ರಾಷ್ಟ್ರೀಯ ಅಥ್ಲೀಟ್ ಆನಂದ ಶೆಟ್ಟಿ ಇನ್ನಿಲ್ಲ
ಮಂಗಳೂರು: ಮಂಗಳೂರಿನ ಕೋಟೆಕಾರಿನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ರಾಷ್ಟ್ರೀಯ ಅಥ್ಲೀಟ್ ಆನಂದ ಶೆಟ್ಟಿ (50)ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಸೋಮವಾರ ತೊಕ್ಕೊಟ್ಟು ಬಳಿಯ ಕೋಟೆಕಾರಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಆನಂದ ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದರೆ, ಅವರ ಪತ್ನಿ ಮತ್ತು ಮಕ್ಕಳು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆನಂದ ಶೆಟ್ಟಿ ಕೊನೆಯುಸಿರೆಳೆದಿದ್ದಾರೆ. ಇವರು 2006ರಿಂದ ಮಂಗಳೂರಿನ ಇನ್ಫೋಸಿಸ್ನಲ್ಲಿ ಲ್ಯಾಂಡ್ ಸ್ಕೇಪ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಮೂಲತಃ ಬಂಟ್ವಾಳದ ಮಾಣಿ ನಿವಾಸಿಯಾದ ಆನಂದ ಶೆಟ್ಟಿ ಅವರಿಗೆ ಬಡತನದಿಂದ ವಿದ್ಯಾಭ್ಯಾಸ ಪೂರೈಸಲು ಸಾಧ್ಯವಾಗಿರಲಿಲ್ಲ. ಉತ್ತಮ ಕಬಡ್ಡಿ ಆಟಗಾರಾದ ಇವರ ಪ್ರತಿಭೆಯನ್ನು ಗಮನಿಸಿದ ನಿಟ್ಟೆ ವಿನಯ್ ಹೆಗ್ಡೆ ತಮ್ಮ ಲೆಮಿನಾ ಸ್ಪ್ರಿಂಗ್ಸ್ ಸಂಸ್ಥೆಯಲ್ಲಿ ಉದ್ಯೋಗ ನೀಡಿದ್ದರು.
1981ರಲ್ಲಿ ದಕ್ಷಿಣ ಕೋರಿಯಾದ ಸಿಯೋಲ್ನಲ್ಲಿ ನಡೆದ ವಿಶ್ವ ಕಿರಿಯರ ಅಥ್ಲೆಟಿಕ್ ಕೂಟದಲ್ಲಿ 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು. 1982ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್ನ ಹಿರಿಯ ವಿಭಾಗದಲ್ಲಿ ಪಾಲ್ಗೊಂಡು ವೇಗದ ಓಟಗಾರ ಎಂಬ ದಾಖಲೆ ಸ್ಥಾಪಿಸಿದರು.
ನಂತರ ಜೆಮ್ಶೆಡ್ಪುರದಲ್ಲಿ ನಡೆದ 200 ಮೀ. ಓಟದಲ್ಲಿ ಪಾಲ್ಗೊಂಡು ಚಿನ್ನದ ಪದಕ ಪಡೆದರು. ನಿರಂತರ 8 ವರ್ಷಗಳ ಕಾಲ 200 ಮೀ. ಹಾಗೂ 100 ಮೀ. ಓಟದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಬಳಿಕ ಟೆಲ್ಕೋ ಕಂಪನಿಗೆ ಸೇರಿ ಕೆಲಸ ನಿರ್ವಹಿಸಿ ಬೆಂಗಳೂರಿನಲ್ಲಿ ಇನ್ಫೋಸಿಸ್ ಕಂಪನಿಯ ಸ್ಪೋರ್ಟ್ಸ್ ಕ್ಲಬ್ನಲ್ಲಿ ಅಥ್ಲೆಟಿಕ್ ಕೋಚ್ ಆಗಿದ್ದರು.
ಅಂತಿಮ ದರ್ಶನ: ಮೃತ ಆನಂದ ಶೆಟ್ಟಿ ಪಾರ್ಥಿವ ಶರೀರವನ್ನು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು.