ಫಿಕ್ಸಿಂಗ್‌ನಲ್ಲಿ ಇನ್ನಷ್ಟು ತಂಡ
ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡವಲ್ಲದೇ ಇತರ ತಂಡಗಳೂ ಭಾಗಿಯಾಗಿರುವ...
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡವಲ್ಲದೇ ಇತರ ತಂಡಗಳೂ ಭಾಗಿಯಾಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ದೆಹಲಿ ಪೊಲೀಸ್ ಹೇಳಿದೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಪೊಲೀಸ್ ಮುಖ್ಯಸ್ಥ ನೀರಜ್ ಕುಮಾರ್, ಇದುವರೆಗೂ ಸಿಕ್ಕಿರುವ ಮಾಹಿತಿಗಳ ಆಧಾರದ ಮೇಲೆ, ಫಿಕ್ಸಿಂಗ್‌ನಲ್ಲಿ ಇತರ ತಂಡಗಳೂ ಭಾಗಿಯಾಗಿರುವ ಬಗ್ಗೆ ಇದ್ದ ಅನುಮಾನ ನಿಜವಾಗಿದೆ. ಈ ಬಗ್ಗೆ ದೆಹಲಿ ಪೊಲೀಸ್ ಕೂಲಂಕಷ ತನಿಖೆ ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಯಾವ ತಂಡಗಳು ಭಾಗಿಯಾಗಿವೆ ಎಂಬ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ತನಿಖಾ ದೃಷ್ಟಿಯಿಂದ ಯಾವ ತಂಡಗಳು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿವೆ ಎಂದು ಈಗಲೇ ಹೇಳಲಾಗದು. ನಮಗೆ ಈ ಬಗ್ಗೆ ಮಾಹಿತಿಗಳು ಸಿಕ್ಕಿವೆ ಎಂದಷ್ಟೇ ಈ ಸಂದರ್ಭದಲ್ಲಿ ಹೇಳಬಲ್ಲೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ನಾವು ಈ ಬಗ್ಗೆ ಮಾಹಿತಿ ನೀಡಲಿದ್ದೇವೆ' ಎಂದು ಹೇಳಿದರು.
ಸ್ಪಾಟ್ ಫಿಕ್ಸಿಂಗ್ ಹಗರಣದಡಿ, ಆರಂಭದಲ್ಲೇ ರಾಜಸ್ಥಾನ ತಂಡದ ಮೂವರು ಆಟಗಾರರ ಜೊತೆಯಲ್ಲಿ ಇತರ ತಂಡಗಳಲ್ಲಿನ ಆಟಗಾರರ ಬಗ್ಗೆಯೂ ತನಿಖೆಯನ್ನು ಏಕೆ ನಡೆಸಲಿಲ್ಲ ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಅವರು, 'ತನಿಖೆ ಆರಂಭಕ್ಕೂ ಮುನ್ನ ಈ ಮೂವರು ಕ್ರಿಕೆಟರ್‌ಗಳ ಬಗ್ಗೆ ಮಾತ್ರ ನಮಗೆ ಮಾಹಿತಿ ಸಿಕ್ಕಿದ್ದು. ತಕ್ಷಣ ಜಾಗೃತರಾದ ನಾವು ಈ ಮೂವರು ಕ್ರಿಕೆಟರ್‌ಗಳ ಚಲನವಲನಗಳ ಬಗ್ಗೆ ನಿಗಾವಹಿಸಿ, ತನಿಖೆ ಆರಂಭಿಸಿದ್ದೆವು. ಅವರ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳೂ ಲಭ್ಯವಾದವು. ಬುಕಿಗಳನ್ನು ಗುಪ್ತವಾಗಿ ಸಂಪರ್ಕಿಸುತ್ತಿದ್ದ ಅವರ ನಡವಳಿಕೆ ಹಾಗೂ ಇನ್ನಿತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಾವು ಅವರನ್ನು ಬಂಧಿಸಿದೆವು' ಎಂದು ಅವರು ತಿಳಿಸಿದರು.
ಮೇ 17ರ ಪಂದ್ಯವೂ ಫಿಕ್ಸ್ ಆಗಿತ್ತು: ಏತನ್ಮಧ್ಯೆ, ಫಿಕ್ಸ್ ಆಗಿದ್ದ ಐಪಿಎಲ್ ಪಂದ್ಯವೊಂದು ಹಗರಣ ಬಯಲಾದ ಹಿನ್ನೆಲೆಯಲ್ಲಿ ರದ್ದಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಮೇ. 17ರಂದು ನಡೆಯಬೇಕಿದ್ದ ಐಪಿಎಲ್ ಪಂದ್ಯವೊಂದು ಆಗಲೇ ಫಿಕ್ಸ್ ಆಗಿತ್ತು. ಆದರೆ, ಅದಕ್ಕೂ ಮುನ್ನವೇ ಶ್ರೀಶಾಂತ್ ಹಾಗೂ ಇತರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಲುಕಿದ ಪ್ರಕರಣ ಬಯಲಾದ ಕೂಡಲೇ ಬುಕಿಗಳು ಹಾಗೂ ಆಟಗಾರರು ತಣ್ಣಗಾದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಅಜಿತ್ ಚಾಂಡಿಲ ಅವರು ಬುಕಿಗಳಿಂದ ಎಷ್ಟು ಮೊತ್ತವನ್ನು ಪಡೆದರು ಹಾಗೂ ಇತರ ಆಟಗಾರರಿಗೆ ಹಣ ಕೊಡಿಸುವಲ್ಲಿ ಯಾವ ಕ್ರಮಗಳನ್ನು ಅನುಸರಿಸುತ್ತಿದ್ದರೆಂಬುದರ ಬಗ್ಗೆ ಸೂಕ್ತವಾದ ಆಧಾರಗಳೂ ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಬೂರಾವ್ ಬಗ್ಗೆಯೂ ಮಾಹಿತಿ: ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಥಮ ದರ್ಜೆ ಕ್ರಿಕೆಟಿಗ ಬಾಬೂರಾವ್ ಯಾದವ್ ಅವರು, ಇತ್ತೀಚೆಗೆ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲೂ ಆಡಿದ್ದರು. ಅಲ್ಲಿಯೂ ಅವರು, ಬಾಂಗ್ಲಾದೇಶದ ಹಿರಿಯ ಕ್ರಿಕೆಟಿಗರೊಬ್ಬರ ಸಹಾಯದಿಂದ ಸ್ಪಾಟ್ ಫಿಕ್ಸಿಂಗ್ ನಡೆಸಿರುವ ಬಗ್ಗೆ ಕೆಲ ಮಾಹಿತಿಗಳು ಲಭ್ಯವಾಗಿವೆ ಎಂದು ಅವರು ತಿಳಿಸಿದರು.
ಕೋಲ್ಕತಾದಲ್ಲಿ ಬುಕಿಗಳ ಬಂಧನ: ದೆಹಲಿ ಹಾಗೂ ಮುಂಬೈ ಪೊಲೀಸರ ಹೆಗಲಿಗೆ ಬಿದ್ದಿರುವ ಐಪಿಎಲ್ ಫಿಕ್ಸಿಂಗ್ ತನಿಖೆ ಈಗ ಕೋಲ್ಕತಾ ಪೊಲೀಸರ ಹೆಗಲಿಗೂ ಬಿದ್ದಿದೆ. ಮೋಸದಾಟ ನಡೆಸುತ್ತಿದ್ದ ಇಬ್ಬರು ಬುಕಿಗಳು ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದ ಇತರ ಒಂಭತ್ತು ಮಂದಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.