ಅರುಣಿಮಾಗೆ ಅಭಿನಂದನೆ
ನವದೆಹಲಿ: ಕೃತಕ ಕಾಲುಗಳಿಂದ ವಿಶ್ವದ ಅತಿ ದೊಡ್ಡ ಶಿಖರವಾದ ಮೊಂಟ್ ಎವರೆಸ್ಟ್ ಏರಿದ ಅರುಣಿಮಾ ಸಿನ್ಹಾ ಅವರ ಸಾಧನೆಯನ್ನು ಕ್ರೀಡಾ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅರುಣಿಮಾಗೆ ಅಭಿನಂದನೆ ಸಲ್ಲಿಸಿದೆ. ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಮೂಲಕ ಉತ್ತಮ ಸಾಧನೆ ಮಾಡಿರುವ ಅರುಣಿಮಾಗೆ ಧನ್ಯವಾದಗಳು. ಅಲ್ಲಿನ ಹವಾಮಾನದ ಹೊರತಾಗಿ ಉತ್ತಮ ಆತ್ಮವಿಶ್ವಾಸ ಹಾಗೂ ಮನೋಸ್ಥೈರ್ಯ ಪ್ರದರ್ಶಿಸಿ ಈ ಅಭೂತಪೂರ್ವ ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಅರುಣಿಮಾ ಸಾಧನೆಯಿಂದ ವಿಕಲಚೇತನರು ಉನ್ನತ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಅಳಿಸಿ ಹಾಕಲಿದೆ. ಅಲ್ಲದೆ ಈ ಸಾಧನೆ ಕೇವಲ ಭಾರತವಲ್ಲದೇ, ವಿಶ್ವದಾದ್ಯಂತ ಅಥ್ಲಿಟ್ಗಳಿಗೆ ಸ್ಫೂರ್ತಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.