ಮಾಧ್ಯಮಗಳು ನನ್ನನ್ನು ಕಾಡುತ್ತಿವೆ: ಶ್ರೀನಿವಾಸನ್
ಚೆನ್ನೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ನಂತರವೂ ತಮ್ಮ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರಾಕರಿಸಿರುವ ಎನ್.ಶ್ರೀನಿವಾಸನ್, ಮಾಧ್ಯಮಗಳು ನನ್ನನ್ನು ಕಾಡುತ್ತಿವೆ ಎಂದು ತಿಳಿಸಿದ್ದಾರೆ.
ಬೆಟ್ಟಿಂಗ್ ಪ್ರಕರಣದಲ್ಲಿ ತಮ್ಮ ಅಳಿಯ ಹಾಗೂ ಸಿಎಸ್ಕೆ ತಂಡದ ಸಿಇಒ ಗುರುನಾಥ ಮೇಯಪ್ಪನ್ ಅವರು ಭಾಗಿಯಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಬಂಧನವಾದ ನಂತರ, ಶ್ರೀನಿವಾಸನ್ ತಮ್ಮ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂಬ ಕೂಗು ಕೇಳಿ ಬಂದಿದ್ದವು.
ಪತ್ರಿಕೆಗಳು ಹಾಗೂ ಮಾಧ್ಯಮಗಳು ನನ್ನನ್ನು ಕಾಡುತ್ತಿದೆ. ನಾನು ಈಗಾಗಲೇ ಪತ್ರಿಕಾ ಗೋಷ್ಠಿಯಲ್ಲಿ ಎಲ್ಲಾ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಹಾಗಾಗಿ ನಾನು ರಾಜಿನಾಮೆ ನೀಡಲು ಕಾರಣವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಾನು ರಾಜಿನಾಮೆ ನೀಡಬೇಕೆಂದು ಬಿಸಿಸಿಐನ ಯಾವುದೇ ಸದಸ್ಯರು ಕೇಳಿಲ್ಲ. ನಾನು ಈ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಬಿಸಿಸಿಐ ಊ ಪ್ರಕರಣದಲ್ಲಿ ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ, ಪಕ್ಷಪಾತ ನಡೆಸದೇ ತನಿಖೆ ನಡೆಸುವುದು, ಒಂದುವೇಳೆ ಯಾವುದೇ ಆಟಗಾರರು, ಫ್ರಾಂಚೈಸಿಗಳು ಹಾಗೂ ಮಾಲೀಕರು ತಪ್ಪು ನಡೆಸಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.