ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಲೆ! ಫರ್ಗ್ಯೂಸನ್

27 ವರ್ಷ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಮುನ್ನಡೆಸಿದ್ದಷ್ಟೇ ಅಲ್ಲ,...

Rashmi Kasaragodu
Updated On : 22 May 2013, 11:55 am

27 ವರ್ಷ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಮುನ್ನಡೆಸಿದ್ದಷ್ಟೇ ಅಲ್ಲ, ಆ ತಂಡಕ್ಕೆ ಯುರೂಪಿಯನ್ ಫುಟ್ಬಾಲ್ ರಂಗದಲ್ಲಿ ಒಂದು ವರ್ಚಸ್ಸು, ದೈತ್ಯ ಸ್ಥಾನಮಾನ ಸಿಗುವಂತೆ ಮಾಡಿದ್ದು ಫರ್ಗ್ಯೂಸನ್. ಇದೀಗ, ಸುದೀರ್ಘ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿ ಆರಾಮ ಜೀವನಕ್ಕೆ ಕಾಲಿಡಲಿದ್ದಾರೆ...

ಫುಟ್ಬಾಲನ್ನೇ ಹಾಸಿ ಹೊದ್ದು ಮಲಗುವ ನಾಡಿನಲ್ಲಿ ತಂಡದ ಚುಕ್ಕಾಣಿ ಹಿಡಿಯಲು ಪ್ರತಿಭೆಗಿಂತಲೂ ಮಿಗಿಲಾಗಿ ಚುರುಕುತನ, ಅಗಾಧ ಪರಿಶ್ರಮ ಬೇಕು. ಆ ಎರಡೂ ಫರ್ಗ್ಯೂಸನ್ ಎಂಬ ಮಾಂತ್ರಿಕನಿಗೆ ವರದಾನವಾಗಿ ಬಂದಿದ್ದರಿಂದಲೇ ಏನೋ, ಅವರು ಆ ಮಟ್ಟಕ್ಕೆ ಬೆಳೆದು ನಿಂತಿದ್ದು.
27 ವರ್ಷ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಮುನ್ನಡೆಸಿದ್ದಷ್ಟೇ ಅಲ್ಲ, ಆ ತಂಡಕ್ಕೆ ಯುರೂಪಿಯನ್ ಫುಟ್ಬಾಲ್ ರಂಗದಲ್ಲಿ ಒಂದು ವರ್ಚಸ್ಸು, ದೈತ್ಯ ಸ್ಥಾನಮಾನ ಸಿಗುವಂತೆ ಮಾಡಿದ್ದು ಫರ್ಗ್ಯೂಸನ್. ಅವರ ಮಾರ್ಗದರ್ಶನದಲ್ಲಿ ಮಾಂಚೆಸ್ಟರ್ ತಂಡ ಗೆದ್ದಿದ್ದು 13 ಪ್ರೀಮಿಯರ್ ಲೀಗ್ ಹಾಗೂ ಎರಡು ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಪ್ರಶಸ್ತಿ. ಇದೀಗ, ಸುದೀರ್ಘ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿರುವ ಫರ್ಗ್ಯೂಸನ್ ಜುಲೈ 1ರಿಂದ ಆರಾಮ ಜೀವನಕ್ಕೆ ಕಾಲಿಡಲಿದ್ದಾರೆ.

ಇಂಗ್ಲಿಷ್ ಪ್ರೀಮಿಯರ್ ಲೀಗ್
ಯುರೋಪ್‌ನಲ್ಲಿ ಅತಿ ಹೆಚ್ಚು ಜನಮನ್ನಣೆ ಗಳಿಸಿರುವ ಫುಟ್ಬಾಲ್ ಪಂದ್ಯಾವಳಿಯಿದು. ಇದರಲ್ಲಿ ಇಂಗ್ಲೆಂಡ್‌ನ 20 ಪ್ರಮುಖ ತಂಡಗಳು ಪಾಲ್ಗೊಳ್ಳುತ್ತವೆ. ಈ ತಂಡಗಳ ವ್ಯವಸ್ಥಾಪಕ ಮಂಡಳಿಗಳೇ ಸೇರಿ ಪ್ರೀಮಿಯರ್ ಲೀಗ್ ಎಂಬ ಕಾರ್ಪೊರೇಟ್ ಸಂಸ್ಥೆಯನ್ನು ಹುಟ್ಟುಹಾಕಿವೆ. ಈ ಸಂಸ್ಥೆಗೆ ಈ ವ್ಯವಸ್ಥಾಪಕ ಮಂಡಳಿಗಳೇ ಷೇರುದಾರರು. ಈ ಸಂಸ್ಥೆಯಿಂದಲೇ ಪ್ರೀಮಿಯರ್ ಲೀಗ್ ಟೂರ್ನಿ ನಡೆಸಲಾಗುತ್ತದೆ. ಇದೊಂದು ಬೇರುಮಟ್ಟದ ಫುಟ್ಬಾಲ್ ಪಂದ್ಯಾವಳಿ. ಆದರೆ, ಸಾವಿರಾರು ಕೋಟಿ ವಹಿವಾಟು ನಡೆಸುವಂಥ ಟೂರ್ನಿ.
1888ರಲ್ಲೇ ಈ ಪಂದ್ಯಾವಳಿ ಸ್ಥಾಪನೆಯಾಗಿದ್ದರೂ, ಇದು 1992ರಲ್ಲಿ ಕಾರ್ಪೊರೇಟ್ ಸಂಸ್ಥೆಯ ಅಡಿಯಲ್ಲಿ ನಡೆಯಲು ಆರಂಭಿಸಿದಾಗಿನಿಂದ ಹೊಸ ಸ್ವರೂಪ ಪಡೆದುಕೊಂಡಿದೆ. ಪ್ರತಿ ವರ್ಷ, ಆಗಸ್ಟ್‌ನಿಂದ ಮೇವರೆಗೆ ಈ ಟೂರ್ನಿ ನಡೆಯುತ್ತದೆ.

ಬಿಲಿಯನ್‌ಗಟ್ಟಲೆ ವ್ಯವಹಾರ
ಈ ಪಂದ್ಯಾವಳಿಗಳ ಟೆಲಿವಿಷನ್ ಪ್ರಸಾರದ ಹಕ್ಕುಗಳೇ ಬಿಲಿಯನ್ ಗಟ್ಟಲೆ ವ್ಯವಹಾರವನ್ನೊಳಗೊಂಡಿರುತ್ತವೆ. 2013- 14ರ ಸಾಲಿಗೆ ಟೆಲಿವಿಷನ್ ಪ್ರಸಾರ ಹಕ್ಕುಗಳು ಸುಮಾರು 3 ಬಿಲಿಯನ್ ಯುರೋಗಳಿಗೆ ಮಾರಾಟವಾಗಿವೆ ಎಂದು ಮೂಲಗಳು ಹೇಳುತ್ತವೆ. 212 ದೇಶಗಳಿಗೆ ನೇರಪ್ರಸಾರವಾಗುವ ಇದು, 643 ಮಿಲಿಯನ್ ಮನೆಗಳಿಗೆ ಬಿತ್ತರಗೊಳ್ಳುತ್ತದೆ. ಇದಕ್ಕೆ 4.7 ಮಿಲಿಯನ್ ಪ್ರೇಕ್ಷಕರಿದ್ದಾರೆ.

ಈಗ ಗೊತ್ತಾಯ್ತಲ್ವಾ... ಈ ಪಂದ್ಯಾವಳಿಯ ಮಹತ್ವ ಎಂಥದ್ದು ಅಂತ! ಇದು ಕೇವಲ ಮೇಲ್ನೋಟದ ಅಂಕಿ-ಅಂಶಗಳಷ್ಟೇ. ಆದರೆ, ಪಂದ್ಯಾವಳಿ ಕ್ರೇಜ್ ಮಾತ್ರ ಇದೆಲ್ಲದಕ್ಕಿಂತ ತೂಕವುಳ್ಳಂಥದ್ದು.   ಇಂಥ ಒಂದು ಹೈ ವೋಲ್ಟೇಜ್ ಟೂರ್ನಿಯಲ್ಲಿ ತಂಡವೊಂದನ್ನು ಟಾಪ್ 1ಕ್ಕೆ ತರುವುದು ಹಾಗೂ 13 ಬಾರಿ ಪ್ರಶಸ್ತಿಗಳನ್ನು ಗೆಲ್ಲುವಂತೆ ತಂಡವನ್ನು ಕಟ್ಟುವುದು ಮೌಂಟ್ ಎವರೆಸ್ಟ್ ಏರಿದಷ್ಟೇ ಸಾಹಸಮಯ. ಅದನ್ನೇ ಫರ್ಗ್ಯೂಸನ್ ಮಾಡಿದ್ದು... ಅದಕ್ಕಾಗಿಯೇ ಅವರು ಎಲ್ಲರ ಗೌರವಕ್ಕೆ ಪಾತ್ರರಾದದ್ದು.  ಹಾಗಂತ ಫರ್ಗ್ಯೂಸನ್ ನಡೆದು ಬಂದ ಹಾದಿಯೇನೂ ರತ್ನಗಂಬಳಿ ಹಾಸಿದ್ದಾಗಿರಲಿಲ್ಲ. ಬರೀ ಕಲ್ಲು, ಮುಳ್ಳುಗಳಿಂದ ಕೂಡಿದ ಹಾದಿಯನ್ನೇ ಸವೆಸಿಬಂದರು. ಯುರೋಪ್ ಕ್ರೀಡಾರಂಗದಲ್ಲಿ ಅತಿ ಹೆಚ್ಚು ಬಾರಿ ವರ್ಷದ ಮ್ಯಾನೇಜರ್ ಪ್ರಶಸ್ತಿ ಪಡೆದು ಹೊಸ ದಾಖಲೆ ಬರೆದಿದ್ದಾರೆ ಅವರು.

ನಡೆದ ಬಂದ ಹಾದಿ
1941ರ ಡಿ.31ರಂದು ಜನಿಸಿದ ಫರ್ಗ್ಯೂಸನ್‌ಗೆ ಆರಂಭದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಮೊದಲು ಕ್ವೀನ್ ಪಾರ್ಕ್ ತಂಡದಲ್ಲಿ ಸ್ಟ್ರೈಕರ್ ಆಗಿ ಸೇರಿಕೊಂಡರಾದರೂ, ಅಲ್ಲಿ ಅವರು ಯಶಸ್ಸು ಕಾಣಲಿಲ್ಲ. ಅಲ್ಲಿಂದ ಅವರು ಸೇಂಟ್ ಜಾನ್ ಸ್ಟೋನ್ ತಂಡ ಸೇರಿಕೊಂಡರು. ಅಲ್ಲಿಯೂ ಅವರನ್ನು ವ್ಯವಸ್ಥಾಪಕ ಮಂಡಳಿ ತೃಪ್ತಿಪಡಿಸಲಿಲ್ಲ. ಆದರೂ, ಪಂದ್ಯವೊಂದರಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿ, ಗಮನ ಸೆಳೆದ ಇವರನ್ನು ಡನ್ ಫೇರ್ ಮೆಲಿನ್ ತಂಡ ತನ್ನಲ್ಲಿ ಸೇರಿಸಿಕೊಂಡಿತು. ಅಲ್ಲಿಂದಲೇ ಫರ್ಗ್ಯೂಸನ್ ಫುಲ್ ಟೈಮ್ ಫುಟ್ಬಾಲ್ ಆಟಗಾರರಾಗಿ ಹೊರಹೊಮ್ಮಿದರು. ನಂತರವೂ ಹಲವು ಏರಿಳಿತಗಳನ್ನು ನೋಡಿ, ಶ್ರಮದ ಹಾದಿ ತುಳಿದರೂ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ.  ಕೆಲವು ವೈಫಲ್ಯಗಳು, ತಂಡದ ವ್ಯವಸ್ಥಾಪಕ ಮಂಡಳಿಗಳಿಂದ ಅಪಮಾನ, ಸಹ ಸಿಬ್ಬಂದಿಯಿಂದ ತುಳಿತಕ್ಕೊಳಗಾದ ಇವರು 1974ರಲ್ಲಿ ಆಟಗಾರನ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದರು. ಹೀಗೆ, ಗುಡ್ ಬೈ ಹೇಳುವುದಕ್ಕೂ ಮೊದಲು ಅವರು ಅನುಭವಿಸಿದ್ದ ಯಾತನೆಗಳು ನೂರಾರು. ಸಾಕಪ್ಪಾ... ಸಾಕು, ಈ ಫೀಲ್ಡ್ ಸಹವಾಸವೇ ಬೇಡ ಎನ್ನುವಷ್ಟು ನೋವುಂಡರೂ ತಾಳ್ಮೆಯಿಂದ ಒಂದೊಂದೇ ಮೆಟ್ಟಿಲು ಹತ್ತಿದರು.

