ದೇವರ ಆಟ
'ಸಚಿನ್ ಅಂದರೆ ಕ್ರಿಕೆಟ್, ಕ್ರಿಕೆಟ್ ಅಂದರೆ ಸಚಿನ್' ಇದು ವಿಶ್ವದ ಹಲವಾರು ಕ್ರಿಕೆಟ್ ಅಭಿಮಾನಿಗಳು ಸಚಿನ್ ತೆಂಡೂಲ್ಕರ್ ಬಗ್ಗೆ ಇರಿಸಿಕೊಂಡಿದ್ದ ಅಭಿಮಾನ. ಸಚಿನ್ ಇಲ್ಲದ ಕ್ರಿಕೆಟ್ ಅನ್ನು ನಾನು ನೆನಪಿಸಿಕೊಳ್ಳಲಾರೆ ಎನ್ನುವವರೂ ಇದ್ದಾರೆ. ಕೇವಲ ಬ್ಯಾಟಿನಿಂದ್ ಚೆಂಡನ್ನು ಅಟ್ಟುವ ದಾಂಡಿಗನೊಬ್ಬ ಕ್ರಿಕೆಟ್ ಅಭಿಮಾನಿಗಳ ಮನದಾಳದಲ್ಲಿ ತುಂಬಿಕೊಂಡ ಈ ಬಗೆಯನ್ನು ವರ್ಣಿಸಲಸದಳ.
ಸೋಲು ಮತ್ತು ಗೆಲುವಿನ ಪಂದ್ಯವೇ ಕ್ರಿಕೆಟ್ ಎಂಬುದನ್ನು ಬದಿಗೊತ್ತಿ ಅದಕ್ಕೊಂದು ಹೊಸ ಆಯಾಮ ತಂದುಕೊಟ್ಟವರೇ ಸಚಿನ್. ಪಂದ್ಯಕ್ಕೊಂದು ಭಾವೋದ್ವೇಗ, ಎಡವಟ್ಟಾದಾಗ ಉಂಟಾಗುವ ಮುನಿಸು, ಸೋತಾಗ ಉಂಟಾಗುವ ಹತಾಶೆ, ಗೆದ್ದಾಗ ಉಂಟಾಗುವ ಪ್ರೀತಿ ಮಾಸ್ಟರ್ ಬ್ಲಾಸ್ಟರ್ ಅವರಿಂದ ಮತ್ತಷ್ಟು ಹೆಚ್ಚಾದವು. ಇದಕ್ಕಿಂತಲೂ ಹೆಚ್ಚಾಗಿ ಕ್ರಿಕೆಟ್ನ್ನೇ ಉಸಿರಾಗಿಸಿದ ಸಚಿನ್ ಅವರಿಗಿಂತ ದೊಡ್ಡ ಕ್ರೀಡಾಪಟುವೊಬ್ಬ ದೊರಕುವುದು ಅಪರೂಪ.
ತಮ್ಮ ವೃತ್ತಿ ಜೀವನದಲ್ಲಿ ತಾವು ಮಾಡಿದ ಸಾಧನೆಗಿಂತ ದೊಡ್ಡದಾಗಿ ಮೆರೆಯುವ ಕ್ರೀಡಾಪಟುಗಳು ಸಚಿನ್ ಅವರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ತಾವು ಎಂತಹ ದೊಡ್ಡ ಸಾಧನೆ ಮಾಡಿ ಎಷ್ಟೇ ದೊಡ್ಡ ಶಿಖರಕ್ಕೇರಿದರೂ ಸಚಿನ್ ತಮ್ಮ ಸರಳತೆ ಮತ್ತು ಸಜ್ಜನಿಕೆಯಲ್ಲಿ ವ್ಯತ್ಯಾಸ ತೋರಿಸಿಲ್ಲ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ನಂತಹ ಬಲಿಷ್ಠ ತಂಡಗಳ ಎದುರಿಗೆ ಸಚಿನ್ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸತೊಡಗಿದರೆ, ಅಭಿಮಾನಿಗಳಲ್ಲಿ ಸಮದ್ರದ ಅಲೆಗಳಿಗಿಂತ ಸಂತಸದ ಅಲೆಗಳು ಜೋರಾಗಿ ಬೀಸುತ್ತಿದ್ದವು. ಅಂತಹ ಅಲೆಗಳೇ ಸಚಿನ್ ಅವರಿಗೆ ಅಭಿಮಾನಿಗಳ ಹೃದಯದಲ್ಲಿ ಸ್ಥಾನವನ್ನು ಹೆಚ್ಚಿಸಿದವು. ಅವಕಾಶಗಳಿಗೆ ಸಚಿನ್ ಅವರು ಅರ್ಹರಾಗಿದ್ದಾರೆ, ಸಚಿನ್ ದಾಖಲೆ ವೀರ, ಕ್ರಿಕೆಟ್ ದೇವರು ಎಂದೆಲ್ಲ ನಾವು ಅವರನ್ನು ಹಾಡಿ ಹೊಗಳಿದ್ದೇವೆ. ಆತ ಕ್ರಿಕೆಟ್ ಮೈದಾನ ಬಿಟ್ಟು ದೂರ ಸರಿಯುವುದನ್ನು ನೆನಪಿಸಿಕೊಳ್ಳಲಾಗದವರು ಇದ್ದಾರೆ. ಅಂತವರ ಹೃದಯ ಕೊನೆಯ ಪಂದ್ಯಗಳನ್ನಾಡುತ್ತಿರುವ ಸಚಿನ್ ಅವರನ್ನು ನೋಡಿ ಕಂಪಿಸುತ್ತಿದೆ.
ಸಚಿನ್ ಅವರನ್ನು ಅಭಿಮಾನಿಗಳೇ ಕ್ರಿಕೆಟ್ ದೇವರು ಎಂದು ಕರೆದರು. ಅಂತಹ ಸಂಭೋದನೆಯಿಂದ ಹಿಗ್ಗದ ಸಚಿನ್, ಆ ಗೌರವಕ್ಕೆ ತಕ್ಕಂತೆ ಬೆಳೆದರು. ಸಚಿನ್ ಪ್ರತಿಯೊಬ್ಬರನ್ನು ಆವರಿಸಿಕೊಂಡಿದ್ದೇ ಹಾಗೆ. ಸಚಿನ್ ಅಷ್ಟೊಂದು ಸ್ವೀಕಾರರ್ಹರೂ ಹೌದು.
ಸಚಿನ್ ನಮ್ಮಂತೆಯೇ ಸಾಮಾನ್ಯ ವ್ಯಕ್ತಿ. ಆದರೆ, ಅವರು ಮಾಡಿದ ಸಾಧನೆ, ಸಾಮಾನ್ಯ ವ್ಯಕ್ತಿ ಸಹ ಅಸಾಧಾರಣವಾದುದನ್ನು ಸಾಧಿಸಬಹುದು ಎಂಬ ಭರವಸೆಯನ್ನು ನಮ್ಮಲ್ಲಿ ತುಂಬಿದ್ದಕ್ಕೆ ಸಚಿನ್ ದೊಡ್ಡ ವ್ಯಕ್ತಿಯಾಗಿ ಬೆಳೆದು ನಿಂತರು.
ಕ್ರೀಡೆಯಲ್ಲಿ ಹಳಬರು ಹೋಗುತ್ತಾರೆ, ಹೊಸಬರು ಬರುತ್ತಾರೆ ಆದರೆ, ಸಚಿನ್ ಅವರಂತವರು ಮಾತ್ರ ಅಜರಾಮರವಾಗಿ ಉಳಿಯುತ್ತಾರೆ. ಅವರೇ ಹೇಳುವಂತೆ ನಿಜವಾಗಿಯೂ ಸಚಿನ್ ಅವರು ಕ್ರಿಕೆಟ್ಗಿಂತ ದೊಡ್ಡವರಲ್ಲ. ಸಚಿನ್ ಸೌಮ್ಯ ಸ್ವಭಾವ ಮತ್ತು ಅಳವಡಿಸಿಕೊಂಡಿರುವ ತತ್ವ ಅವರಿಗೆ ಅಷ್ಟೊಂದು ಮಹತ್ವ ತಂದುಕೊಟ್ಟಿದೆ. ಬ್ಯಾಟಿಂಗ್ ದಿಗ್ಗಜ ಆಡುತ್ತಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಉಂಟಾಗಿರುವ ಪ್ರಚಾರ ಮತ್ತು ಪ್ರತಿಕ್ರಿಯೆ ಊಹಿಸಲೂ ಸಾಧ್ಯವಿಲ್ಲ. ಜನರು ತಮಗೆ ಬೇಕಾದ ವ್ಯಕ್ತಿಯ ಚಿನ್ನದ ಮೂರ್ತಿಯನ್ನು ಕೆತ್ತಿದರೆ, ಅದು ಅವರ ಪ್ರೀತಿಯಲ್ಲವೇ?
ಇಷ್ಟೆಲ್ಲ ಬೆಳೆಸಿಕೊಂಡಿರುವ ಸಚಿನ್ ಅವರನ್ನು ಅವರ ವಯಸ್ಸು ಕ್ರಿಕೆಟ್ನಿಂದ ದೂರ ಸರಿಯುವಂತೆ ಮಾಡಿದೆ. ಆದರೆ, ಅವರ ಸಾಧನೆಗೆ ಯಾವತ್ತೂ ವಯಸ್ಸಾಗದು. ಅದು ಯುಗ ಯುಗಗಳು ಕಳೆದರೂ ಹಾಗೇ ಉಳಿಯಲಿದೆ.
ಈಡನ್ ಇತಿಹಾಸ
ಟೆಸ್ಟ್ ಕ್ರಿಕೆಟ್ನಲ್ಲಿ ಕೊನೆಯ ಸರಣಿ ಆಡುತ್ತಿರುವ ಸಚಿನ್ ಅವರಿಗೆ ಇದುವರೆಗೂ ವಿಶ್ವದ ಯಾವುದೇ ಕ್ರೀಡಾಪಟುವಿಗೆ ಸಿಗದ ಗೌರವ ದೊರಕುತ್ತಿದೆ. ಸಚಿನ್ಗೆ ಕೊಡುಗೆಗಳ ಸುರಿಮಳೆಯೇ ಸುರಿದಿದೆ. ಅಲ್ಲದೆ, ಈಡನ್ ಗಾರ್ಡನ್ ಪಂದ್ಯದ ಟಿಕೆಟ್ಗಳ ಮೇಲೆ ಸಚಿನ್ ಭಾವಚಿತ್ರ ಪ್ರಕಟಸಿದ್ದು ಇತಿಹಾಸವೇ ಸರಿ. 'ನಾನು ದೊಡ್ಡ ವ್ಯಕ್ತಿಯಲ್ಲ ದೇಶಕ್ಕಾಗಿ ಆಡುತ್ತೇನೆ' ಎಂದಷ್ಟೇ ಹೇಳಿದ ಸಚಿನ್ ಅವರನ್ನು ಕ್ರಿಕೆಟ್ಗಿಂತ ಹೆಚ್ಚಾಗಿ ಜನರು ಕಂಡರು.
- ಮಲ್ಲಿಕಾರ್ಜನ ಕರಿಯಪ್ಪನವರ