ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ನೇಪಥ್ಯಕ್ಕೆ ದಿಗ್ಗಜರು

Lingaraj Badiger
Updated On : 11 Oct 2013, 6:54 am

ನೆಚ್ಚಿನ ಕ್ರೀಡಾ ತಾರೆಯೊಬ್ಬರು ತಂಡವೊಂದನ್ನು ಪ್ರತಿನಿಧಿಸಿದಾಗ ಆ ತಂಡವನ್ನು ನಾವು ಸುಲಭವಾಗಿ ಬೆಂಬಲಿಸಬಹುದು. ಘೋಷಣೆಗಳ ಮೂಲಕ ಎದುರಾಳಿ ತಂಡದ ವಿಶ್ವಾಸವನ್ನೇ ಕುಗ್ಗಿಸಬಹುದು. ಆದರೆ, ಮಹತ್ವದ ಪಂದ್ಯವೊಂದರಲ್ಲಿ ಉಭಯ ತಂಡಗಳಲ್ಲೂ ನಮ್ಮ ನೆಚ್ಚಿನ ತಾರೆಗಳಿದ್ದಾಗ! ಅಲ್ಲದೆ ಆ ಪಂದ್ಯವೇ, ಆ ಇಬ್ಬರೂ ಕ್ರೀಡಾ ತಾರೆಗಳಿಗೆ ಕೊನೆಯ ಪಂದ್ಯವಾದಾಗ. ಅಬ್ಬಾ! ಅಭಿಮಾನಿಗಳನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಇದಕ್ಕಿಂತ ದೊಡ್ಡ ಸಂದರ್ಭ ಮತ್ತೆಂದೂ ಬಂದೊದಗಲು ಸಾಧ್ಯವಿಲ್ಲ ಎನ್ನಬಹುದು.

ಅಂತಹ ಸಂದರ್ಭಕ್ಕೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯ ಫೈನಲ್ ಪಂದ್ಯ ಸಾಕ್ಷಿಯಾಗಿತ್ತು. ಅಭಿಮಾನಿಗಳನ್ನು ಈ ರೀತಿ ಇಕ್ಕಟ್ಟಿಗೆ ಸಿಲುಕಿಸಿದವರು ಕ್ರಿಕೆಟ್ ಕಣ್ಮಿಣಿಗಳಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್.

ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಸಚಿನ್ ತೆಂಡೂಲ್ಕರ್ ಮತ್ತು ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ರಾಹುಲ್ ದ್ರಾವಿಡ್ ಅವರು ಟಿ20 ಮಾದರಿಯಲ್ಲಿ ತಮ್ಮ ಕೊನೆಯ ಪಂದ್ಯ ಆಡಲು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅಂಗಣಕ್ಕಿಳಿದಿದ್ದರು.

ಹೀಗಾಗಿ ಸುಮಾರು 2 ದಶಕಗಳಿಂದ ತಾವು ಆರಾಧಿಸಿದ್ದ ಇಬ್ಬರು ಮಹಾನ್ ಆಟಗಾರರನ್ನೂ ಪಂದ್ಯದಲ್ಲಿ ಸಮಾನವಾಗಿ ಬೆಂಬಲಿಸಿ, ಸಮಾನ ಗೌರವ ನೀಡಿದರು. ಈ ಗೌರವದೊಂದಿಗೆ ಸಚಿನ್ ಮತ್ತು ದ್ರಾವಿಡ್ ಅವರು ತಮ್ಮ ಟಿ20 ಮಾದರಿ ಕ್ರಿಕೆಟ್ ಪರ್ವವನ್ನು ಮುಕ್ತಾಯಗೊಳಿಸಿದರು. ಪಂದ್ಯದಲ್ಲಿ ಇಬ್ಬರೂ ಆಟಗಾರರು ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಸೇರಿದರೂ, ತಮ್ಮ ಅಭಿಮಾನಿಗಳಿಂದ ಸಂಪೂರ್ಣ ಗೌರವಕ್ಕೆ ಪಾತ್ರರಾದರು.
ಅಭಿಮಾನಿಗಳ ಆತ್ಮಾಭಿಮಾನ ಮತ್ತು ಗೌರವಕ್ಕೆ ಪಾತ್ರರಾದ ಗ್ರೇಟ್ ಬ್ಯಾಟ್ಸ್‌ಮನ್‌ಗಳು 40ರ ಅಂಚಲ್ಲೂ ತುಣುಕು ಕ್ರಿಕೆಟ್‌ನಲ್ಲಿ ಯುವಕರಂತೆ ಕಣಿದು ಕುಪ್ಪಳಿಸುವುದನ್ನು ಮರೆಯಲು ಅಭಿಮಾನಿಗಳಿಂದಲೂ ಸಾಧ್ಯವಾಗಲಿಲ್ಲ. ಸಚಿನ್ ಮತ್ತು ದ್ರಾವಿಡ್ ಸಹ ಮನಸ್ಸಿಲ್ಲದ ಮನಸ್ಸಿಂದ ಜನಪ್ರಿಯ ತುಣುಕು ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ದ್ರಾವಿಡ್ ಅವರು ಇನ್ನು ಪ್ಯಾಡ್ ಕಟ್ಟುವುದಿಲ್ಲವಾದರೆ, ಸಚಿನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ವೇತವರ್ಣದ ಉಡುಪಿನೊಂದಿಗೆ ಮಾತ್ರ ಅಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಲ್ಲಕ್ಕಿಂತ ಮಹತ್ವ ಪಡೆದುಕೊಂಡಿದ್ದು, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 50,000 ರನ್ ಪೂರೈಸಿದ್ದು. ಮುಂಬೈ ಇಂಡಿಯನ್ಸ್ ಮತ್ತು ಟ್ರಿನಿಡಾಡ್ ಟೊಬೇಗೂ ನಡುವೆ ನಡೆದ ಚಾಂಪಿಯನ್ಸ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಸಚಿನ್ ಈ ಸಾಧನೆ ಮಾಡಿದರು.

ಇಂತಹ ಮಹತ್ವದ ಸಂದರ್ಭದಲ್ಲಿ ಇಬ್ಬರೂ ದಿಗ್ಗಜರ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಗಳಿಸಿದ ರನ್‌ಗಳ ಪುಟ್ಟ ವಿವರ ಇಲ್ಲಿದೆ. ಕ್ರಿಕೆಟ್ ಅಭಿಮಾನಿಗಳ ಚಿತ್ತ ಸಚಿನ್ ಅವರ 200ನೇ ಟೆಸ್ಟ್ ಪಂದ್ಯದ ಮೇಲಿದ್ದರೆ, ಅದಕ್ಕೂ ಮುನ್ನ ಸಚಿನ್ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಟ್ರಿನಿಡಾಡ್ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ 50,000 ರನ್ ಪೂರೈಸುವ ಮೂಲಕ ದೇಶೀ ಕ್ರಿಕೆಟ್‌ನಲ್ಲಿ 50,000 ರನ್ ಪೂರೈಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾದರು. ಈ ಪಂದ್ಯದಲ್ಲಿ ಸಚಿನ್ ದಾಖಲೆ ನಿರ್ಮಿಸಲು ಕೇವಲ 26 ರನ್‌ಗಳ ಅಗತ್ಯವಿತ್ತು. ಆದರೆ, ಆ ಪಂದ್ಯದಲ್ಲಿ 31 ಎಸೆತಗಳಲ್ಲಿ 35 ರನ್ ಗಳಿಸಿ ದಾಖಲೆ ನಿರ್ಮಿಸಿದ ಸಚಿನ್‌ಗೆ, ತಾವು ದಾಖಲೆಯ ಹೊಸ್ತಿಲಲ್ಲಿ ಇರುವುದೇ ಗೊತ್ತಿರಲಿಲ್ಲವಂತೆ!

ಸಚಿನ್ ಆಡಿದ ಪಂದ್ಯಗಳು ಮತ್ತು ಗಳಿಸಿದ ರನ್‌ಗಳ ವಿವರ
198 ಟೆಸ್ಟ್ ಪಂದ್ಯಗಳು
ಗಳಿಸಿದ ರನ್ 15,837
463 ಏಕದಿನ ಪಂದ್ಯಗಳು
ಗಳಿಸಿದ ರನ್ 18,426
307 ಪ್ರಥಮ ದರ್ಜೆ ಪಂದ್ಯಗಳು
ಗಳಿಸಿದ ರನ್ 25,228
551 ಲಿಸ್ಟ್ ಎ ಪಂದ್ಯಗಳು
ಗಳಿಸಿದ ರನ್ 21,999
96 ಟಿ20 ಪಂದ್ಯಗಳು
ಗಳಿಸಿದ ರನ್ 2797

ಇನ್ನು ಗೋಡೆ ಖ್ಯಾತಿ ರಾಹುಲ್ ದ್ರಾವಿಡ್ ಅವರು ಗಳಿಸಿದ ರನ್ ವಿವರ ಇಲ್ಲಿದೆ.
164 ಟೆಸ್ಟ್ ಪಂದ್ಯಗಳು
ಗಳಿಸಿದ ರನ್ 13288
344 ಏಕದಿನ ಪಂದ್ಯಗಳು
ಗಳಿಸಿದ ರನ್ 10889
298 ಪ್ರಥಮ ದರ್ಜೆ ಪಂದ್ಯಗಳು
ಗಳಿಸಿದ ರನ್ 23794
449 ಲಿಸ್ಟ್ ಎ ಪಂದ್ಯಗಳು
ಗಳಿಸಿದ ರನ್ 15271
108 ಟಿ20 ಪಂದ್ಯಗಳು
ಗಳಿಸಿದ ರನ್ 2585

- ಪಿ.ಎಂ. ಆಡೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement