ಧರ್ಮಶಾಲಾ: ದೇಶದಲ್ಲಿ ಒಟ್ಟು ಐದು ಪ್ರಾದೇಶಿಕ ಕ್ರಿಕೆಟ್ ಅಕಾಡೆಮಿಗಳನ್ನು ತೆರೆಯಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಯೋಜಿಸುತ್ತಿದೆ ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ (ಎಚ್‌ಪಿಸಿಎ) ಅಧ್ಯಕ್ಷ ಅನುರಾಗ್ ಠಾಕೂರ್ ಭಾನುವಾರ ಹೇಳಿದ್ದಾರೆ. ಉತ್ತರ ವಲಯಕ್ಕೆ ಸೇರಿರುವ ಧರ್ಮಶಾಲಾದಲ್ಲಿ ಒಂದು ಅಕಾಡೆಮಿಯನ್ನು ಸ್ಥಾಪಿಸುವಂತೆ ಬಿಸಿಸಿಐಯನ್ನು ಎಚ್‌ಪಿಸಿಎ ಒತ್ತಾಯಿಸಿದೆ ಎಂದು ಅವರು ಹೇಳಿದರು. ಧರ್ಮಶಾಲಾದಲ್ಲಿ ಅಕಾಡೆಮಿ ಸ್ಥಾಪಿಸಲು ಬೇಕಾದ ಅಗತ್ಯಗಳನ್ನು ಬಿಸಿಸಿಐ ಪೂರೈಸಲಿದೆ ಎಂಬ ವಿಶ್ವಾಸವನ್ನೂ ಠಾಕೂರ್ ವ್ಯಕ್ತಪಡಿಸಿದರು. 'ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಅವರು ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ, ಬಿಸಿಸಿಐ ಸ್ಥಾಪಿಸಲಿರುವ ಐದು ಅಕಾಡೆಮಿಗಳಲ್ಲಿ ಒಂದನ್ನು ಧರ್ಮಶಾಲಾಕ್ಕೆ ನೀಡುವಂತೆ ಬಿಸಿಸಿಐಗೆ ನಾವು ಮನವಿ ಮಾಡಿಕೊಂಡಿದ್ದೇವೆ' ಎಂದರು.