್ಧ ಸೋಲನುಭವಿಸಿದರು. ಅಗರ್ವಾಲ್ 11-6, 9-11, 8-11, 6-11, 11-6, 11-8, 10-1 ಸೆಟ್ಗಳಿಂದ ಸೋಲುವ ಮುನ್ನ ಸಮರ್ಥ ಹೋರಾಟ ನಡೆಸಿದರು.
ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬೆಲ್ಜಿಯಂನ ಜೂಲಿಯನ್ ಇಂಡೆಹೆರ್ಬರ್ಗ್ ಅವರನ್ನು 8-11, 11-9, 11-3, 11-5, 5-11, 11-5 ಸೆಟ್ಗಳಿಂದ ಪರಾಭವಗೊಳಿಸಿದ ಭಾರತದ ಸೌಮ್ಯಜೀತ್ ಘೋಷ್ ಪ್ರಧಾನ ಸುತ್ತು ಪ್ರವೇಶಿಸಿದರು. ಘೋಷ್ ಈಗ ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ವಿಶ್ವದ ನಂ.2 ಆಟಗಾರ ಚೀನಾದ ಲಾಂಗ್ ಮಾ ಅವರನ್ನು ಎದುರಿಸಲಿದ್ದಾರೆ.
ಭಾರತದ ಖ್ಯಾತ ಆಟಗಾರ ಅಚಂತಾ ಶರತ್ ಕಮಲ್ ಪ್ರಮುಖ ಸುತ್ತಿನಲ್ಲಿ ಶ್ರೇಯಾಂಕ ಪಡೆದ ಆಟಗಾರ ಎನಿಸಿದ್ದಾರೆ. ಭಾರತದ ಇನ್ನೊಬ್ಬ ಆಟಗಾರ ಅಂತೋನಿ ಅಮಲ್ರಾಜ್ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಶರತ್ ಕಮಲ್ ಮತ್ತು ಶ್ಯಾಮಿನಿ, ಅಮಲ್ರಾಜ್- ಪಾಟ್ಕರ್ ಮತ್ತು ಘೋಷ್ ಮತ್ತು ದಾಸ್ ಪ್ರಮುಖ ಸುತ್ತಿನ ಮೊದಲ ಸುತ್ತಿನಲ್ಲಿ ಜಯದ ನಗೆ ಬೀರಿದ್ದಾರೆ.
ದೇಶಾಯಿ ಮತ್ತು ಘೋಷ್ ಜೋಡಿ ಸೋಲುವುದರೊಂದಿಗೆ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಇನ್ನು ಅಗರ್ವಾಲ್ ಮತ್ತು ಪಾಟ್ಕರ್ ಜೋಡಿ, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಏಕೈಕ ಜೋಡಿಯಾಗಿದೆ.