ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಜ್ವಾಲಾ ಮುಖಿ

Lingaraj Badiger
Updated On : 11 Oct 2013, 6:55 am

ಜ್ವಾಲಾ ಗುಟ್ಟಾ ಎಂಬ ಭಾರತ ಬ್ಯಾಡ್ಮಿಂಟನ್‌ನ ಮೋಹಕ ಸುಂದರಿ, ತನ್ನ ಆಟದ ಮೋಡಿಯಿಂದ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿಕೊಂಡಿದ್ದಾಳೆ. ಅಂತಹ ಸುಂದರಿ ಮೇಲೆ ಸೇಡು ತೀರಿಸಿಕೊಳ್ಳಲು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಐಎ) ಯತ್ನಿಸುತ್ತಿದೆ ಎಂಬುದೇ ಈಗ ಸುದ್ದಿಗೆ ಗ್ರಾಸವಾಗಿರುವ ವಿಷಯ.

ಸದಾ ಒಂದಿಲ್ಲೊಂದು ವಿವಾದದಿಂದ ಸುದ್ದಿಯಾಗುವ ಗುಟ್ಟಾಗೆ, ಈ ಹಿಂದೆ ಯಾರೂ ಅನುಕಂಪ ತೋರುತ್ತಿರಲಿಲ್ಲ. ಆದರೆ, ಈ ಬಾರಿ ಆಕೆಯ ಮೇಲೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಆಜೀವ ನಿಷೇಧ ಹೇರಿರುವ ಕುರಿತು ಭಾರೀ ವಿರೋಧ ವ್ಯಕ್ತವಾಗಿದೆ. ತಂಡವೊಂದಕ್ಕೆ ಸಂಬಂಧಿಸಿದ ವಿಷಯಕ್ಕೆ ಜ್ವಾಲಾ ಮೇಲೆ ನಿಷೇಧ ಹೇರಲು ಸಂಸ್ಥೆಯ ನಿರ್ಧಾರದ ಹಿಂದೆ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಎದುರು ನೋಡಲಾಗುತ್ತಿದೆ ಎಂಬ ವದಂತಿಗಳು ದಟ್ಟವಾಗಿವೆ. ಅಷ್ಟಕ್ಕೂ ನಡೆದದ್ದೇನು? ಆಕೆಯ ಮೇಲೇಕೆ ನಿಷೇಧ? ನಿಷೇಧಕ್ಕೆ ವಿರೋಧವೇಕೆ? ಅದರ ಹಿಂದಿದೆಯಾ ಸೇಡು?

ಆಟಗಾರರನ್ನು ತಡೆದರೇ ಜ್ವಾಲಾ?
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಕಳೆದ ಆಗಷ್ಟ್ 25ರಂದು ಬಂಗಾ ಬೀಟ್ಸ್ ಮತ್ತು ಡೆಲ್ಲಿ ಸ್ಮ್ಯಾಷರ್ಸ್ ನಡುವೆ ನಡೆದ ಪಂದ್ಯದಲ್ಲಿ, ಭಾಗವಹಿಸದಂತೆ ಡೆಲ್ಲಿ ಆಟಗಾರರನ್ನು ತಡೆಯಲು ಜ್ವಾಲಾ ಯತ್ನಿಸಿದರು ಎನ್ನಲಾಗಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಬಂಗಾ ಬೀಟ್ಸ್ ತಂಡದ ಪರ ಭಾಗವಹಿಸಬೇಕಿದ್ದ ಹಾಂಕಾಂಗ್‌ನ ಹು ಯೂನ್ ಗಾಯಗೊಂಡಿದ್ದರಿಂದ ಅವರ ಬದಲಾಗಿ ಡೆನ್ಮಾರ್ಕ್‌ನ ಜಾನ್ ಜರ್ಗನ್ಸನ್ ಅವರನ್ನು ಆಡಿಸಲು ಬೆಂಗಳೂರು ತೀರ್ಮಾನಿಸಿತ್ತು. ಆದರೆ, ಇದನ್ನು ವಿರೋಧಿಸಿದ್ದ ಡೆಲ್ಲಿ, ಪಂದ್ಯದಿಂದ ನಿರ್ಗಮಿಸುವ ಬೆದರಿಕೆಯೊಡ್ಡಿತ್ತು. ನಂತರ ತಂಡದಲ್ಲೇ ಇದ್ದ ಅರವಿಂದ್ ಭಟ್ ಅವರಿಗೆ ಅವಕಾಶ ನೀಡಲಾಯಿತು. ವಿವಾದದಿಂದ ಪಂದ್ಯ ಅರ್ಧ ಗಂಟೆ ವಿಳಂಬವಾಗಿ ನಡೆದಿತ್ತು.
ಆದರೆ, 'ಆ ಪಂದ್ಯದಲ್ಲಿ ಭಾಗವಹಿಸದಿರಲು ಆಟಗಾರರು ತೀರ್ಮಾನಿಸಿದ್ದು ನನ್ನ ವೈಯಕ್ತಿಕ ವಿಚಾರವಲ್ಲ. ಅದು ತಂಡಕ್ಕೆ ಸಂಬಂಧಿಸಿದ ವಿಚಾರ. ತಂಡದ ಮಾಲೀಕರು ಹೇಳಿದಂತೆ ತಂಡದ ಐಕಾನ್ ಆಟಗಾರ್ತಿಯಾಗಿ ನನ್ನ ಕಾರ್ಯ ನಾನು ನಿಭಾಯಿಸಿದ್ದೇನೆ' ಎನ್ನುತ್ತಿದ್ದಾರೆ ಜ್ವಾಲಾ ಗುಟ್ಟಾ.

ನಿಷೇಧವೇಕೆ?
ಬಂಗಾ ಬೀಟ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಜಾರ್ಗನ್ಸನ್ ಅವರನ್ನು ಕಣಕ್ಕಿಳಿಸಿದರೆ, ನಾವು ಆಡುವುದಿಲ್ಲ ಎಂಬ ಆಟಗಾರರ ಅಭಿಪ್ರಾಯದ ಹಿಂದೆ ಜ್ವಾಲಾ ಕೈವಾಡವಿದೆ. ಹೀಗಾಗಿ ಆಕೆಗೆ ನಾವು ಆಜೀವ ನಿಷೇಧ ಹೇರಲು ಶಿಫಾರಸು ಮಾಡಿದ್ದೇವೆ ಎನ್ನುತ್ತಿದೆ ಬಿಐಎ. ಈ ಕುರಿತು ಜ್ವಾಲಾಗೆ ನೋಟಿಸ್ ಜಾರಿ ಮಾಡಿರುವ ಸಂಸ್ಥೆ, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ನಿಷೇಧ ಎದುರಿಸಬೇಕು ಎನ್ನುತ್ತಿದೆ.

ವಿರೋಧವೇಕೆ?
ಬಂಗಾ ಬೀಟ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಆಟಗಾರರನ್ನು ಭಾಗವಹಿಸದಂತೆ ತಡೆದ ವಿಚಾರ ಇಡೀ ತಂಡಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಜ್ವಾಲಾ ಒಬ್ಬರ ಮೇಲೇ ನಿಷೇಧ ಹೇರುವುದು ಸರಿಯಲ್ಲ ಎಂಬುದು ಮಾಜಿ ಬ್ಯಾಡ್ಮಿಂಟನ್ ತಾರೆಗಳ ಅಭಿಪ್ರಾಯವಾಗಿದೆ.
ಅಷ್ಟಕ್ಕೂ ಜ್ವಾಲಾ ಮಾಡಿರುವುದು ಆಜೀವ ನಿಷೇಧ ಹೇರುವಂತಹ ತಪ್ಪೂ ಅಲ್ಲ. ಅದನ್ನು ತಪ್ಪು ಎಂದು ಪರಿಗಣಿಸಿದರೂ, 6 ತಿಂಗಳು ಆಡದಂತೆ ನಿಷೇಧ ಹೇರಿದರೂ ದೊಡ್ಡ ಶಿಕ್ಷೆಯೇ ಸರಿ ಎಂದು ಹಲವರು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸೇಡಿನ ಪ್ರತೀಕವೇ?
ಇಷ್ಟೆಲ್ಲ ನಡೆಯುತ್ತಿದ್ದರೆ, ಬ್ಯಾಡ್ಮಿಂಟನ್ ಸಂಸ್ಥೆಯೊಳಗಿನ ಮೂಲಗಳು ಹೇಳುವುದೇ ಬೇರೆ. ಜ್ವಾಲಾ ಅವರು ಈ ಹಿಂದೆ ಬಿಐಎ ವಿರುದ್ಧ ನಡೆದುಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಟಾರ್ಗೆಟ್ ಮಾಡಲಾಗಿದೆಯಂತೆ. ಅಲ್ಲದೆ, ಕರ್ನಾಟಕದ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರೊಂದಿಗೆ ಡಬಲ್ಸ್‌ನಲ್ಲಿ ಮತ್ತೆ ಜತೆಯಾಗಿ ಆಡುವುದು ಕೆಲವರಿಗೆ ಆಗಿ ಬರುತ್ತಿಲ್ಲವಂತೆ. ಹೀಗಾಗಿಯೇ ಜ್ವಾಲಾಗೆ ಆಜೀವ ನಿಷೇಧದಂತಹ ಬೆದರಿಕೆ ಹಾಕಲಾಗುತ್ತಿದೆ ಎನ್ನಲಾಗಿದೆ. ಆದರೆ, ತನ್ನ ತೀರ್ಮಾನದ ಕುರಿತು ಮರುಪರಿಶೀಲಿಸಲು ಬಿಐಎ ಹೊಸ ಸಮಿತಿಯನ್ನು ರಚಿಸಿದೆ. ಅಲ್ಲದೆ ಜ್ವಾಲಾ ಸಹ ಕೋರ್ಟ್ ಮೆಟ್ಟಿಲೇರಿದ್ದಾಳೆ. ಹೀಗಾಗಿ ವಿವಾದ ಭವಿಷ್ಯದಲ್ಲಿ ಯಾವ ಸ್ವರೂಪ ಪಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕು.

- ಸಿದ್ದಲಿಂಗೇಶ್ ಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement