ಟೆನಿಸ್: ಸೆಮಿಫೈನಲ್ಗೆ ಆದಿಲ್, ತನ್ವಿ
ಬೆಂಗಳೂರು: ಕರ್ನಾಟಕದ ಆದಿಲ್ ಕಲ್ಯಾಣಪುರ್ ಹಾಗೂ ತನ್ವಿ ಭಟ್ ಉತ್ತಮ ಪ್ರದರ್ಶನ ನೀಡುವ ಮೂಲಕ ಕಾರ್ಲೆ ಇನ್ಫ್ರಾ ಎಟಿಎಫ್ ಅಂಡರ್ 14 ಏಷ್ಯನ್ ಜೂನಿಯರ್ ರ್ಯಾಂಕಿಂಗ್ ಟೆನಿಸ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸೋಸಿಯೇಷನ್ನ ಹಾಗೂ ಸದಾಶಿವ ನಗರ ಕ್ಲಬ್ನ ಕೋರ್ಟ್ನಲ್ಲಿ ನಡೆದ ಪಂದ್ಯದಲ್ಲಿ ಆದಿಲ್ ಹಾಗೂ ತನ್ವಿ ಕ್ರಮವಾಗಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಜಯ ಸಾಧಿಸಿದ್ದಾರೆ. ಎಟಿಎಫ್ ಪಟ್ಟಿಯಲ್ಲಿ 91ನೇ ರ್ಯಾಂಕಿಂಗ್ನ ಹಾಗೂ ಪಂದ್ಯಾವಳಿಯಲ್ಲಿ 2ನೇ ಶ್ರೇಯಾಂಕದ ಆದಿಲ್, ಬಾಲಕರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಎಸ್.ಎಮ್ ಆದಿತ್ಯ ಅವರನ್ನು 6-3, 6-2 ನೇರ ಸೆಟ್ಗಳ ಅಂತರದಲ್ಲಿ ಮಣಿಸಿದ್ದಾರೆ. ಇನ್ನು ಬಾಲಕಿಯರ ವಿಭಾಗದಲ್ಲಿ ಎಟಿಎಫ್ನ 19ನೇ ರ್ಯಾಂಕಿಂಗ್ನ ತನ್ವಿ ತಮ್ಮ ಎದುರಾಳಿ ತಮಿಳುನಾಡಿನ ಮೇಘ ಮುತ್ತುಕುಮಾರ್ ಅವರನ್ನು 6-1, 6-0 ನೇರ ಸೆಟ್ಗಳ ಅಂತರದಲ್ಲಿ ಪರಾಭವಗೊಳಿಸಿದರು. ಆದರೆ ಕರ್ನಾಟಕದ ಸಾಯಿ ಪ್ರಣವ್ ತಮ್ಮ ಪಂದ್ಯದಲ್ಲಿ ಮಹಾರಾಷ್ಟ್ರದ ಧ್ರುವ್ ಸುನಿಶ್ ವಿರುದ್ಧ 2-6, 6-3, 6-3 ಅಂತರದಲ್ಲಿ ಸೋಲನುಭವಿಸಿದರು. ಮೊದಲ ಸೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಣವ್, 2-6 ಅಂತರದಲ್ಲಿ ಮೇಲುಗೈ ಸಾಧಿಸಿದರು. ಆದರೆ ನಂತರ ಮರು ಹೋರಾಟ ನಡೆಸಿದ ಧ್ರುವ್ ಮುಂದಿನ ಎರಡು ಸೆಟ್ಗಳಲ್ಲಿ 6-3, 6-3 ಅಂತರದಲ್ಲಿ ಮುನ್ನಡೆ ಕಾಯ್ದಕೊಂಡರಲ್ಲದೆ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಇನ್ನು ಬಾಲಕರ ಸೆಮಿಫೈನಲ್ ಪಂದ್ಯದಲ್ಲಿ ಧ್ರುವ್ ಸುನಿಶ್ ಕರ್ನಾಟಕದ ಆದಿಲ್ ಅವರನ್ನು ಎದುರಿಸಲಿದ್ದು, ಮತ್ತೊಂದು ಪಂದ್ಯದಲ್ಲಿ ಮಹಾರಾಷ್ಟ್ರದ ಸಿದ್ಧನಾಥ್ ಜಗದೀಶ್ ಗುಜರಾತ್ನ ಮೇಘ ಪಟೇಲ್ ಅವರನ್ನು ಎದುರಿಸಲಿದ್ದಾರೆ.