ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಳ್ಳಾಟ

ಟೆಸ್ಟ್, ಏಕದಿನ ಹಾಗೂ ಟಿ-20 ಕ್ರಿಕೆಟ್ ಇರುವಾಗ ಐಪಿಎಲ್ ಎಂಬ ಕ್ರಿಕೆಟ್ ಏಕೆ ಬೇಕು?

Rashmi Kasaragodu
Updated On : 22 May 2013, 12:03 pm

ಅತಿಯಾದರೆ ಅಮೃತವೂ ವಿಷ. ಈ ಗಾದೆ ಈಗ ಕ್ರಿಕೆಟಿಗೆ ಒಗ್ಗುತ್ತದೆ. ಸಿಕ್ಸರ್, ಬೌಂಡರಿಗಳ ಸುರಿಮಳೆಯೊಂದಿಗೆ ಮತ್ತು ಬರಿಸುವ ಮಾನಿನಿಯರ ವಯ್ಯಾರದ ಕುಣಿತಕ್ಕೆ ಕ್ರಿಕೆಟ್ ಅಂಗಣದ ತುಂಬಾ ಹುಚ್ಚೆದ್ದು ಕುಣಿಯುವ ಅಭಿಮಾನಿಗಳು ಈಗ ಬೆಚ್ಚಿ ಬಿದ್ದಿದ್ದಾರೆ. ಇಷ್ಟೊಂದು ರೋಚಕತೆ ನೀಡುವ, ತುಂಡುಡುಗೆಯ ಲಲನೆಯರು ಕುಣಿಯುವ ತುಣುಕು ಮಾದರಿಯ ಐಪಿಎಲ್‌ನ ಹಿಂದೆ ಕ್ರೀಡಾಲೋಕದ ಕಣ್ಣಿಗೆ ಮಣ್ಣೆರಚುವಂಥ 'ಸ್ಪಾಟ್ ಫಿಕ್ಸಿಂಗ್‌' ಎಂಬ ಕರಾಳ ಲೋಕವೊಂದಿದೆ ಎಂಬುದು ವರ್ಷದ ಹಿಂದೆಯೇ ಬಹಿರಂಗವಾಗಿತ್ತು.
ಆದರೆ, ಈಗ ಅಂತಾರಾಷ್ಟ್ರೀಯ ಆಟಗಾರ ಶ್ರೀಶಾಂತ್ ಜತೆ ಇನ್ನಿಬ್ಬರು ಸಿಕ್ಕಿಬೀಳುವುದರೊಂದಿಗೆ ಫಿಕ್ಸಿಂಗ್ ಬೇರು ಮತ್ತು ಬಾಹುಗಳು ಅಗಣಿತ ಆಳ ಮತ್ತು ಅಗಲವನ್ನು ಆವರಿಸಿಕೊಂಡಿರುವುದು ಬಯಲಾಗುತ್ತಿದೆ. ಇದು ಈಗ ಕ್ರೀಡಾಲೋಕಕ್ಕೆ ನುಂಗಲಾರದ ತುತ್ತು. ಐಪಿಎಲ್ ಅಗತ್ಯವೇ ಎಂಬ ಪ್ರಶ್ನೆಯೂ ಇಲ್ಲಿ ಹುಟ್ಟುತ್ತದೆ.

ಐಪಿಎಲ್ ಏಕೆ ಬೇಕು?
ಟೆಸ್ಟ್, ಏಕದಿನ ಹಾಗೂ ಟಿ-20 ಕ್ರಿಕೆಟ್ ಇರುವಾಗ ಐಪಿಎಲ್ ಎಂಬ ತುಣುಕು ಕ್ರಿಕೆಟ್ ಏಕಾಗಿ ಬೇಕು? ಐಪಿಎಲ್ ಅನ್ನು ಹುಟ್ಟುಹಾಕಿರುವುದಾದರೂ ಏಕೆ? ಇದರಿಂದ ಯಾರಿಗೆ ಹೆಚ್ಚು ಲಾಭ ಎಂಬುದನ್ನು ಅವಲೋಕಿಸಿದರೆ ಬಹಿರಂಗವಾಗುವ ಅಂಶಗಳು ದಂಗುಬಡಿಸುತ್ತವೆ. ಬೆಟ್ಟಿಂಗ್ ಮತ್ತು ಫಿಕ್ಸಿಂಗ್‌ನಂಥ ದುಷ್ಕೃತ್ಯಗಳು ನೇರವಾಗಿ ಅಭಿಮಾನಿಗಳ ಜೇಬಿಗೆ ಕತ್ತರಿ ಹಾಕುವುದರಲ್ಲಿ ಅನುಮಾನವೇ ಇಲ್ಲ. ಕ್ರೀಡೆ ಮನುಷ್ಯರಲ್ಲಿ ಸ್ಪರ್ಧಾತ್ಮಕ ಮನೋಭಾವ ಹುಟ್ಟು ಹಾಕಬೇಕೇ ಹೊರತು ಅವರನ್ನು ಜೂಜಿನಂಥ ಕೂಪಕ್ಕೆ ತಳ್ಳಬಾರದು.
ವಿವಾದವನ್ನು ಹೊದ್ದುಕೊಂಡೇ ಕಣ್ಣುಬಿಟ್ಟಿರುವಂಥದ್ದು ಐಪಿಎಲ್. ಅಧಿಕಾರಿಗಳ ಹಣಕಾಸು ಅವ್ಯವಹಾರ, ತಂಡದ ಬಿಡ್ಡಿಂಗ್‌ನಲ್ಲಿ ಮೋಸ, ಆಟಗಾರರು ರೇವ್ ಪಾರ್ಟಿಯಲ್ಲಿ ಭಾಗವಹಿಸುವುದು ಸೇರಿದಂತೆ, ಈಗ ಫಿಕ್ಸಿಂಗ್ ಭೂತ ಹೊರಬಿದ್ದಿದೆ. ಹಣದ ಹೊಳೆಯೇ ಹರಿಯುವ ಈ ಐಪಿಎಲ್‌ನಲ್ಲಿ ಇನ್ನೂ ಅದೆಷ್ಟು ಸಹಿಸಲಾರದ ಕರಾಳ ಮುಖಗಳು ಅಡಗಿ ಕುಳಿತಿವೆಯೋ?

ಬಿಸಿಸಿಐ ಜಾಣ ಕುರುಡು
ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ. ಭ್ರಷ್ಟಾಚಾರ ತಡೆಗಟ್ಟುವಲ್ಲಿ ನಾವು ನಮ್ಮದೇ ಮಿತಿ ಹೊಂದಿದ್ದೇವೆ. ಐಪಿಎಲ್‌ನಲ್ಲಿ ನಡೆದಿದೆ ಎನ್ನಲಾಗಿರುವ ಫಿಕ್ಸಿಂಗ್ ಮತ್ತು ಬೆಟ್ಟಿಂಗ್‌ನಂಥ ಪ್ರಕರಣಗಳಿಗೆ ಒಬ್ಬರನ್ನು ಮಾತ್ರ ಹೊಣೆಗಾರರನ್ನಾಗಿಸುವುದು ಸರಿಯಲ್ಲ ಎಂದು ಬಿಸಿಸಿಐ ಹೇಳಿದೆ. ಹಾಗಾದರೆ, ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ನಡೆಯದಂತೆ ನೋಡಿಕೊಳ್ಳಲೆಂದೇ ಇರುವ ವಿಶೇಷ ಭ್ರಷ್ಟಾಚಾರ ನಿಗ್ರಹ ಘಟಕ ಏನು ಮಾಡುತ್ತಿದೆ? ಇದು ಬಿಸಿಸಿಐ ಜಾಣ ಕುರುಡು ವ್ಯಕ್ತಿತ್ವವಲ್ಲವೇ?

ಐಪಿಎಲ್‌ಗೆ ಜನ್ಮಕೊಟ್ಟ ಕ್ರಿಮಿನಲ್‌ಗಳು
'ಐಪಿಎಲ್‌' ಟೂರ್ನಿಯನ್ನು ಹುಟ್ಟುಹಾಕಿದ ವ್ಯಕ್ತಿಯ ಚಾರಿತ್ರ್ಯ ನೋಡಿದರೆ ಗೊತ್ತಾಗುತ್ತದೆ. ಇದು ಭ್ರಷ್ಟಾಚಾರದ ಉದ್ದೇಶದಿಂದಲೇ ತಲೆ ಎತ್ತಿದ ಕ್ರೀಡಾಕೂಟ ಎಂಬುದು. ಓದಿಗೆಂದು ಅಮೆರಿಕಕ್ಕೆ ತೆರಳಿ ಡ್ರಗ್ಸ್ ಜಾಲದಲ್ಲಿ ಸಿಕ್ಕಿಹಾಕಿಕೊಂಡು 1985ರಲ್ಲಿ ಕ್ರಿಮಿನಲ್ ವಿಚಾರಣೆಗೊಳಗಾಗಿ, ಕೊನೆಗೆ ತನ್ನ ಎಲ್ಲೆ ಮೀರಿದ ಹಣಕಾಸು ಅವ್ಯವಹಾರಗಳಿಂದ ಈಗ ಇಂಗ್ಲೆಂಡ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಲಲಿತ್ ಮೋದಿ. ಅಂದರೆ, ಗೊತ್ತಾಯಿತಲ್ಲ ಐಪಿಎಲ್ ಹಿಂದೆ ಯಾವತ್ತೂ ಒಳ್ಳೆಯ ಉದ್ದೇಶಗಳಿರಲು ಸಾಧ್ಯವೇ ಇಲ್ಲ. ಸಾವಿರಾರು ಕೋಟಿ ಅವ್ಯವಹಾರ ಮಾಡಿದ ಮೋದಿ ದೇಶ ಬಿಟ್ಟಾಗಲೇ, ಬಿಸಿಸಿಐ ಮತ್ತು ಸರ್ಕಾರ ಎಚ್ಚೆತ್ತುಕೊಂಡು ಐಪಿಎಲ್ ಮೇಲೆ ನಿಷೇಧ ಹೇರಬೇಕಿತ್ತು. ಆದರೆ, ಫಿಕ್ಸಿಂಗ್‌ನಂಥ ಕರಾಳ ಮುಖಗಳು ಬಹಿರಂಗವಾದಾಗಲೂ ಅದನ್ನು ನೋಡುತ್ತಾ ಸುಮ್ಮನೆ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಫಿಕ್ಸಿಂಗ್- ಬೆಟ್ಟಿಂಗ್ ಛಾಯೆ
ಫಿಕ್ಸಿಂಗ್- ಬೆಟ್ಟಿಂಗ್ ಒಂದೇ ನಾಣ್ಯದ ಎರಡು ಮುಖಗಳು. ಕ್ರಿಕೆಟ್ ಅಭಿಮಾನಿಗಳನ್ನು ಬೆಟ್ಟಿಂಗ್‌ಗೆ ಸೆಳೆಯುವ ಜಾಲದ ಇನ್ನೊಂದು ಮುಖವೇ ಆಟಗಾರರ ಫಿಕ್ಸಿಂಗ್. ಅಂತಾರಾಷ್ಟ್ರೀಯ ಮಟ್ಟದ ಭೂಗತ ಲೋಕದ ಕೈಗಳು ಎರಡೂ ಜಾಲದ ಹಿಂದಿವೆ ಎಂಬುದರಲ್ಲಿ ಅನುಮಾನವಿಲ್ಲ. ಒಂದೆಡೆ ಬೆಟ್ಟಿಂಗ್ ಜಾಲಕ್ಕೆ ಅಭಿಮಾನಿಗಳನ್ನು ಸೆಳೆಯಲು ಒಂದು ಜಾಲವನ್ನು ಈ ಕೈಗಳು ಸೃಷ್ಟಿಸಿದ್ದರೆ, ಇನ್ನೊಂದೆಡೆ ಬೆಟ್ಟಿಂಗ್ ಆಧಾರದ ಮೇಲೆ ಆಟಗಾರರನ್ನು ಫಿಕ್ಸ್ ಮಾಡಿಕೊಂಡು ಬೆಟ್ಟಿಂಗ್ ಕಟ್ಟಿದ ಅಭಿಮಾನಿಗಳ ಕಣ್ಣಿಗೆ ಮಣ್ಣೆರಚುತ್ತಿವೆ ಎಂಬುದು ಇತ್ತೀಚಿನ ಸ್ಪಾಟ್ ಫಿಕ್ಸಿಂಗ್ ಬೆಳವಣಿಗೆಗಳಿಂದ ಬಹಿರಂಗವಾಗುತ್ತಿದೆ.

ಎಚ್ಚೆತ್ತುಕೊಳ್ಳಲೇಬೇಕು...
ಐಪಿಎಲ್ ಎಂಬ ಮೋಸದಾಟದ ಅಂಗಡಿಯನ್ನು ಮುಚ್ಚಲು ಇದು ಸೂಕ್ತ ಸಮಯ. ಭ್ರಷ್ಟಾಚಾರ ಇನ್ನಷ್ಟು ಹೆಚ್ಚುವ ಮುನ್ನ ಬಿಸಿಸಿಐ ಮತ್ತು ಸರ್ಕಾರ ಐಪಿಎಲ್ ಅನ್ನು ಇಲ್ಲಿಗೆ ಮುಕ್ತಾಯಗೊಳಿಸಿದರೆ, ಕ್ರೀಡೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಸಾಧ್ಯ. ಅಲ್ಲದೆ, ಐಪಿಎಲ್ ಎಂಬ ವಂಚಕ ಟೂರ್ನಿ ಮೇಲೆ ನಿಷೇಧ ಹೇರುವುದರಿಂದ ಕ್ರಿಕೆಟ್ ಮೇಲಿನ ನಂಬಿಕೆಯಾದರೂ ಉಳಿದೀತು.

- ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement