ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸ್ವಲ್ಪ ಹುಳಿ, ಸ್ವಲ್ಪ ಸಿಹಿ, ಹೆಚ್ಚು ಕಹಿ

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಹೊಸ ಪ್ರತಿಭೆಗಳನ್ನು ಶೋಧಿಸಿಕೊಟ್ಟ, ದಿಗ್ಗಜರ ಪಾಲಿಗೆ ಕೊನೆ ಹಾಗೂ...

Rashmi Kasaragodu
Updated On : 28 May 2013, 12:30 pm

ನವದೆಹಲಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಹೊಸ ಪ್ರತಿಭೆಗಳನ್ನು ಶೋಧಿಸಿಕೊಟ್ಟ, ದಿಗ್ಗಜರ ಪಾಲಿಗೆ ಕೊನೆ ಹಾಗೂ ಅದೇ ಕಾರಣಕ್ಕೆ ಸದಾ ನೆನಪಿನಲ್ಲಿರಲು ಕಾರಣವಾದಂತಹ ಐಪಿಎಲ್- 6 ಎಂಬ ಮಹಾ ಕ್ರಿಕೆಟ್ ಮೇಳ ಭಾನುವಾರ ಮುಕ್ತಾಯಗೊಂಡಿತು. ಅಲ್ಲದೇ, ಐಪಿಎಲ್ ಇತಿಹಾಸದಲ್ಲಿ ಹೊಸ ಚಾಂಪಿಯನ್ ತಂಡವೊಂದನ್ನು ರೂಪಿಸಿತು.
ಆದರೆ, ಇಷ್ಟೆಲ್ಲಾ ರಂಗು, ಗುಂಗು, ಆಕರ್ಷಣೆಗಳಿಂದ ತುಂಬಿದ್ದ ಈ ಪಂದ್ಯಾವಳಿ ಅಂತ್ಯದ ವೇಳೆಗೆ ಸ್ಪಾಟ್ ಫಿಕ್ಸಿಂಗ್ನಂಥ ವಿವಾದಗಳ ಸುಳಿಗೆ ಸಿಲುಕಿ ಕಳಾಹೀನವಾಯಿತು. ಪ್ರೇಕ್ಷಕರ ನಂಬಿಕೆಗೆ ದ್ರೋಹ ಎಸಗಿದ ಆರೋಪ ಹೊತ್ತ ಆಟಗಾರರು, ಫ್ರಾಂಚೈಸಿ ಮಾಲೀಕರು ಕ್ರಿಕೆಟ್ ಅಂದ್ರೆ ಜೀವ ಎನ್ನುವಂಥಾ ಅಭಿಮಾನಿಗಳಿಗೂ ವಾಕರಿಕೆ, ಅಸಹ್ಯ ತರಿಸಿದರು.

ಪೆಪ್ಸಿ ಪಾಲಿಗೆ ಮೊದಲ ಐಪಿಎಲ್: ಪಂದ್ಯಾವಳಿ ಆರಂಭದಲ್ಲೇ ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿತ್ತು. ಆರಂಭದಿಂದ ಹಿಡಿದು, ಐಪಿಎಲ್ 5ನೇ ಆವೃತ್ತಿಯವರೆಗೂ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದ್ದ ಡಿಎಲ್ಎಫ್ ಸಂಸ್ಥೆ, ಈ ಬಾರಿಯ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಆ ಜಾಗಕ್ಕೆ ಬಂದಿದ್ದು ಪೆಪ್ಸಿ ಕೋ ಸಂಸ್ಥೆ. ಹಾಗಾಗಿ, ಐಪಿಎಲ್- 6ನೇ ಆವೃತ್ತಿ ಪೆಪ್ಸಿ ಕಂಪನಿಗೆ ಇದು ಮೊದಲ ಐಪಿಎಲ್.
ಇನ್ನು, ಐಪಿಎಲ್ನಲ್ಲಿ ಈ ಹಿಂದೆ ಅಸ್ಥಿತ್ವದಲ್ಲಿದ್ದ ಸನ್ರೈಸರ್ಸ್ ಹೈದ್ರಾಬಾದ್ ತಂಡದ ಫ್ರಾಂಚೈಸಿಯನ್ನು ತಾಂತ್ರಿಕ ಕಾರಣಗಳಿಂದ ಬಿಸಿಸಿಐ ರದ್ದುಪಡಿಸಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಸನ್ರೈಸರ್ಸ್ ಹೈದರಾಬಾದ್ ತಂಡ ಹೊಸದಾಗಿ ಐಪಿಎಲ್ಗೆ ಕಾಲಿಟ್ಟಿತ್ತು. ಈ ತಂಡದ ಮಾಲೀಕತ್ವ ಹೊಂದಿದ್ದ ಸನ್ನೆಟ್ವರ್ಕ್ ಸಂಸ್ಥೆಗೂ ಇದು ಚೊಚ್ಚಲ ಐಪಿಎಲ್ ಅನುಭವ.

37 ಆಟಗಾರರ ಬಿಡ್ಡಿಂಗ್: ಫೆ. 3, 2013ರಂದು ತಂಡಗಳಿಗೆ ಆಟಗಾರರ ಬಿಡ್ಡಿಂಗ್ ನಡೆಸಲಾಯಿತು. ಈ ಬಿಡ್ಡಿಂಗ್ನಲ್ಲಿ ಒಟ್ಟು 37 ಆಟಗಾರರು ಮಾರಾಟಗೊಂಡರು. ಹರಾಜು ಮೊತ್ತ ಒಟ್ಟು 11.98 ಡಾಲರ್. ಈ ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮೊತ್ತದ ಗಂಟು ಪಡೆದವರೆಂದರೆ, ರಿಕಿ ಪಾಂಟಿಂಗ್ (ಮುಂಬೈ ಇಂಡಿಯನ್ಸ್ ತಂಡ). ಅವರು ಈ ಪಂದ್ಯಾವಳಿಗಾಗಿ ಗಳಿಸಿದ್ದು ರು. 2,22,30,000.

ಸಾಲ್ಟ್ ಲೇಕ್ನಲ್ಲಿ ಉದ್ಘಾಟನೆ: ಜನಸಾಂದ್ರತೆಯಲ್ಲಿ ದೇಶದ ಅತಿದೊಡ್ಡ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಕ್ರೀಡಾಂಗಣವಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಏ. 2ರಂದು ಪಂದ್ಯಾವಳಿಯ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಆಟಗಾರರು, 'ಸ್ಪಿರಿಟ್ ಆಫ್ ಕ್ರಿಕೆಟ್'ನ ಪ್ರಮಾಣ ಸ್ವೀಕರಿಸಿದರು.

ನಂತರದ ಅವಸಾನ:
ಉದ್ಘಾಟನಾ ಸಮಾರಂಭದಲ್ಲಿ ತೆಗೆದುಕೊಂಡಿದ್ದ ಪ್ರತಿಜ್ಞಾವಿಧಿಯನ್ನು ಮರೆತ ಕೆಲವು ಆಟಗಾರರು, ನಂತರ, ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಕ್ಕಿಹಾಕಿಕೊಂಡಿದ್ದು ಮಾತ್ರ ವಿಪರ್ಯಾಸ. ಭಾರತ ಎಂಬ ದೇಶದಲ್ಲಿ ಕ್ರಿಕೆಟ್ ಎನ್ನುವುದು ಧರ್ಮ, ಜಾತಿ, ಮೇಲು- ಕೀಳುಗಳ ಬೇಧಭಾವವನ್ನು ಮರೆಸಿ ಜನರನ್ನೂ ಒಗ್ಗೂಡಿಸುವ ಕ್ರೀಡೆಯಾಗಿ ಬೆಳೆದಿದೆಯೋ ಆ ಕ್ರೀಡೆಗೆ ಈ ಆಟಗಾರರು ತಮ್ಮ ಸ್ವಾರ್ಥ ಸಾಧನೆಗಾಗಿ ಕಪ್ಪುಮಸಿ ಬಳಿದರು.
ಆರಂಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರಾದ ಶ್ರೀಶಾಂತ್, ಅಜಿತ್ ಚಾಂಡಿಲ ಹಾಗೂ ಅಂಕಿತ್ ಚವಾಣ್ ಸಿಕ್ಕಿಹಾಕಿಕೊಂಡರೆ, ಆನಂತರ, ಈ ವಿಸ್ತೃತ ಜಾಲದ ವ್ಯಾಪ್ತಿ ಹೆಚ್ಚಾಗುತ್ತಾ ಸಾಗಿತು. ದಿನಗಳೆದಂತೆ, ಹಲವಾರು ಮಂದಿ ಈ ಫಿಕ್ಸಿಂಗ್ ಭೂತದೊಡನೆ ಕೈಜೋಡಿಸಿರುವುದು ಬಯಲಾಯಿತು. ಚೆನ್ನೈ ಸೂಪರ್ ಕಿಂಗ್ಸ್ನ ಸಿಇಒ ಆಗಿದ್ದ ಹಾಗೂ ಬಿಸಿಸಿಐ ಹಾಲಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರೂ ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸಿದ್ದು, ಇಡೀ ಐಪಿಎಲ್ ವ್ಯವಸ್ಥೆಯನ್ನೇ ಜನ ಅನುಮಾನದ ದೃಷ್ಟಿಯಿಂದ ನೋಡುವಂತಾಯ್ತು. ಇದರ ಜೊತೆಗೇ, ಐಪಿಎಲ್ನ ಆಡಳಿತ ಹಿಡಿರುವವರ ಸೋಗಲಾಡಿತನ, ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ? ಎನ್ನುವಂಥಾ ಪರಿಸ್ಥಿತಿಯಿದ್ದರೂ ಫ್ರಾಂಚೈಸಿಗಳ ಮಾಲೀಕರು ಆಡಿದ ಕಳ್ಳ ವ್ಯವಹಾರ ಜನರ ಭಾವನೆಗಳಿಗೆ ಧಕ್ಕೆ ತಂದಿತು.

ಭರವಸೆ ಮೂಡಿಸಿದ ಹೊಸಬರು: ಇದನ್ನು ಹೊರತುಪಡಿಸಿದಂತೆ, ಈ ಬಾರಿಯ ಐಪಿಎಲ್ ಪಂದ್ಯಾವಳಿ ಹಲವಾರು ಭರವಸೆ ಆಟಗಾರರನ್ನು ಬೆಳಕಿಗೆ ತಂದಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಐಪಿಎಲ್ಗೆ ಕಾಲಿಟ್ಟಿದ್ದ ಕೆಲವು ಪ್ರತಿಭಾವಂತರ ತಾಕತ್ತನ್ನೂ ಈ ಪಂದ್ಯಾವಳಿಯ ಪರಿಚಯಿಸಿದೆ. ಇವರಲ್ಲಿ ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್), ಮೋಹಿತ್ ಶರ್ಮಾ (ಚೆನ್ನೈ ಸೂಪರ್ ಕಿಂಗ್ಸ್), ಹನುಮ ವಿಹಾರಿ (ಸನ್ರೈಸರ್ಸ್ ಹೈದರಾಬಾದ್) ಹಾಗೂ ಗುರುಕೀರತ್ ಸಿಂಗ್ (ಕಿಂಗ್ಸ್ ಇಲೆವೆನ್ ಪಂಜಾಬ್) ಪ್ರಮುಖರು.

ಮುಂಬೈಗೆ ಚಾಂಪಿಯನ್ ಪಟ್ಟ:  ಸಮಗ್ರ ಪಂದ್ಯಾವಳಿಯನ್ನು ಒಮ್ಮೆ ಅವಲೋಕಿಸಿದರೆ, ಪಂದ್ಯಾವಳಿಯ ಮೊದಲಾರ್ಧದಲ್ಲಿ ಅಂಕಪಟ್ಟಿಯ ಮೇಲ್ಪಂಕ್ತಿಯಲ್ಲಿದ್ದ ತಂಡಗಳಲ್ಲಿ ಪ್ಲೇ-ಆಫ್ ಹಂತಕ್ಕೆ ಸಾಕಷ್ಟು ಪೈಪೋಟಿ ನಡೆಯಿತು. ಪಂದ್ಯಾವಳಿಯ ಮೊದಲಾರ್ಧದಲ್ಲಿ ಮಂಚೂಣಿಯಲ್ಲಿದ್ದ ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ, ಮುಂಬೈ, ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಉತ್ತಮ ಪ್ರದರ್ಶನ ನೀಡಿದ ಮೊದಲ ಐದು ಸ್ಥಾನಗಳಲ್ಲಿ ಏರಿಳಿತದ ಆಟವಾಡುತ್ತಿದ್ದವು.
ಆದರೆ, ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ, ಈ ಏರಿಳಿತ ತೀವ್ರಗತಿಯಲ್ಲಿ ಸಾಗಿ, ಚೆನ್ನೈ, ರಾಜಸ್ಥಾನ, ಪಂಜಾಬ್, ಸನ್ರೈಸರ್ಸ್ ಮಾತ್ರವೇ ಪ್ಲೇ-ಆಫ್ ಹಾದಿಯನ್ನು ಸುಗಮವಾಗಿಸಿಕೊಂಡವು. ಇನ್ನು, ಫೈನಲ್ಗೆ ಕಾಲಿಟ್ಟಿದ್ದು ಚೆನ್ನೈ ಹಾಗೂ ಮುಂಬೈ ತಂಡಗಳು. ಅಂತಿಮ ಪಂದ್ಯದಲ್ಲಿ ಚೆನ್ನೈ ತಂಡವನ್ನು ಸೋಲಿಸುವ ಮೂಲಕ ಮುಂಬೈ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಅಂತಿಮ ಹಂತದ ಬೇಸರ: ಏತನ್ಮಧ್ಯೆ, ಸಹಾರಾ ತಂಡ ಐಪಿಎಲ್ನಲ್ಲಿ ಹಿಂದೆ ಸರಿದಿದ್ದು ಪಂದ್ಯಾವಳಿಯ ಮತ್ತೊಂದು ಕಪ್ಪು ಚುಕ್ಕೆ. ಅಷ್ಟೇ ಅಲ್ಲ, ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿರುವ ಸಹಾರಾ ಸಂಸ್ಥೆ, ಅವರು ಬಿಸಿಸಿಐ ಅಧ್ಯಕ್ಷರಾಗಿರುವವರೆಗೂ ತಾವು ಟೀಂ ಇಂಡಿಯಾಗೆ ಪ್ರಾಯೋಜಕತ್ವ ವಹಿಸುವುದಿಲ್ಲವೆಂದು ಘೋಷಿಸಿದೆ.

ಮಾಂತ್ರಿಕರ ವಿದಾಯ: ಈ ಬಾರಿಯ ಐಪಿಎಲ್, ಮೂವರು ಮಹಾನ್ ದಿಗ್ಗಜರ ವಿದಾಯಕ್ಕೆ ಸಾಕ್ಷಿಯಾಯಿತು. ಸಚಿನ್ ತೆಂಡೂಲ್ಕರ್, ಗಿಲ್ ಕ್ರಿಸ್ಟ್ ಹಾಗೂ ರಾಹುಲ್ ದ್ರಾವಿಡ್ ಅವರು ಇದೇ ತಮ್ಮ ಕೊನೆಯ ಐಪಿಎಲ್ ಎಂದು ಸಾರಿರುವುದು ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರದ ಸಂಗತಿ.

ನನ್ನ ವಯಸ್ಸು ಈಗ 40 ವರ್ಷ. ಐಪಿಎಲ್ ಪಂದ್ಯಗಳಿಗೆ ವಿದಾಯ ಹೇಳಲು ಸಕಾಲ ಎಂದು ನಾನು ಭಾವಿಸುತ್ತೇನೆ. ನನ್ನಲ್ಲಿ ಇನ್ನೂ ಕ್ರಿಕೆಟ್ ಆಡುವ ಉತ್ಸಾಹವಿದೆ. ಆದರೆ, ಅದಕ್ಕಿಂತಲೂ ಹೆಚ್ಚಾಗಿ ನಾನು ವಾಸ್ತವಿಕತೆಯನ್ನು ಒಪ್ಪಿಕೊಳ್ಳಲೇಬೇಕಿದೆ.
- ಸಚಿನ್ ತೆಂಡೂಲ್ಕರ್, ಮುಂಬೈ ಇಂಡಿಯನ್ಸ್ ತಂಡದ ಆಟಗಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement