ಪೊಲೀಸ್- ಮೇಯಪ್ಪನ್ ಕಣ್ಣಾಮುಚ್ಚಾಲೆ
ಚೆನ್ನೈ: ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಮತ್ತು ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರ ನಡುವೆ ಗುರುವಾರ ಕಣ್ಣಾಮುಚ್ಚಾಲೆ ಆಟನ ನಡೆದಿದೆ.
ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಗುರುನಾಥ್ ವಿಚಾರಣೆಗೆಂದು ಪೊಲೀಸರು ಚೆನ್ನೈಗೆ ಆಗಮಿಸಿದರೆ, ಗುರುನಾಥ್ ಎಲ್ಲಿ ಅಡಗಿದ್ದಾರೆ ಎಂಬುದೇ ಪೊಲೀಸರಿಗೆ ಗೊತ್ತಾಗುತ್ತಿಲ್ಲ. ಹೀಗಾಗಿ ಶುಕ್ರವಾರ ವಿಚಾರಣೆಗೆ ಹಾಜರಾಗಲೇಬೇಕು ಎಂದು ಪೊಲೀಸರು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.
ಒಂದು ವೇಳೆ ಶುಕ್ರವಾರ ವಿಚಾರಣೆಗೆ ಹಾಜರಾಗದಿದ್ದರೆ, ತಲೆ ಮರೆಸಿಕೊಂಡಿದ್ದಾನೆ ಎಂದು ಘೋಷಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೇಯಪ್ಪನ್ ವಿಚಾರಣೆಗೆಂದು ಮುಂಬೈ ಕ್ರೈಮ್ ಬ್ರಾಂಚ್ ಅಧಿಕಾರಿಗಳಿಬ್ಬರು ಗುರುವಾರ ಬೆಳಗ್ಗೆ ಚೆನ್ನೈಗೆ ಆಗಮಿಸಿದ್ದಾರೆ. ಫಿಕ್ಸಿಂಗ್ ಹಗರಣದಲ್ಲಿ ಬಂಧಿತ ಬಾಲಿವುಡ್ ನಟ ವಿಂದೂ ಧಾರಾ ಸಿಂಗ್ ಅವರೊಂದಿಗೆ ಗುರುನಾತ್ ನಂಟು ಹೊಂದಿದ್ದಾರೆ ಎನ್ನಲಾಗಿರುವ ಹಿನ್ನೆಲೆಯಲ್ಲಿ ಆತನನ್ನು ವಿಚಾರಿಸಲು ಪೊಲೀಸರು ಮುಂದಾಗಿದ್ದಾರೆ. ಮೇಯಪ್ಪನ್ ಅವರಿಗೆ ಪೊಲೀಸರು ಸಮನ್ಸ್ ಸಹ ಜಾರಿ ಮಾಡಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯೊಳಗೆ ಪೊಲೀಸರೆದುರಿಗೆ ವಿಚಾರಣೆಗೆ ಹಾಜರಾಗುವಂತೆ ಗುರುನಾಥ್ಗೆ ನೋಟಿಸ್ ಕಳುಹಿಸಲಾಗಿದೆ ಎಂದು ಮುಂಬೈ ಕ್ರೈಮ್ ಬ್ರಾಂಚ್ ಜಂಟಿ ಆಯುಕ್ತ ಹಿಮಾಂಶು ರಾಯ್ ತಿಳಿಸಿದ್ದಾರೆ.
ಮೇಯಪ್ಪನ್ ಸದ್ಯಕ್ಕೆ ಎಲ್ಲಿದ್ದಾರೆ ಎಂಬ ಬಗ್ಗೆ ಹಲವಾರು ಕತೆಗಳು ಹುಟ್ಟಿಕೊಂಡಿವೆ. ಕೆಲವರು ಮೇಯಪ್ಪನ್ ಕೋಲ್ಕತಾಕ್ಕೆ ಹೋಗಿದ್ದಾನೆ ಎಂದು ಹೇಳಿದರೆ. ಕೆಲವರು ಮೊದಲ ಕ್ವಾಲಿಫೈಯರ್ ಪಂದ್ಯ ನಡೆದ ದೆಹಲಿಯಲ್ಲಿ ಉಳಿದುಕೊಂಡಿದ್ದಾನೆ ಎಂದು ಹೇಳುತ್ತಿದ್ದಾರೆ. ಆತ ಮುಂಬೈಯಲ್ಲಿದ್ದಾನೆ ಎಂದು ಕೆಲವರು ಹೇಳುತ್ತಿದ್ದಾರೆ.
ಸಮಯ ಕೇಳಿದ ಮೇಯಪ್ಪನ್
ಏತನ್ಮಧ್ಯೆ, ಸೋಮವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪೊಲೀಸರಿಗೆ ಗುರುನಾಥ್ ಮೇಯಪ್ಪನ್ ತಿಳಿಸಿದ್ದಾರೆ. ಆದರೆ, ಶುಕ್ರವಾರವೇ ವಿಚಾರಣೆಗೆ ಹಾಜರಾಗಬೇಕು ಎಂದು ಪೊಲೀಸರು ಪಟ್ಟು ಹಿಡಿದ್ದಾರೆ ಎನ್ನಲಾಗಿದೆ.