ಜೂನಿಯರ್ ಟೆನಿಸ್: ಆದಿಲ್, ಪ್ರಣವ್ ಕ್ವಾರ್ಟರ್ ಫೈನಲ್ಗೆ
ಬೆಂಗಳೂರು: ಆಕರ್ಷಕ ಆಟವನ್ನು ಮುಂದುವರಿಸಿದ ರಾಜ್ಯದ ಆದಿಲ್ ಕಲ್ಯಾಣಪುರ ಮತ್ತು ಸಾಯಿ ಪ್ರಣವ್ ಪೊನಾಕಾ ಏಷ್ಯನ್ ರ್ಯಾಂಕಿಂಗ್ ಕಿರಿಯರ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.ಎರಡನೇ ಶ್ರೇಯಾಂಕ ಪಡೆದಿರುವ ಆದಿಲ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಆಂಧ್ರಪ್ರದೇಶದ ದುರ್ಗಾ ಹಿಮ್ಮಾಕೇಶ್ ಅವರನ್ನು 6-2, 6-4 ನೇರ ಸೆಟ್ಗಳ ಅಂತರದಿಂದ ಪರಾಭವಗೊಳಿಸಿದರು. ಇನ್ನು ಸಾಯಿ ಪ್ರಣವ್ ಅವರು ರೋಹಿತ್ ನಾಸಿಮ್ಹಾನ್ ವಿರುದ್ಧ 6-3, 6-3 ನೇರ ಸೆಟ್ಗಳಿಂದ ಜಯ ಕಂಡುಕೊಂಡರು.ಅಗ್ರ ಶ್ರೇಯಾಂಕ ಪಡೆದಿರುವ ಸಿದ್ದಾಂತ್ ಗಜದೀಶ್ ಬಾಂಥಿಯಾ, 4ನೇ ಶ್ರೇಯಾಂಕ ಪಡೆದಿರುವ ಮೇಘಾ ಪಟೇಲ್ ಹಾಗೂ 6ನೇ ಶ್ರೇಯಾಂಕ ಪಡೆದಿರುವ ಧೃವ ಸುನಿಶ್ ಸಹ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಸಿದ್ದಾಂತ್ ಆಂಧ್ರಪ್ರದೇಶದ ವಿ. ಸಾಯಿ ಕೃಷ್ಣ ಅವರನ್ನು ಸೋಲಿಸಿದರೆ, ಮೆಘಾ ಪಟೇಲ್ ಅವರು ಅನಿರುದ್ದಾ ರೆಡ್ಡಿ ಅವರನ್ನು ಪರಾಭವಗೊಳಿಸಿದರು. ಇನ್ನು ಧೃವ ಸುನಿಶ್ ಅವರು ಕರ್ನಾಕಟದ ನಿಕಿತ್ ರೆಡ್ಡಿ ವಿರುದ್ಧ ಜಯ ಕಂಡುಕೊಂಡರು.ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನ ಪಂದ್ಯಗಳಲ್ಲಿ ಕರ್ನಾಟಕದ ಮಾಜಖಾನ್ ಉತ್ತಮ ಪ್ರದರ್ಶನ ನೀಡಿದರಾದರೂ, 5ನೇ ಶ್ರೇಯಾಂಕ ಪಡೆದಿದ್ದ ಪ್ರಕೃತಿ ಪಟೇಲ್ ವಿರುದ್ಧ 5-7, 6-4, 2-6 ಅಂತರದಿಂದ ಸೋಲನುಭವಿಸಿದರು.