ಐಪಿಎಲ್ ಸರ್ವಿಸ್
ಐಪಿಎಲ್ನಲ್ಲಿ ಹಣದ ಹೊಳೆ ಹರಿಯುತ್ತದೆ, ಮಾಲೀಕರಿಂದ ಹಿಡಿದು ಆಟಗಾರರವರೆಗೂ ಪ್ರತಿಯೊಬ್ಬರು ಹಣ ಬಾಚಿಕೊಳ್ಳುವ ವಿಷಯ ..
ಐಪಿಎಲ್ನಲ್ಲಿ ಹಣದ ಹೊಳೆ ಹರಿಯುತ್ತದೆ, ಮಾಲೀಕರಿಂದ ಹಿಡಿದು ಆಟಗಾರರವರೆಗೂ ಪ್ರತಿಯೊಬ್ಬರು ಹಣ ಬಾಚಿಕೊಳ್ಳುವ ವಿಷಯ ಪ್ರತಿಯೊಬ್ಬರಿಗೂ ಗೊತ್ತು. ಆದರೆ ಐಪಿಎಲ್ನ ಕೆಲವು ಫ್ರಾಂಚೈಸಿಗಳು ಹಣ ಮಾಡುವುದರ ಜತೆಗೆ ಸಮಾಜಕ್ಕೆ ಕೆಲವು ಸಣ್ಣಪುಟ್ಟ ಅಳಿಲು ಸೇವೆ ಮಾಡುತ್ತಿರುವುದು ಹೆಚ್ಚಿನ ಮಂದಿಗೆ ಗೊತ್ತಿಲ್ಲ.
ಮುಂಬೈ ಇಂಡಿಯನ್ಸ್- ಎಜುಕೇಶನ್ ಫಾರ್ ಆಲ್
ನೀತಾ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಎಜುಕೇಶನ್ ಫಾರ್ ಆಲ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಕ್ಕಳಿಗೆ ಉತ್ತಮ ಮೂಲ ಸೌಕರ್ಯ, ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವುದೇಮ ಮುಖ್ಯ ಉದ್ದೇಶ. ಈ ಕಾರ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 5 ಎನ್ಜಿಒಗಳೊಂದಿಗೆ ಕೈಜೋಡಿಸಿದೆ. ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡದ ಸಚಿನ್ ಅವರ ಹಸ್ತಾಕ್ಷರದ ವ್ರಿಸ್ಟ್ಬ್ಯಾಂಡ್, ತಂಡದ ಜೆರ್ಸಿ ಮುಂತಾದ ವಸ್ತುಗಳ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಈ ಕಾರ್ಯಕ್ಕೆ ಬಳಸುತ್ತಿದೆ. ಅಲ್ಲದೆ ಮುಂಬೈ ತಂಡ ಏ.13ರಂದು ನಡೆದ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದ ಬಹುಮಾನಿತ ಧನವನ್ನು ಬಡ ಮಕ್ಕಳಿಗಾಗಿ ಅರ್ಪಿಸಿದ್ದು, ಈ ಪಂದ್ಯಕ್ಕೆ ನೂರಾರು ಮಕ್ಕಳು ಪಂದ್ಯ ವೀಕ್ಷಿಸಲು ಆಗಮಿಸಿದ್ದರು.
ಆರ್ಸಿಬಿ- ಗೇಮ್ ಫಾರ್ ಗ್ರೀನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪರಿಸರದ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದು, ಪ್ರತಿ ವರ್ಷ ತವರಿನಲ್ಲಿ ನಡೆಯುವ ಒಂದು ಪಂದ್ಯವನ್ನು 'ಗೇಮ್ ಫಾರ್ ಗ್ರೀನ್' ಎಂಬ ಬ್ಯಾನರ್ನಲ್ಲಿ ಆಡುತ್ತದೆ. ಈ ಪಂದ್ಯದಲ್ಲಿ ತಂಡದ ಆಟಗಾರರು ಹಸಿರು ಬಟ್ಟೆ ತೊಡುತ್ತಾರೆ. ಈ ಪಂದ್ಯದಲ್ಲಿ ಟಾಸ್ ವೇಳೆ ಎರಡೂ ತಂಡದ ನಾಯಕರು ಒಂದೊಂದು ಗಿಡವನ್ನು ವಿನಿಮಯಮಾಡಿಕೊಳ್ಳುತ್ತಾರೆ. 2011ರಲ್ಲಿ ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ತಂಡದ ಆಟಗಾರರು ಬೆಂಗಳೂರಲ್ಲಿ ಸೈಕಲ್ ಸವಾರಿ ನಡೆಸಿದ್ದರು. ಅಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಎಸೆಯುವ ತ್ಯಾಜ್ಯಕ್ಕಾಗಿ ಪ್ರತ್ಯೇಕ ಕಸದ ಬುಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ಹಸಿರು- ನೀಲಿ ಬಣ್ಣದ ಕಸದ ಬುಟ್ಟಿಗಳನ್ನಿಡಲಾಗಿದೆ. ಹಸಿರು ಬುಟ್ಟಿಯಲ್ಲಿ ಒಣ ತ್ಯಾಜ್ಯಕ್ಕಾಗಿ ಹಾಗೂ ನೀಲಿ ಕಸದ ಬುಟ್ಟಿ ಹಸಿ ತ್ಯಾಜ್ಯಕ್ಕಾಗಿ ಇಡಲಾಗಿದೆ. ಹಸಿರು ಕಸದ ಬುಟ್ಟಿಯಲ್ಲಿನ ಒಣ ತ್ಯಾಜ್ಯವನ್ನು ರಿಸೈಕ್ಲಿಂಗ್ ಮೂಲಕ ಮರು ಉಪಯೋಗಕ್ಕೆ ಬಳಸಬಹುದು.
ಡೆಲ್ಲಿಯ ಡಿಫರೆಂಟ್ ಪ್ಲಾನ್
ಡೆಲ್ಲಿ ಡೇರ್ಡೆವಿಲ್ಸ್ ಕೂಡ ಬಡ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಮುಂದಾಗಿದೆ. ತಂಡದ ಪ್ರಾಯೋಜಕರಾಗಿರುವ ಮುತ್ತೂಟ್ ಗ್ರೂಪ್, ಸೇವ್ ದಿ ಚಿಲ್ಡ್ರನ್ ಆ್ಯಂಡ್ ಮ್ಯಾಜಿಕ್ ಬಸ್ ಎಂಬ ಎನ್ಜಿಒ ಜತೆಗೂಡಿ ಕಡು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಲು ಮುಂದಾಗಿದೆ. ಈ ಆವೃತ್ತಿಯಲ್ಲಿ ಡೆಲ್ಲಿ ತಂಡ ತಮ್ಮ ಪ್ರತಿ ಪಂದ್ಯದ ಬೌಂಡರಿಗೆ ತಲಾ ರು. 4000 ಹಾಗೂ ಸಿಕ್ಸರ್ಗೆ ರು. 6000 ಹಣವನ್ನು ಬಡ ವಿದ್ಯಾರ್ಥಿಗಳ ಓದಿಗೆ ನೀಡಲಿದೆ.
ರಾಜಸ್ಥಾನ ರಾಯಲ್ಸ್- ಪವರ್ ಲೈಟ್
ರಾಜಸ್ಥಾನ ರಾಯಲ್ಸ್ 'ಪವರ್ ಲೈಟ್ ಎ ವಿಲೇಜ್' ಯೋಜನೆ ಮೂಲಕ ಸೇವೆಯ ಹೆಜ್ಜೆ ಇಟ್ಟಿದ್ದೆ. ಗಾರ್ನಿಯರ್ ಮೆನ್ ಸಹಯೋಗದಲ್ಲಿ ರಾಜಸ್ಥಾನ ತಂಡ ಈ ಕಾರ್ಯ ನಡೆಸುತ್ತಿದ್ದು, ಈ ಮೂಲಕ ದೂರದ ವಿದ್ಯುತ್ರಹಿತ ಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ. ಅಲ್ಲದೆ ಸೌರಶಕ್ತಿಯ ಬಳಕೆ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುತ್ತಿದೆ.
- ಸೋಮಶೇಖರ್ ಪಿ. ಭದ್ರಾವತಿ