ಮ್ಯಾನೆಜರ್ ಆಗಿದ್ದು ಹೇಗೆ?
1974ರಲ್ಲಿ ಅವರು ಫುಟ್ಬಾಲ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದರು. ನಂತರ ಈಸ್ಟ್ ಸ್ಟರ್ಲಿಂಗ್ ಶೈರ್, ಸೇಂಟ್ ಮಿರನ್ ತಂಡಗಳ ವ್ಯವಸ್ಥಾಪಕರಾದರು. 1986ರ ನ.6ರಂದು ಮ್ಯಾಂಚೆಸ್ಟರ್ ಯುನೈಟೆಡ್ ವ್ಯವಸ್ಥಾಪಕರಾಗಿ ನೇಮಕೊಂಡರು. ಇವರು ಈ ತಂಡದ ಚುಕ್ಕಾಣಿ ಹಿಡಿದಿದ್ದಾಗ, ಪ್ರೀಮಿಯರ್ ಲೀಗ್ ಆಡುವ 20 ತಂಡಗಳ ಪಟ್ಟಿಯಲ್ಲಿ ಮ್ಯಾಂಚೆಸ್ಟರ್ 11ನೇ ಸ್ಥಾನದಲ್ಲಿತ್ತು.
ಆದರೆ, ಆರಂಭದಲ್ಲಿ ಅಲ್ಲೂ ಯಶಸ್ಸು ಕಾಣಲಿಲ್ಲ. ಆ ತಂಡ ಯಾವುದೇ ಕಪ್ ಗೆಲ್ಲಲಿಲ್ಲ. ಒಂದು ಹಂತದಲ್ಲಿ ಮ್ಯಾನೇಜರ್ ಹುದ್ದೆಯಿಂದ ಫರ್ಗ್ಯೂಸನ್‌ಗೆ ಗೇಟ್‌ಪಾಸ್ ನೀಡಲಾಗುತ್ತೆ ಎಂದು ಜನ ಭಾವಿಸಿದ್ದರು. ಆದರೆ,
1989-90ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಎಫ್‌ಎ ಕಪ್ ಗೆದ್ದುಕೊಂಡಿತು. ಇದು ಫರ್ಗ್ಯೂಸನ್‌ಗೆ ಸಿಕ್ಕ ಮೊದಲ ಯಶಸ್ಸು. ಅಲ್ಲಿಂದ ಶುರುವಾಯ್ತು ಅವರ ಸಾಹಸಗಾಥೆ. ತಂಡವನ್ನು ಕೇವಲ ತಂಡವನ್ನಾಗಿಯಲ್ಲದೇ ಒಂದು ಶಕ್ತಿಯನ್ನಾಗಿ ರೂಪಿಸಿದರು.
ಅವರ ಮಾರ್ಗದರ್ಶನದಲ್ಲಿ ಒಟ್ಟು 13 ಬಾರಿ ಪ್ರೀಮಿಯರ್ ಲೀಗ್ ಗೆದ್ದ ಮ್ಯಾಂಚೆಸ್ಟರ್ ಯುನೈಟೆಡ್, ಸದ್ಯದ ಹಾಲಿ ಚಾಂಪಿಯನ್ ತಂಡ. ಕೌಶಲ್ಯದಿಂದ ತಂಡಕ್ಕೊಂದು ಬೆಲೆ, ಕಳೆ ತಂದ ಕುಶಲಕರ್ಮಿ ಈಗ ನಿರ್ಗಮಿಸುತ್ತಿದ್ದಾರೆ. ಅದರ ಜೊತೆಯಲ್ಲೇ, ತಾಳ್ಮೆ, ನಿರಂತರ ಪರಿಶ್ರಮದಿಂದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬಹುದೆಂಬ ನೀತಿಪಾಠವನ್ನೂ ಬೋಧಿಸಿದ್ದಾರೆ.

- ಚೇತನ್ ಓ.ಆರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement