ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆರ್ ಸಿಬಿ-ಕೆಕೆಆರ್ ಪಂದ್ಯ ಫಿಕ್ಸ್?

Rashmi Kasaragodu
Updated On : 30 May 2013, 12:07 pm

ನವದೆಹಲಿ: ಬಂಧನಕ್ಕೊಳಗಾಗಿರುವ ವಿಕ್ಕಿ, ತನ್ನ ಜೊತೆ ಕೆಲವು ಬುಕ್ಕಿಗಳನ್ನು ಕರೆದುಕೊಂಡು, ಮೇ ಎರಡನೇ ವಾರದಲ್ಲಿ ನಡೆದಿದ್ದ ಕೆಕೆಆರ್ ಹಾಗೂ ಆರ್ಸಿಬಿ ಪಂದ್ಯಕ್ಕೂ ಮುನ್ನಾ ದಿನ ಅಜಿತ್ ಚಂಡೀಲ ಅವರನ್ನು ರಾಂಚಿಯಲ್ಲಿ ಭೇಟಿಯಾಗಿದ್ದ.
ಆ ಸಂದರ್ಭದಲ್ಲಿ, ಅಜಿತ್ ಚಂಡೀಲ ಅವರನ್ನು ಕೆಕೆಆರ್ ಹಾಗೂ ಆರ್ಸಿಬಿ ಪಂದ್ಯಗಳಲ್ಲಿ ಯಾವ ತಂಡ ಗೆಲ್ಲುತ್ತದೆ ಎಂದು ಕೇಳಿದ್ದ. ಅಜಿತ್ 'ಕೆಕೆಆರ್ ಗೆಲ್ಲುತ್ತದೆ' ಎಂದಿದ್ದರು.
ಕೆಕೆಆರ್ ಗೆಲ್ಲುವ ಮಾಹಿತಿ ಪಡೆದ ಬುಕ್ಕಿಗಳು, ಅಜಿತ್ ಹೇಳಿದಂತೆ ಕೆಕೆಆರ್ ಗೆದ್ದರೆ, ಅಜಿತ್ಗೆ ರು.  30 ಲಕ್ಷ ನೀಡುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ, ರು. 2 ಲಕ್ಷ ಮೊತ್ತವನ್ನು ಅಜಿತ್ ಅವರಿಗೆ ಮುಂಗಡವಾಗಿ ನೀಡಲಾಗಿತ್ತು.
ಮರುದಿನ ಪಂದ್ಯದಲ್ಲಿ ಕೆಕೆಆರ್ ತಂಡವೇ ಪಂದ್ಯವನ್ನು ಗೆದ್ದುಕೊಂಡಿತು. ಆದರೆ, ಅಜಿತ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಂತೆ ಪೂರ್ತಿ ಹಣವನ್ನು ಸಂದಾಯ ಮಾಡಲು ಬುಕ್ಕಿಗಳು ನಿರಾಕರಿಸಿದರು. 'ಕನಿಷ್ಠ ಮೊತ್ತ'ದ ಪಂದ್ಯ ಇದಾಗಿದ್ದರಿಂದ ಬಾಕಿ ಹಣವನ್ನು ನೀಡಲಾಗುವುದಿಲ್ಲವೆಂದು ಬುಕ್ಕಿಗಳು ಪಟ್ಟು ಹಿಡಿದರು.
ಆದರೆ, ಅಜಿತ್ ಇವರ ಮಾತನ್ನು ಒಪ್ಪಲಿಲ್ಲ. ಕೊನೆಗೂ, ಸಂಧಾನವೇರ್ಪಟ್ಟು ಅಜಿತ್ ಅವರಿಗೆ ರು. 5 ಲಕ್ಷ ಮಾತ್ರ ನೀಡಲು ಬುಕ್ಕಿಗಳು ಒಪ್ಪಿಕೊಂಡರು. ಅದರಂತೆಯೇ, ನಂತರದ ದಿನಗಳಲ್ಲಿ ಅಜಿತ್ ಅವರಿಗೆ ತಲುಪಿಸುವಂತೆ ಸೂಚಿಸಿ ವಿಕ್ಕಿಗೆ ರು.  5 ಲಕ್ಷ ನೀಡಲಾಯಿತು. ಆದರೆ, ವಿಕ್ಕಿ ಇದನ್ನು ಅಜಿತ್ಗೆ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿದಾಡುತ್ತಿರುವ ಎರಡು ಪ್ರಶ್ನೆಗಳು...: ಅಜಿತ್, ವಿಕ್ಕಿ ಹಾಗೂ ಬುಕ್ಕಿಗಳ ನಡುವಿನ ಭೇಟಿ ಹಾಗೂ ಮತ್ತಿತರ ವಿವರಗಳನ್ನು ಕಲೆಹಾಕಿರುವ ಪೊಲೀಸರ ತಲೆಯಲ್ಲಿ, ಪ್ರಮುಖವಾಗಿ  ಎರಡು ಪ್ರಶ್ನೆಗಳು ಸುಳಿದಾಡುತ್ತಿವೆ. ಈವರೆಗೆ ಸಾಮಾನ್ಯವಾಗಿ ತಿಳಿದಿದ್ದಂತೆ, ಕ್ರಿಕೆಟಿಗರು ತಾವು ಆಡುತ್ತಿದ್ದ ಪಂದ್ಯದಲ್ಲಿ ಮಾತ್ರ ಬೆಟ್ಟಿಂಗ್ ನಡೆಸುತ್ತಿರಲಿಲ್ಲ. ಬದಲಾಗಿ, ಬೇರೆ ಪಂದ್ಯಗಳನ್ನೂ ಫಿಕ್ಸ್ ಮಾಡುತ್ತಿದ್ದರೆಂಬ ಅನುಮಾನ ಕಾಡುತ್ತಿದೆ.
ಏಕೆಂದರೆ, ಅಜಿತ್ ಚಂಡೀಲ, ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ. ಹಾಗಿದ್ದೂ, ಆತ ಕೆಕೆಆರ್-ಆರ್ಸಿಬಿ ಪಂದ್ಯಗಳ ನಡುವಿನ ಫಲಿತಾಂಶವನ್ನು ಮೊದಲೇ ಬುಕ್ಕಿಗಳ ಮುಂದೆ ಹೇಳಿದ್ದಾನೆ. ಹೀಗಾಗಿ, ಈ ಅನುಮಾನ ಪೊಲೀಸರಲ್ಲಿ ಬಲವಾಗಿ ಬೇರೂರಿದೆ.
ಮತ್ತೊಂದು ಪ್ರಶ್ನೆಯೆಂದರೆ, ಕೆಕೆಆರ್ ಹಾಗೂ ಆರ್ಸಿಬಿ ಪಂದ್ಯವೂ ಫಿಕ್ಸ್ ಆಗಿತ್ತಾ ಎಂಬುದು. ಅಜಿತ್ಗೆ ಪಂದ್ಯಕ್ಕೂ ಒಂದು ದಿನ ಮುಂಚೆಯೇ ಪಂದ್ಯದ ಫಲಿತಾಂಶ ಹೇಗೆ ಗೊತ್ತಿತ್ತು ಎಂದೂ ಪೊಲೀಸರು ಗುಮಾನಿಯ ದೃಷ್ಟಿ ಹರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement