ಮುಂಬೈ- ರಾಜಸ್ಥಾನ ಮುಖಾಮುಖಿ
ರಾಜಸ್ಥಾನ ರಾಯಲ್ಸ್ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಕೋಲ್ಕತಾ: ತಂಡದ ಆಟಗಾರರು ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಕ್ಕಿಬೀದ್ದರೂ ವಿಚಲಿತಗೊಳ್ಳದೇ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಉಭಯ ತಂಡಗಳ ಬಲಾಬಲ ಅವಲೋಕನ ಮಾಡಿದಾಗ ಮುಂಬೈ ಬಲಿಷ್ಠ ತಂಡವಾಗಿದೆ. ಆದರೆ, ಎಲಿಮಿನೇಟರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 4 ವಿಕೆಟ್ ಅಂತರದಿಂದ ಜಯ ಸಾಧಿಸಿದ ನಂತರರಾಜಸ್ಥಾನ ರಾಯಲ್ಸ್ ತಂಡ ತನ್ನ ವಿಶ್ವಾಸವನ್ನು ವೃದ್ಧಿಸಿಕೊಂಡಿದೆ.
ಈ ಪಂದ್ಯದಲ್ಲಿ ಗೆದ್ದ ತಂಡ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಎಲಿಮಿನೇಟರ್ ಹೋರಾಟದಲ್ಲಿ, ಒಂದು ಹಂತದಲ್ಲಿ ಸೋಲಿನ ಹಾದಿ ಹಿಡಿದಿದ್ದ ರಾಜಸ್ಥಾನ ತಂಡವನ್ನು 29 ಎಸೆತಗಳಲ್ಲಿ 54 ರನ್ ಬಾರಿಸಿದ ಬ್ರಾಡ್ ಹಾಡ್ಜ್ ಜಯದ ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಬ್ರಾಡ್ ಜತೆಗೆ ಶೇನ್ ವಾಟ್ಸನ್ ಸಹ ರಾಜಸ್ಥಾನಕ್ಕೆ ನೆರವಾಗಲಿದ್ದಾರೆ.
ಇನ್ನೊಂದೆಡೆ ಮುಂಬೈ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 48 ರನ್ಗಳ ಅಂತರದಿಂದ ಕೈಚೆಲ್ಲುವ ಮೂಲಕ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಆಗಮಿಸಿದೆ. ಅಲ್ಲದೆ ಅಂತಿಮ ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 50 ರನ್ಗಳ ಅಂತರದಿಂದ ಸೋಲನುಭವನಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಅದು ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಮಹತ್ವ ಪಡೆದುಕೊಂಡಿದೆ.
ಅಲ್ಲದೆ ಕೈಗೆ ಗಾಯ ಮಾಡಿಕೊಂಡಿರುವ ಹಿರಿಯ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಸಹ ಈ ಪಂದ್ಯದಲ್ಲಿ ಭಾಗವಹಿಸುವ ಬಗ್ಗೆ ಅನುಮಾನವಿದೆ. ರಾಜಸ್ಥಾನಕ್ಕಿಂತ ಮುಂಬೈ ತಂಡ ಸಮರ್ಥ ಆಟಗಾರರಿಂದ ಕೂಡಿದ ತಂಡವಾಗಿದೆ.
2010ರಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ ತಂಡ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆಗ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಎನಿಸಿತ್ತು.
ಮುಂಬೈಗೆ ಆರಂಭಿಕ ಜೋಡಿಯ ತಲೆಬಿಸಿ ಅಂತ್ಯಗೊಂಡಿಲ್ಲ. ಪಂದ್ಯಾವಳಿಯಲ್ಲಿ 17 ಪಂದ್ಯಗಳನ್ನಾಡಿದರೂ ಸಮರ್ಥ ಆರಂಭಿಕ ಜೋಡಿ ದೊರಕದೇ ತಂಡ ಒದ್ದಾಡುತ್ತಿದೆ. ಮುಂಬೈ ವಿರುದ್ಧ 193 ರನ್ಗಳ ಚೇಸಿಂಗ್ ಮಾಡಿದ್ದ ಮುಂಬೈ ಬ್ಯಾಟಿಂಗ್ ವೈಫಲ್ಯ ಕಾಣುವ ಮೂಲಕ ಸೋಲನುಭವಿಸಿತ್ತು. ಅಲ್ಲದೆ, ತಂಡದ ಬೌಲರ್ಗಳೂ ಹೆಚ್ಚಿನ ರನ್ ಕೈಚೆಲ್ಲಿದ್ದರು.
