ಸ್ಪಾಟ್ ಫಿಕ್ಸಿಂಗ್: ಮತ್ತಿಬ್ಬರು ಬಲೆಗೆ
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ, ವಿಕ್ಕಿ ಚೌಧರಿ ಮತ್ತು ನಿತಿನ್ ಜೈನ್ ಎಂಬಿಬ್ಬರನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಫಿಕ್ಸಿಂಗ್ ಹಗರಣದಲ್ಲಿ ಬಂಧಿಸಲ್ಪಟ್ಟಿರುವ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಅಜಿತ್ ಚಂಡೀಲ ಅವರಿಗೆ ಬುಕ್ಕಿಗಳನ್ನು ಇದೇ ವಿಕ್ಕಿ ಚೌಧರಿಯೇ ಪರಿಚಯಿಸಿದ್ದ. ಅಲ್ಲದೇ, ವಿಕ್ಕಿ ಅವರು ಮಂಗಳವಾರ ಬಂಧಿತರಾಗಿರುವ ಭೂಪಿಂದರ್ ನಗರ್ ಎಂಬಾತನ ಆಪ್ತ ಸ್ನೇಹಿತ. ನವದೆಹಲಿಯ ಎರಡು ನೈಟ್ ಕ್ಲಬ್ಗಳ ಮುಖ್ಯ ಭದ್ರತಾ ಸಿಬ್ಬಂದಿಯಾಗಿರುವ ಭೂಪಿಂದರ್, ವಿಕ್ಕಿ ಇಬ್ಬರೂ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬಂಧಿತನಾಗಿರುವ ಮತ್ತೊಬ್ಬ ಆರೋಪಿ ನಿತಿನ್ ಜೈನ್, ವಿಕ್ಕಿಗೆ ಅಜಿತ್ ಚಂಡೀಲ ಅವರನ್ನು ಪರಿಚಯಿಸಿದ್ದ. ಆನಂತರ, ವಿಕ್ಕಿ ಹಾಗೂ ಆತನೊಂದಿಗೆ ಕೆಲ ಬುಕ್ಕಿಗಳು ಅಜಿತ್ ಅವರನ್ನು ಭೇಟಿಯಾಗುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.