ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಹೆಸರು ಕೇಳಿ ಬಂದಿರುವ ಪಾಕಿಸ್ತಾನದ ಅಂಪೈರ್ ಅಸಾದ್ ರೌಫ್ ಅವರನ್ನು ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ವಾಪಸ್ ಕರೆಸಿಕೊಂಡಿದೆ. ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಅಸಾದ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಕುರಿತು ಬಹಿರಂಗಪಡಿಸಿದ್ದರು. ಜೂನ್ 6ರಿಂದ 21ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಅಂಪೈರ್ ಪೆನೆಲ್‌ನಿಂದ ಅಸಾದ್ ರೌಫ್ ತೆಗೆದು ಹಾಕಿರುವ ಕುರಿತು ಗುರುವಾರ ಐಸಿಸಿ ಪ್ರಕಟಣೆ ತಿಳಿಸಿದೆ. 'ರೌಫ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬುಧವಾರ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಮತ್ತು ಅಸಾದ್ ಕ್ರೀಡಾ ಮನೋಭಾವದಿಂದ ವಿಮುಖರಾಗಿದ್ದಾರೆ ಎಂದು ಅನಿಸಿದ್ದರಿಂದ ಈ ತೀರ್ಮಾ ತೆಗೆದುಕೊಳ್ಳಲಾಗಿದೆ' ಐಸಿಸಿ ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ರೂಪದರ್ಶಿ ಲೀನಾ ಕಪೂರ್ ತಮ್ಮ ಮೇಲೆ ಲೈಂಗಿಕ ಶೋಷಣೆ ಮಾಡಿರುವುದಾಗಿ ಸಹ ಅಸಾದ್ ರೌಫ್ ಮೇಲೆ ಅರೋಪ ಮಾಡಿದ್ದರು.