ಫಾರ್ಮ್ನಲ್ಲಿದ್ದ ಡ್ವೈನ್ ಸ್ಮಿತ್ ಮಾತ್ರ ಬ್ಯಾಟಿಂಗ್ನಲ್ಲಿ ಮಿಂಚಿದ್ದರು. ಆದರೆ, ನಾಯಕ ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ತಕ್ಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವೈಫಲ್ಯ ಕಂಡಿದ್ದರು. ಹೀಗಾಗಿ ಸ್ಮಿತ್ ಮುಂಬೈ ತಂಡದ ಪ್ರಮುಖ ಬ್ಯಾಟ್ಸ್ಮನ್ ಎನಿಸಿದ್ದಾರೆ. ಮುಂಬೈ ಬೌಲಿಂಗ್ ವಿಭಾಗ ಸಹ ಬಲಿಷ್ಠವಾಗಿದೆ. ಹರ್ಭಜನ್ ಸಿಂಗ್ ಮತ್ತು ಪ್ರಗ್ಯಾನ್ ಓಜಾ ಈಡನ್ ಗಾರ್ಡನ್ನಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ.
ಇದುವರೆಗೂ ಈಡನ್ ಗಾರ್ಡನ್ನಲ್ಲಿ ಉಭಯ ತಂಡಗಳು ನೀಡಿರುವ ಪ್ರದರ್ಶನವನ್ನು ನೋಡಿದರೆ, ಮುಂಬೈ ಕೆಕೆಆರ್ ವಿರುದ್ಧ ಜಯ ಕಂಡುಕೊಂಡಿದ್ದರೆ, ರಾಜಸ್ಥಾನ 8 ವಿಕೆಟ್ಗಳ ಅಂತರದಿಂದ ಸೋಲನುಭವಿಸಿತ್ತು.
ಕಳೆದ ಬಾರಿ ಪಂದ್ಯದಲ್ಲಿ ರಾಜಸ್ಥಾನ ತಂಡದ ನಾಯಕ ರಾಹುಲ್ ದ್ರಾವಿಡ್ ರಕ್ಷಣಾತ್ಮಕ ಪ್ರದರ್ಶನ ತೋರಿದ್ದರು. ಆದರೆ, ಈ ಬಾರಿ ಆಕ್ರಮಣಕಾರಿ ಪ್ರದರ್ಶನ ತೋರುವ ಸಮಯ ಎದುರಾಗಿದೆ. ರಾಜಸ್ಥಾನ ಹೇಗೆ ಪ್ರದರ್ಶನ ನೀಡಲಿದೆ ಎಂಬುದೇ ಹೆಚ್ಚು ಕುತೂಹಲ ಮೂಡಿಸಿದೆ.
ಸಂಭಾವ್ಯ ತಂಡಗಳು
ಮುಂಬೈ
ರೋಹಿತ್ ಶರ್ಮಾ(ನಾಯಕ), ಸಚಿನ್ ತೆಂಡೂಲ್ಕರ್, ಅಬು ನಚಿಮ್, ಹರ್ಭಜನ್ ಸಿಂಗ್, ಫಿಲಿಪ್ ಹ್ಯೂಸ್, ಮಿಚ್ಚೆಲ್ ಜಾನ್ಸನ್, ದಿನೇಶ್ ಕಾರ್ತಿಕ್, ದವಳ್ ಕುಲಕರ್ಣಿ, ಲಸಿತ್ ಮಾಲಿಂಗಾ, ಗ್ಲೆನ್ ಮ್ಯಾಕ್ಸ್ವೆಲ್, ಪ್ರಗ್ಯಾನ್ ಓಜಾ, ಜೇಕಬ್ ಓರಂ, ಮುನಾಫ್ ಪಟೇಲ್, ಕೀರನ್ ಪೊಲಾರ್ಡ್, ಅಂಬಟಿ ರಾಯುಡು, ಜಲಜ್ ಸಕ್ಸೇನಾ, ಡ್ವೇನ್ ಸ್ಮಿತ್, ಆದಿತ್ಯ ತಾರೆ
ರಾಜಸ್ಥಾನ
ರಾಹುಲ್ ದ್ರಾವಿಡ್ (ನಾಯಕ), ಅಜಿಂಕ್ಯ ರಹಾನೆ, ಅಶೋಕ್ ಮನೇರಿಯಾ, ಬ್ರಾಡ್ ಹಾಡ್ಜ್, ಬ್ರಾಡ್ ಹಾಗ್, ದಿಶಾಂತ್ ಯಗ್ನಿಕ್, ಹರ್ಮೀತ್ ಸಿಂಗ್, ಜೇಮ್ಸ್ ಫಾಕ್ನರ್, ಕೆವಿನ್ ಕೂಪರ್, ಕುಶಾಲ್ ಜನಿತ್ ಪೆರೇರಾ, ಒವೈಸ್ ಶಾ, ಪ್ರವೀಣ್ ತಂಬೆ, ರಾಹುಲ್ ಶುಕ್ಲಾ, ಸಚಿನ್ ಬೇಬಿ, ಸ್ಯಾಮ್ಯುಯೆಲ್ ಬದ್ರೀ, ಸಂಜು ಸ್ಯಾಮ್ಸನ್, ಶೇನ್ ವ್ಯಾಟ್ಸನ್, ಸಿದ್ಧಾರ್ಥ್ ತ್ರಿವೇದಿ, ಸ್ಟುವರ್ಟ್ ಬಿನ್ನಿ